ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾದ ಮಡಿವಾಳರ ಮಾಚಿದೇವ ನಿಗಮ: ವಿಜಯಲಕ್ಷ್ಮೀ
ಚಿಕ್ಕಮಗಳೂರು: ಸರ್ಕಾರ ಮಡಿವಾಳರ ಮಾಚಿದೇವ ನಿಗಮವನ್ನು ಸ್ಥಾಪಿಸಿದೆ. ಆದರೆ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡದೆ ನಿರ್ಲಕ್ಷ್ಯ ವಹಿಸಿದ್ದು, ಇದೊಂದು ರೀತಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ನಿಗಮವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಡಿವಾಳರ ಮಹಿಳಾ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ ಆಂಜನಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಬರುವ ಅನುದಾನವನ್ನು ನೀಡದೆ ಹಿಂದುಳಿದವರಲ್ಲೇ ಅತೀ ಹಿಂದುಳಿದ ಮಡಿವಾಳರಿಗೆ ತುಂಬಾ ಅನ್ಯಾಯ ಮಾಡಿದ್ದಾರೆ. ಅಧ್ಯಕ್ಷ ಸದಸ್ಯರನ್ನು ನೇಮಕ ಮಾಡಲು ಸಾಧ್ಯವಾಗದಿದ್ದರೆ ನಿಗಮವನ್ನೇಕೆ ಸ್ಥಾಪಿಸಿದ್ದೀರಿ? ಕೂಡಲೇ ರದ್ದು ಮಾಡಿರಿ ಎಂದರು.
ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಡಾ.ಅನ್ನಪೂರ್ಣಮ್ಮ ನೀಡಿದ ವರದಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೊಳೆಯುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂಬ ಬೇಡಿಕೆಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕು ಎಂದು ಆಗ್ರಹಿಸಿದರು.