Uncategorized

ಚಿಕ್ಕಮಗಳೂರು: ಕಸದ ಆಗರವಾಗುತ್ತಿರುವ ನಗರದ ನಿವೇಶನಗಳು

ಚಿಕ್ಕಮಗಳೂರು: ನಗರದಲ್ಲಿ ಖಾಲಿಬಿದ್ದ ಕೆಲ ನಿವೇಶನಗಳಲ್ಲಿ ಕಸದ ರಾಶಿ ಏರ್ಪಟ್ಟಿದ್ದು, ತ್ಯಾಜ್ಯ, ಪ್ಲಾಸ್ಟಿಕ್, ಕಳೆ ಗಿಡಗಂಟಿಗಳು ಬೆಳೆದು ನಿವೇಶನ ಜಾಗಗಳು ಸಂಪೂರ್ಣ ಕಸದ ಆಗರವಾಗುತ್ತಿವೆ.

ನಗರದ ಒಟ್ಟು 35 ವಾರ್ಡ್​​ಗಳಲ್ಲಿ ಅನೇಕ ನಿವೇಶನಗಳು ಕಸದ ಸಂಗ್ರಹಾಗಾರವಾಗಿ ಮಾರ್ಪಟ್ಟಿವೆ. ಕೆಲವರು ನಿವೇಶನಗಳನ್ನು ಖಾಲಿಬಿಟ್ಟಿದ್ದು, ಕೆಲವು ನಿವೇಶನ ಮಾಲೀಕರು ದೂರದ ಊರುಗಳಲ್ಲಿರುತ್ತಾರೆ. ಖಾಸಗಿ ಜಾಗದ ಮಾಲೀಕರು ತಾವೇ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದರೂ, ಯಾವುದೇ ಜವಾಬ್ದಾರಿ ತೋರುತ್ತಿಲ್ಲ ಎಂಬ ದೂರುಗಳಿವೆ.

ನಿವೇಶನದಲ್ಲಿರುವ ಕಸದ ರಾಶಿಯನ್ನು ಬಿಡಾಡಿ ದನಗಳು, ಹಂದಿ, ನಾಯಿ, ಕೋಳಿಗಳು ಎಳೆದಾಡಿ ಕಸವನ್ನು ಎಲ್ಲೆಡೆ ಹರಡಿಹಾಕುತ್ತವೆ. ಇವುಗಳಿಂದ ಅಸ್ವಚ್ಛತೆಯಿಂದ ಕೂಡಿದ ಪರಿಸರದಲ್ಲಿ ಜನರು ವಾಸ ಮಾಡಬೇಕಾದ ದುಸ್ಥಿತಿಯಾಗಿದೆ. ಅಲ್ಲದೆ ನಿವೇಶನಗಳಲ್ಲಿ ಗಿಡಗಂಟಿ, ಪೊದೆಗಳಿಂದ ವಿಷಕಾರಿ ಹಾವು, ಚೇಳು, ಸೊಳ್ಳೆ, ಹುಳುಹುಪ್ಪಟೆ, ವಿಷಜಂತುಗಳ ಆವಾಸ ಸ್ಥಾನವಾಗಿವೆ.

ವಿವಿಧ ಬಡಾವಣೆಗಳ ನಿವೇಶನಗಳಲ್ಲಿ ಎಸೆದಿರುವ ಕಸ ಮಳೆ ನೀರಿನಿಂದ ಚರಂಡಿ ಸೇರುತ್ತಿದೆ. ಚರಂಡಿ ತುಂಬಿದಾಗ ಕೆಲವೆಡೆ ರಸ್ತೆಗಳಲ್ಲಿ ತ್ಯಾಜ್ಯದ ರಾಶಿ ಹರಡಿಕೊಳ್ಳುತ್ತವೆ. ಇವುಗಳ ದುರ್ನಾತದಿಂದ ಜನರು ಮಾರಕ ಕಾಯಿಲೆಗಳಿಗೆ ತುತ್ತಾಗುವ ಅಪಾಯ ಎದುರಾಗಿದೆ. ಆದ್ದರಿಂದ ನಿವೇಶನ ಸ್ವಚ್ಛವಾಗಿಟ್ಟುಕೊಳ್ಳದ ಮಾಲೀಕರ ವಿರುದ್ಧ ಕ್ರಮ ಜರುಗಿಸಬೇಕು, ದಂಡ ವಿಧಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

“ನಗರದಲ್ಲಿ ಸುಮಾರು ಎಂಟು ಸಾವಿರ ನಿವೇಶನಗಳಿವೆ. ನಗರಸಭೆಯಿಂದಲೇ ನಿವೇಶನ ಸ್ವಚ್ಛ ಮಾಡಿಸಿ, ಅವುಗಳ ಮಾಲೀಕರಿಗೆ ದಂಡ ವಸೂಲಿ ಮಾಡಲಾಗುವುದು. ಕಸ, ತ್ಯಾಜ್ಯವನ್ನು ಕಸದ ಗಾಡಿಗೆ ಹಾಕಬೇಕೆಂಬುದು ನಿಯಮ. ಯಾವುದೇ ನಿವೇಶನದೊಳಕ್ಕೆ ಎಸೆಯಬಾರದು. ನಗರವನ್ನು ಸ್ವಚ್ಛವಾಗಿಡಲು ನಗರಸಭೆಗೆ ಸಹಕಾರ ನೀಡಬೇಕು” ಎಂದು ನಗರಸಭೆ ಆಯುಕ್ತ ಬಿ.ಸಿ.ಬಸವರಾಜು ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button