Uncategorized

ಹುಬ್ಬಳ್ಳಿ ಚನ್ನಮ್ಮ ವೃತ್ತ ಪ್ಲೈ ಓವರ್ ಕಾಮಗಾರಿ: ಸಾರ್ವಜನಿಕರ ಸಲಹೆ ಆಧರಿಸಿ ವರದಿ ಸಿದ್ಧಪಡಿಸಿದ ಸಮಿತಿ

ಧಾರವಾಡ: ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ವಾಹನ‌ ದಟ್ಟಣೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಫ್ಲೈಓವರ್ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಇದರ ಕುರಿತು ಸಾರ್ವಜನಿಕರು ಹಾಗೂ ವರ್ತಕರ ಸಲಹೆಗಳನ್ನು ಪಡೆಯಲು ಸಮಿತಿಯನ್ನು ರಚನೆ ಮಾಡಲಾಗಿತ್ತು. ಈಗ ಆ ಸಮಿತಿಯು ಸಾರ್ವಜನಿಕರ ಸಲಹೆಗಳನ್ನಾಧರಿಸಿ ವರದಿಯನ್ನು ಸಿದ್ಧಪಡಿಸಿದೆ.

ಜಿಲ್ಲಾಧಿಕಾರಿಗಳು ಸೇರಿದಂತೆ ಶಾಸಕರು, ಹಿರಿಯ ಅಧಿಕಾರಿಗಳು ಹಾಗೂ ತಜ್ಞರನ್ನೊಳಗೊಂಡ 13 ಸದಸ್ಯರ ಸಮಿತಿಯು ಈ ವರದಿಯನ್ನು ಸಿದ್ಧಪಡಿಸಿದ್ದು, ಈ ವರದಿಯನ್ನು ಸಮಿತಿಯು ಶೀಘ್ರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ. ಬಳಿಕ ಸಾರ್ವಜನಿಕರಿಗೂ ವರದಿಯ ವಿವರಗಳನ್ನು ಸಮಿತಿಯು ತಿಳಿಸಲಿದೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಅಧ್ಯಕ್ಷತೆಯಲ್ಲಿ ಸೆ.25 ರಂದು ಹುಬ್ಬಳ್ಳಿಯಲ್ಲಿ ನಡೆದ ಸಭೆಯ ನಿರ್ದೇಶನದಂತೆ ಶಾಸಕ ಅರವಿಂದ ಬೆಲ್ಲದ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ನಗರ ಪೊಲೀಸ್ ಆಯುಕ್ತರು, ಮಹಾನಗರ ಪಾಲಿಕೆ ಆಯುಕ್ತರು, ಹೆಚ್‌ಡಿಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕರು, ಐಐಟಿ, ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು, ಹೆಸರಾಂತ ನಿರ್ಮಾಣ ಸಂಸ್ಥೆಗಳ ತಜ್ಞರು, ಕೇಂದ್ರ ಭೂ ಸಾರಿಗೆ ಮಂತ್ರಾಲಯದ ಪ್ರಾದೇಶಿಕ ಮುಖ್ಯ ಅಭಿಯಂತರರು ಸೇರಿದಂತೆ 13 ಜನರ ಸಮಿತಿಯನ್ನು ಅಕ್ಟೋಬರ್ 4ರಂದು ರಚಿಸಲಾಗಿತ್ತು.

ಈ ಸಮಿತಿಯು ಎರಡು ಬಾರಿ ಸಾರ್ವಜನಿಕ ಭಾಗಿದಾರರ ಸಭೆಗಳು ಮತ್ತು ಮೂರು ಬಾರಿ ಸಮಿತಿ ಸದಸ್ಯರ ಸಭೆಗಳು ಸೇರಿ ಒಟ್ಟು ಐದು ಸಭೆಗಳನ್ನು ನಡೆಸಿ ವಿಸ್ತೃತವಾಗಿ ಚರ್ಚಿಸಿದೆ. ಸಾರ್ವಜನಿಕರು, ವರ್ತಕರು ನೀಡಿದ ಸಲಹೆಗಳನ್ನು ಪಡೆದು ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರಗಳನ್ನು ಸಮಿತಿಯು ಸೂಚಿಸಿ ವರದಿ ಸಿದ್ಧಪಡಿಸಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್ ವಿನ್ಯಾಸ ಮತ್ತು ತಾಂತ್ರಿಕ ಫಿಸಿಬಿಲಿಟಿ ಪರಿಶೀಲಿಸಿದ್ದಾರೆ ಎಂದು‌ ಹೇಳಲಾಗುತ್ತಿದೆ.

Related Articles

Leave a Reply

Your email address will not be published.

Back to top button