ಪೆಟ್ರೋಲ್, ಡಿಸೇಲ್ ಜಿಎಸ್ಟಿ ವ್ಯಾಪ್ತಿಗೆ ತರಲು ಟ್ರಕ್ ಮಾಲಕರ ಆಗ್ರಹ
ನಮಕ್ಕಲ್: ಇಂಧನ ವೆಚ್ಚ ಮತ್ತು ಟೋಲ್ ಶುಲ್ಕ ಟ್ರಕ್ ಕಾರ್ಯಾಚರಣೆಯ ವೆಚ್ಚದ ಶೇ.70ರಷ್ಟಾಗುತ್ತದೆ. ಆದ್ದರಿಂದ ಡಿಸೇಲ್ ಬೆಲೆಯನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕು ಎಂದು ತಮಿಳುನಾಡಿನ ಟ್ರಕ್ ಮಾಲಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಡಿಸೇಲ್ ಬೆಲೆ ಲೀಟರ್ ಗೆ 100 ರೂಪಾಯಿ ಗಡಿ ದಾಟಿದ ಬೆನ್ನಲ್ಲೇ, ಈ ಆಗ್ರಹಗಳು ಎಲ್ಲೆಡೆಯಿಂದ ಕೇಳಿಬರುತ್ತಿದೆ. ತಮಿಳುನಾಡಿನ 5 ಲಕ್ಷ ಟ್ರಕ್ ಗಳ ಪೈಕಿ ಶೇ35ರಷ್ಟು ಟ್ರಕ್ ಗಳು ಸಾಕಷ್ಟು ಕೆಲಸವಿಲ್ಲದೆ ಮತ್ತು ಉದ್ಯೋಗಿಗಳ ಕೊರತೆ ಕಾರಣದಿಂದ ನಷ್ಟ ಸಂಭವಿಸಿ ಶೆಡ್ ಸೇರಿವೆ. ಏರುತ್ತಿರುವ ತೈಲ ಬೆಲೆ ಸಾರಿಗೆ ಉದ್ಯಮಕ್ಕೆ ಮಾರಕವಾಗಲಿದೆ ಎಂದು ಮರಳು ಲಾರಿ ಮಾಲಕರ ಒಕ್ಕೂಟದ ಅಧ್ಯಕ್ಷ ಸೆಲ್ಲಾ ರಸಮಣಿ ಹೇಳಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಏರುವ ಸಂದರ್ಭದಲ್ಲಿ ತೈಲ ಬೆಲೆ ರೂ.70 ರೂಪಾಯಿ ಇತ್ತು. ಈಗ 100 ರೂಪಾಯಿಗೆ ತಲುಪಿದೆ. ತೈಲ ಬೆಲೆ ಏರಿಕೆಯಿಂದ ಸಾರಿಗೆ ವಲಯ ಮಾತ್ರವಲ್ಲದೆ, ಸಣ್ಣ ಉದ್ಯಮಗಳ ಮೇಲೇ ಪರಿಣಾಮ ಬೀರಿದೆ ಎಂದು ಆಲ್ ಇಂಡಿಯಾ ಮೋಟರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಮುರುಗನ್ ವೆಂಕಟಾಚಲಂ ದೂರಿದ್ದಾರೆ.