Uncategorized

ಕೋಟ್ಯಂತರ ರೂ. ಬೆಲೆ ಬಾಳುವ ಕಾರು ಪಡೆದು ಮೋಸ ಮಾಡಿದ್ದ ವಂಚಕ ಬಂಧನ..!

ದಾವಣಗೆರೆ: ತಿಂಗಳ ಬಾಡಿಗೆಗೆ ಕಾರು ಬಿಡುವುದಾಗಿ ಹೇಳಿ ಮಾಲೀಕರಿಂದ ಪಡೆದು ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧಿಸಿರುವ ಕೆಟಿಜೆ ನಗರ ಪೊಲೀಸರು ಬರೋಬ್ಬರಿ 15ಕ್ಕೂ ಹೆಚ್ಚು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಎರಡನೇ ಆರೋಪಿ ಅರ್ಜುನ್ ಎಂಬಾತ ಈಗ ಸಿಕ್ಕಿ ಬಿದ್ದಿದ್ದು, ಮತ್ತೊಬ್ಬ ಆರೋಪಿ ಅರ್ಜುನ್ ನಿಟುವಳ್ಳಿ ತಲೆಮರೆಸಿಕೊಂಡಿದ್ದಾನೆ. ಈತನ ಜೊತೆಗೆ ಮತ್ತೊಬ್ಬನು ಪರಾರಿಯಾಗಿದ್ದು, ಈತನ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ.

ಸದ್ಯಕ್ಕೆ 15ಕ್ಕೂ ಹೆಚ್ಚು ಕಾರುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಇವುಗಳ ಮೊತ್ತ ಒಂದು ಕೋಟಿ ಆರು ಲಕ್ಷ ರೂಪಾಯಿ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಶಪಡಿಸಿಕೊಂಡ ಕಾರುಗಳು:

ಇದುವರೆಗೆ 15 ವಿವಿಧ ಕಂಪೆನಿಯ ಕಾರುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, 5 ಇನೊವಾ, ಒಂದು ಸ್ವಿಫ್ಟ್, 2 ಸ್ವಿಫ್ಟ್ ಡಿಸೈರ್, ಬ್ರೀಜಾ, ಜೆಸ್ಟ್, 2 ಈಟಿಯಸ್, ಫೋರ್ಡ್ ಫಿಗೊ, ಟಿಯುವಿ 300 ಕಾರು ವಶಪಡಿಸಿಕೊಂಡಿದ್ದಾರೆ. ಇವುಗಳ ಮೌಲ್ಯ ಬರೋಬ್ಬರಿ 1 ಕೋಟಿ ಆರು ಲಕ್ಷ ರೂಪಾಯಿ ಆಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.

ದಾವಣಗೆರೆ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ನರಸಿಂಹ ತಾಮ್ರಧ್ವಜ ಮತ್ತು ಕೆಟಿಜೆ ನಗರ ವೃತ್ತ ನಿರೀಕ್ಷಕ ಹೆಚ್. ಗುರುಬಸವರಾಜ್ ಅವರ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯ ಪಿಎಸ್ಐ ಪ್ರಭು ಡಿ. ಕೆಳಗಿನಮನೆ, ಅಬ್ದುಲ್ ಖಾದರ್ ಜಿಲಾನಿ ಹಾಗೂ ಸಿಬ್ಬಂದಿಯಾದ ಶಂಕರ್ ಜಾಧವ್, ಪ್ರಕಾಶ, ಷಣ್ಮುಖ, ಎಂ. ಮಂಜಪ್ಪ, ಗಿರೀಶ್ ಗೌಡ, ರಾಘವೇಂದ್ರ, ಶಾಂತಕುಮಾರ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

ವಶಪಡಿಸಿಕೊಳ್ಳಬೇಕಿರುವ ಕಾರುಗಳು:

