ಕೊರಗಜ್ಜನ ಪ್ರಸಾದ ಕಳವು; ತಾನೇ ಬಂದು ತಪ್ಪೊಪ್ಪಿಕೊಂಡ ಕಳ್ಳ
ಮಡಿಕೇರಿ: ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿಯ ಶಕ್ತಿಯುತ ದೈವ ಎಂದೇ ಖ್ಯಾತಿ ಪಡೆದಿರುವ ಸ್ವಾಮಿ ಕೊರಗಜ್ಜನ ಪ್ರಸಾದ ಕದಿಯುತ್ತಿದ್ದವ ಕಡೆಗೂ ತಪ್ಪೊಪ್ಪಿಕೊಂಡಿದ್ದಾನೆ.
ಸುಂಟಿಕೊಪ್ಪದ ಕೆದಕಲ್ ಎಂಬಲ್ಲಿ ಕೊರಗಜ್ಜನ ಕಟ್ಟೆ ಇದೆ. ಇಲ್ಲಿ ನಿಯಮಾನುಸಾರ ಕಾಲಕಾಲಕ್ಕೆ ಪೂಜೆ ಕೂಡ ನಡೆಯುತ್ತದೆ. ಸಾಮಾನ್ಯವಾಗಿ ಕೊರಗಜ್ಜನ ದೇವಸ್ಥಾನಕ್ಕೆ ಅಮೃತ (ಮದ್ಯ)ವನ್ನು ಹರಕೆಯ ರೂಪದಲ್ಲಿ ನೀಡುವುದು ವಾಡಿಕೆ. ಅಂತೆಯೇ ಇತ್ತೀಚೆಗೆ ಪೂಜೆ ನಡೆದಾಗಲೂ ಮದ್ಯವನ್ನು ಕೊರಗಜ್ಜನಿಗೆ ಸಮರ್ಪಿಸಲಾಗಿತ್ತು. ಆದರೆ ವ್ಯಕ್ತಿಯೊಬ್ಬ ಅದನ್ನು ಕದ್ದಿದ್ದಾನೆ. ಈ ವಿಡಿಯೋ ಸಿಸಿ ಕ್ಯಾಮರಾದಲ್ಲೂ ಸೆರೆಯಾಗಿತ್ತು. ದೇವರಿಗೆ ಕೈ ಮುಗಿಯುವ ರೂಪದಲ್ಲಿ ಬಂದ ಅವನು ಎರಡು ಪ್ಯಾಕೆಟ್ ಮದ್ಯವನ್ನು ಎತ್ತಿಕೊಂಡು ಹೋಗಿದ್ದ. ಮಾಸ್ಕ್ ಧರಿಸಿದ್ದರಿಂದ ಯಾರೆಂದೂ ಗೊತ್ತಾಗಿರಲಿಲ್ಲ.
ಇದೀಗ ಆತನೇ ದೇವಸ್ಥಾನಕ್ಕೆ ಬಂದು ತಪ್ಪು ಒಪ್ಪಿಕೊಂಡಿದ್ದಾನೆ. ಕದ್ದ ವ್ಯಕ್ತಿ ಕೆಲ ದಿನಗಳಿಂದ ಕಣ್ಣಿನ ತೊಂದರೆ ಅನುಭವಿಸುತ್ತಿದ್ದು, ಇದಕ್ಕೆ ತನ್ನ ಕೃತ್ಯವೇ ಕಾರಣವಿರಬೇಕೆಂಬ ಭಯದಿಂದ ತಾನೇ ಬಂದು ಮಾಡಿದ ತಪ್ಪು ಒಪ್ಪಿಕೊಂಡಿರುವುದಾಗಿ ಗೊತ್ತಾಗಿದೆ.