ಧಾರವಾಡ ತಡಕೋಡ ಗ್ರಾಮ ಪಂ. ಸದಸ್ಯರ ಧರಣಿ: ಪಂಚಾಯತಿ ಪಿಡಿಓ, ಸಿಬ್ಬಂದಿ ಬದಲಾವಣೆಗೆ ಪಟ್ಟು
ಧಾರವಾಡ: ಗ್ರಾಮದ ಅಭಿವೃದ್ಧಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ಸಹಕಾರ ನೀಡುತ್ತಿಲ್ಲ ಹಾಗೂ ಸರ್ಕಾರಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುತ್ತಿಲ್ಲ ಎಂದು ಆರೋಪಿಸಿ, ಧಾರವಾಡ ತಾಲೂಕಿನ ತಡಕೋಡ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಗ್ರಾಮಸ್ಥರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ಸುಮಾರು ಹತ್ತಕ್ಕೂ ಹೆಚ್ಚು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರು ಜಂಟಿಯಾಗಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಧರಣಿ ನಡೆಸುತ್ತಿದ್ದು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಅಹೋರಾತ್ರಿ ಧರಣಿ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಂಚಾಯತಿ ಸಿಬ್ಬಂದಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಸರಿಯಾದ ಸಮಯಕ್ಕೆ ಗ್ರಾಮಸ್ಥರಿಗೆ ತಲುಪಿಸುತ್ತಿಲ್ಲ. ಇದರ ಕುರಿತು ಹಲವು ಬಾರಿ ಪಿಡಿಓ ಅಧಿಕಾರಿಗಳ ಗಮನಕ್ಕೆ ಸದಸ್ಯರು ತಂದರು ಕೂಡಾ ಯಾವುದೇ ಕ್ರಮವನ್ನು ಸಿಬ್ಬಂದಿಗಳ ಮೇಲೆ ಕೈಗೊಳ್ಳುತ್ತಿಲ್ಲ. ಇದರ ಕುರಿತು ಸದಸ್ಯರು ಲಿಖಿತವಾಗಿಯು ಮನವಿ ನೀಡಿದ್ದರು ನಿರ್ಲಕ್ಷ್ಯ ತೋರಲಾಗುತ್ತಿದೆ. ಅಲ್ಲದೆ ಪಿಡಿಓ ಅಧಿಕಾರಿಗಳು ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡುತ್ತಿಲ್ಲ ಎಂದು ಪಂಚಾಯತಿ ಸದಸ್ಯರು ಸೇರಿದಂತೆ ಗ್ರಾಮಸ್ಥರ ಆರೋಪಿಸುತ್ತಿದ್ದಾರೆ.
ತಾಲ್ಲೂಕು ಪಂಚಾಯತಿ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಸಿಇಓ ಅಧಿಕಾರಿಗಳು ಪಂಚಾಯತಿಗೆ ಭೇಟಿ ನೀಡಬೇಕು. ಕೂಡಲೇ ತಡಕೋಡ್ ಗ್ರಾಮ ಪಂಚಾಯತಿ ಪಿಡಿಓ ಅಧಿಕಾರಿ ಸೇರಿದಂತೆ ಸಿಬ್ಬಂದಿಗಳನ್ನು ಬದಲಾವಣೆ ಮಾಡಬೇಕು ಎಂದು ಅಗ್ರಹಿಸುತ್ತಿದ್ದಾರೆ. ಅಲ್ಲದೆ ಎಲ್ಲಿಯವರೆಗೆ ನಮ್ಮ ಬೇಡಿಕೆಗಳು ಈಡೇರುವುದಿಲ್ಲ, ಅಲ್ಲಿಯವರೆಗೆ ನಮ್ಮ ಧರಣಿ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.