2 ಈಟಿಯಸ್, ರೆನಲ್ಟ್ ಲೊಗನ್, ಸ್ವಿಫ್ಟ್ ಡಿಸೈರ್, ಸ್ವಿಫ್ಟ್ ವಿಡಿಐ, ಸುಜುಕಿ ಎಸ್ ಎಕ್ಸ್ 4 ಹಾಗೂ ಸೀಜ್ ಅವರ ಕಾರುಗಳನ್ನು ವಶಪಡಿಸಿಕೊಳ್ಳಬೇಕಿದೆ. ಇವುಗಳ ಮೌಲ್ಯ ಒಟ್ಟು 38 ಲಕ್ಷ ರೂಪಾಯಿ ಆಗಿದ್ದು, ಅರ್ಜುನ್ ನಿಟುವಳ್ಳಿ ಬಂಧನದ ಬಳಿಕ ಈ ವಾಹನಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಎರಡನೇ ಆರೋಪಿ ದಾವಣಗೆರೆಯ ಅರ್ಜುನ್ ಎಂಬಾತ ಪೊಲೀಸರಿಗೆ ಸೆರೆ ಸಿಕ್ಕಿರುವ ವಂಚಕ. ಈತನಿಂದ ಇದುವರೆಗೆ 15 ಕ್ಕೂ ಹೆಚ್ಚು ಕಾರುಗಳನ್ನು ವಶಪಡಿಸಿಕೊಂಡಿದ್ದು, ಬಂಧಿತನಿಂದ ಬರೋಬ್ಬರಿ 1. 6 ಕೋಟಿ ರೂಪಾಯಿ ಮೌಲ್ಯದ ವಿವಿಧ ಕಂಪೆನಿಯ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಈತನ ಜೊತೆಗೆ ಕಾರು ಪಡೆದು ವಂಚಿಸಿದ್ದ ಮತ್ತಿಬ್ಬರು ಪರಾರಿಯಾಗಿದ್ದು ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಇನ್ನು ಪ್ರಕರಣದ ಮೊದಲ ಆರೋಪಿ ನಿಟುವಳ್ಳಿಯ ಅರ್ಜುನ್ ತಲೆಮರೆಸಿಕೊಂಡಿದ್ದಾನೆ.

ಬೆಳಕಿಗೆ ಬಂದಿದ್ದಾದರೂ ಹೇಗೆ…?

ಅಕ್ಟೋಬರ್ 26ರಂದು ಕಾಂತರಾಜ ಎಂಬುವವರು ಪೊಲೀಸ್ ಠಾಣೆಗೆ ಬಂದು ತನ್ನ ಕೆಎ-17 ಜೆಡ್ 9330 ನಂಬರ್ ನ ಬಿಳಿ ಬಣ್ಣದ ಸ್ವಿಫ್ಟ್ ಕಾರನ್ನು ಅರ್ಜುನ ಮತ್ತು ಇತರರು ಕಂಪೆನಿಗೆ ಬಾಡಿಗೆ ಬಿಡುವ ನೆಪದಲ್ಲಿ ತೆಗೆದುಕೊಂಡು ಹೋಗಿದ್ದರು. ಕಾರು ಹಾಗೂ ಬಾಡಿಗೆ ಹಣವನ್ನು ನೀಡದೇ ಮೋಸ ಮಾಡುವ ಉದ್ದೇಶದಿಂದ ಬೇರೆಯವರಿಗೆ ಒತ್ತೆ ಇಟ್ಟು ಹಣ ಪಡೆದಿರುವುದು ಗಮನಕ್ಕೆ ಬಂದಿದೆ. ಆರೋಪಿಗಳು ಇದೇ ರೀತಿಯಲ್ಲಿ 15ರಿಂದ 20 ಜನರ ಕಾರುಗಳನ್ನು ತೆಗೆದುಕೊಂಡು ಹೋಗಿ ಹಣಕ್ಕಾಗಿ ಒತ್ತೆ ಇಟ್ಟಿರುವುದು ಗೊತ್ತಾಗಿದೆ. ಕೂಡಲೇ ನ್ಯಾಯ ದೊರಕಿಸಿಕೊಡಬೇಕು. ಕಾರು ವಾಪಾಸ್ ಕೊಡಿಸುವಂತೆ ಕೆಟಿಜೆ ನಗರ ಪೊಲೀಸರಿಗೆ ದೂರು ನೀಡಿದ್ದರು.

ಇನ್ನು ದೂರು ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರಿಗೆ ಶಾಕ್ ಕಾದಿತ್ತು. ಅರ್ಜುನ್ ಹಾಗೂ ಮತ್ತಿಬ್ಬರು ಸೇರಿಕೊಂಡು ಹಲವರಿಗೆ ವಂಚನೆ ಮಾಡಿರುವುದು ಗೊತ್ತಾಗಿತ್ತು. ಠಾಣೆಗೆ ಕಾರು ಮಾಲೀಕರು ಒಬ್ಬೊಬ್ಬರಾಗಿ ಬರತೊಡಗಿದರು. ಆಗ ತನಿಖೆಗೆ ಇಳಿದ ಪೊಲೀಸರಿಗೆ ಒಂದೊಂದೇ ಕಾರು ಪತ್ತೆಯಾಗತೊಡಗಿತ್ತು. ಒತ್ತೆ ಇಟ್ಟುಕೊಂಡವರನ್ನು ವಿಚಾರಿಸಿದಾಗ ಅರ್ಜುನ್ ಮತ್ತು ಇನ್ನಿಬ್ಬರು ಬಂದು ಹಣಕ್ಕಾಗಿ ಒತ್ತೆಯಿಟ್ಟಿದ್ದರು. ಆದ್ರೆ, ಮೋಸ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದು ಗೊತ್ತಾಗಿಲ್ಲ ಎಂದು ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾರೆ. ಸದ್ಯಕ್ಕೆ ಅರ್ಜುನ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ.

