ಸೇತುವೆ ಕುಸಿದು ಸಿಲುಕಿದ ಆಟೋ : ನೂರು ರೂ ಬಾಡಿಗೆಗೆ ತೆರಳಿ 6 ಸಾವಿರ ದಂಡ ತೆತ್ತ ಆಟೋ ಮಾಲೀಕ
ಚಿಕ್ಕಮಗಳೂರು: ಭಾರೀ ಮಳೆಗೆ ನಗರದ ಮಧುವನ ಬಡಾವಣೆ ಸಮೀಪ ರಾಜ್ಯ ಮುಕ್ತ ವಿವಿ ಪ್ರಾದೇಶಿಕ ಕೇಂದ್ರದ ಮುಖ್ಯದ್ವಾರದ ಬಳಿ ಸೇತುವೆ ಕುಸಿತಗೊಂಡು ಆಟೋರಿಕ್ಷಾ ಚಾಲಕರೊಬ್ಬರು ತೀವ್ರ ಪರದಾಡಬೇಕಾಯಿತು.
ಕಳಪೆ ಕಾಮಗಾರಿಯಿಂದ ನಿರ್ಮಿಸಿದ ಸೇತುವೆ ಕುಸಿದ ಪರಿಣಾಮ ಕಾಲೇಜಿನಲ್ಲಿ ಪರೀಕ್ಷೆ ಬರೆಯುತ್ತಿದ್ದ 20 ವಿದ್ಯಾರ್ಥಿಗಳನ್ನು ಅಗ್ನಿಶಾಮಕ ಸಿಬ್ಬಂದಿಗಳು ಸುರಕ್ಷಿತವಾಗಿ ರಸ್ತೆ ದಾಟಿಸಿದ್ದರು.
ಪರೀಕ್ಷೆ ಬರೆಯಲು ವಿದ್ಯಾರ್ಥಿನಿಯರನ್ನು ಕರೆತಂದಿದ್ದ ಆಟೋವೊಂದು ಸೇತುವೆ ಕುಸಿತಗೊಂಡ ಸ್ಥಳದಲ್ಲಿ ಬೇರೆ ರಸ್ತೆಯಿಲ್ಲದೆ ಹೊರಬರಲಾಗದೆ ಸಿಲುಕಿಕೊಂಡಿತ್ತು. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದರೂ ಅಧಿಕಾರಿಗಳು ನೆರವಾಗಲಿಲ್ಲ. ಕೊನೆಗೆ ಆಟೋ ಮಾಲೀಕ ವಿನೋದ್ ರೂ.6 ಸಾವಿರ ಖರ್ಚು ಮಾಡಿ ಕ್ರೇನ್ ತರಿಸಿ ಆಟೋವನ್ನು ದಡಕ್ಕೆ ಸೇರಿಸಿಕೊಂಡರು.
ಕಳಪೆ ಸೇತುವೆ ನಿರ್ಮಿಸಿ ಅಧಿಕಾರಿಗಳು ಮಾಡಿದ ತಪ್ಪಿಗೆ ಆಟೋ ಮಾಲೀಕ ದಂಡ ತೆರುವಂತಾಯಿತು. 100 ರೂ ಬಾಡಿಗೆಗೆ ತೆರಳಿದ್ದ ಆಟೋ ಮಾಲೀಕ 6 ಸಾವಿರ ದಂಡ ತೆತ್ತಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.