ಕಳವು ಪ್ರಕರಣ: ಆರೋಪಿಗಳ ಬಂಧನ – 1.5 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ
ಕೊಡಗು: ಹಾಡಹಗಲೇ ನಿವೃತ್ತ ಶಿಕ್ಷಕಿಯೊಬ್ಬರ ಮನೆಯಿಂದ ಕಳ್ಳತನ ನಡೆಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪೊನ್ನಂಪೇಟೆ ತಾಲೂಕು ನಲ್ಲೂರು ಗ್ರಾಮದ ನಿವಾಸಿ ಪಿ.ಆರ್.ದಿನೇಶ (21) ಹಾಗೂ ಮಾಯಮುಡಿ ಧನುಗಾಲ ಗ್ರಾಮದ ನಿವಾಸಿ ಬಿ.ಬಿ.ಸುಬ್ರಮಣಿ(21) ಬಂಧಿತ ಆರೋಪಿಗಳು.
ಬಂಧಿತರಿಂದ 39 ಗ್ರಾಂ ಚಿನ್ನಾಭರಣ ಹಾಗೂ 1,360 ರೂ. ನಗದು ಸೇರಿ ಒಟ್ಟು 1,53,360 ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಧನುಗಾಲ ಗ್ರಾಮದ ನಿವೃತ್ತ ಶಿಕ್ಷಕಿ ನಂಜಮ್ಮ ಅವರು 2021ರ ಫೆ.13 ರಂದು ಮೈಸೂರಿಗೆ ಹೋಗಿದ್ದ ಸಂದರ್ಭ ಮನೆಯ ಹೆಂಚು ತೆಗೆದು ಒಳ ನುಗ್ಗಿದ ಚೋರರು 50 ಸಾವಿರ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ್ದರು. ತನಿಖೆ ಕೈಗೊಂಡ ಗೋಣಿಕೊಪ್ಪ ಪೊಲೀಸರು ಒಬ್ಬ ಬಾಲಕ ಹಾಗೂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಗೋಣಿಕೊಪ್ಪ ವೃತ್ತ ನಿರೀಕ್ಷಕ ಎಸ್.ಎನ್.ಜಯರಾಮ್, ಎಎಸ್ಐಗಳಾದ ಸುಬ್ರಮಣಿ , ಉದಯಕುಮಾರ್, ಸಿಬ್ಬಂದಿಗಳಾದ ಸುರೇಂದ್ರ, ಪಿ.ಎ.ಮಹಮದ್ ಅಲಿ, ಅಬ್ದುಲ್ ಮಜೀದ್, ಕೃಷ್ಣಮೂರ್ತಿ, ಯೋಗೇಶ್, ಲೋಕೇಶ್, ಹೇಮಲತಾ ರೈ ಹಾಗೂ ಬಶೀರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.