ಕಾರು ಪಡೆದು ಬಳಿಕ ಬೆಂಗಳೂರು ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಬಾಡಿಗೆಗೆ ಬಿಟ್ಟಿದ್ದೇವೆ. ತಿಂಗಳಿಗೆ 20 ಸಾವಿರ ರೂಪಾಯಿ ಬಾಡಿಗೆ ಕೊಡುತ್ತೇನೆ ಎಂದು ಪುಸಲಾಯಿಸಿ ಕಾರು ತೆಗೆದುಕೊಂಡು ಅಡವಿಟ್ಟು ಹಣ ಪಡೆದು ಅರ್ಜುನ್ ಮತ್ತು ಸ್ನೇಹಿತರು ಮಜಾ ಮಾಡುತ್ತಿದ್ದರು. ಈತನನ್ನು ನಂಬಿದ್ದ ಕೆಲವರು ಕಾರು ಕೊಟ್ಟಿದ್ದರು. ಮೊದ ಮೊದಲು ಸರಿಯಾಗಿ ಬಾಡಿಗೆ ಹಣ ಕೊಟ್ಟು ನಂಬಿಕೆ ಗಿಟ್ಟಿಸುತ್ತಿದ್ದರು. ಆ ಬಳಿಕ ಆತನೂ ಇಲ್ಲ, ಬಾಡಿಗೆಯೂ ಇಲ್ಲ, ಕಾರೂ ಪತ್ತೆಯಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿತ್ತು.

ಅರ್ಜುನ್ ಮೊದ ಮೊದಲು ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಕಂಪೆನಿಗಳಿಗೆ ಕಾರು ಬಾಡಿಗೆ ಬಿಟ್ಟರೆ ಹಣ ಸಿಗುತ್ತದೆ. ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸುವ ಅವಶ್ಯಕತೆ ಬೀಳಲ್ಲ. ಯಾವ ರಿಸ್ಕ್ ಇಲ್ಲದೇ 20 ಸಾವಿರ ರೂಪಾಯಿ ತಿಂಗಳಿಗೆ ಆದಾಯ ಬರುತ್ತೆ ಎಂಬ ಬಣ್ಣಬಣ್ಣದ ಮಾತುಗಳನ್ನು ಆಡಿದ್ದಾನೆ. ಇದನ್ನೇ ನಂಬಿ ಕೆಲವರು ಕಾರು ಬಾಡಿಗೆಗೆ ಕೊಡು ಎಂದು ಕೊಟ್ಟಿದ್ದಾರೆ. ಈತ ಮಾತ್ರ ಮಾಡಿದ್ದು ಬೇರೆನೇ. ಮೊದಲ ತಿಂಗಳು ಕಾರು ಮಾಲೀಕರಿಗೆ ಹಣ ಸರಿಯಾಗಿಯೇ ನೀಡಿದ್ದಾನೆ. ಇದರಿಂದ ಮಾಲೀಕರಿಗೂ ನಂಬಿಕೆ ಬಂದಿದೆ. ಜೊತೆಗೆ ಕಾರು ಚಾಲಕ ಆದ ಕಾರಣ ಕಂಪೆನಿಗಳಿಗೆ ನೀಡಿರಬಹುದು ಎಂದುಕೊಂಡು ಕೊಟ್ಟಿದ್ದಾರೆ. ಆದ್ರೆ, ಈ ರೀತಿಯಾಗಿ ವಂಚನೆ ಮಾಡುತ್ತಾನೆ ಎಂಬ ಸಣ್ಣ ಸುಳಿವೂ ಸಿಕ್ಕಿರಲಿಲ್ಲ.ಹಾಗಾಗಿ, ಕಾರು ಮಾಲೀಕರಿಗೆ ತಿಂಗಳಿಗೆ ಸಾವಿರಾರು ರೂಪಾಯಿ ಬಾಡಿಗೆ ಬರುತ್ತೆ ಎಂಬ ಆಸೆಗೆ ಕಾರು ಕೊಟ್ಟಿಬಿಟ್ಟರೆ ಹಿಂಗೆ ಆಗೋದು. ಇನ್ನು ಮುಂದಾದರೂ ಕಾರು ಮಾಲೀಕರು ಬಾಡಿಗೆಗೆ ಕೊಡುವ ಮುನ್ನ ಎಚ್ಚರ ವಹಿಸಿದರೆ ಒಳಿತು.

Related Articles

Leave a Reply

Your email address will not be published.

Back to top button