ವಿದ್ಯಾರ್ಥಿಯನ್ನು ಕಟ್ಟಡದ ಮೇಲಿಂದ ತಲೆ ಕೆಳಕಾಗಿ ನೇತಾಡಿಸಿದ ಮುಖ್ಯ ಶಿಕ್ಷಕ
ಲಕ್ನೋ: ಮುಖ್ಯಶಿಕ್ಷಕರೋರ್ವರು ಶಾಲಾ ಕಟ್ಟಡದ ಕೊನೇ ಮಹಡಿಯಿಂದ ವಿದ್ಯಾರ್ಥಿಯೋರ್ವನ ಕಾಲು ಹಿಡಿದು ತಲೆಕೆಳಕಾಗಿ ನೇತಾಡಿಸಿದ ಆಘಾತಕಾರಿ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗಿದ್ದು, ಮುಖ್ಯ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಮಿರ್ಝಾಪುರ ಶಾಲೆಯೊಂದರಲ್ಲಿ ಈ ಪ್ರಸಂಗ ನಡೆದಿದೆ. ಊಟದ ಬಿಡುವಿನ ವೇಳೆಯಲ್ಲಿ ಎಲ್ಲಾ ತರಗತಿ ವಿದ್ಯಾರ್ಥಿಗಳು ಆಟವಾಡುತ್ತಿದ್ದಾಗ 2ನೇ ತರಗತಿಯ ಸೋನು ಯಾದವ್ ಎಂಬ ವಿದ್ಯಾರ್ಥಿ ಇನ್ನೋರ್ವ ವಿದ್ಯಾರ್ಥಿಯನ್ನು ಕಚ್ಚಿದ್ದಾನೆ. ಇದನ್ನು ಕಂಡು ಆಕ್ರೋಶಗೊಂಡ ಮುಖ್ಯಶಿಕ್ಷಕ ಮನೋಜ್ ವಿಶ್ವಕರ್ಮ ವಿದ್ಯಾರ್ಥಿಯನ್ನು ಕಟ್ಟಡದ ಕೊನೇ ಮಹಡಿಗೆ ಕರೆದೊಯ್ದು ಕಾಲು ಮೇಲೆತ್ತಿ ಕಟ್ಟಡದಿಂದ ಕೆಳಹಾಕುತ್ತಿರುವಂತೆ ಬೆದರಿಸಿ ತಲೆಕೆಳಗು ಮಾಡಿ ನೇತಾಡಿಸಿ, “ನೀನು ಕಚ್ಚಿದ ವಿದ್ಯಾರ್ಥಿಯಲ್ಲಿ ಕ್ಷಮೆ ಕೇಳದೇ ಇದ್ದರೆ ಕೆಳಗೆ ಎಸೆಯುತ್ತೇನೆ” ಎಂದು ಬೆದರಿಸಿದಾಗ ವಿದ್ಯಾರ್ಥಿ ನೇತಾಡುತ್ತಾ ಅರಚಾಡಿದ್ದಾನೆ. ಶಿಕ್ಷಕನ ವರ್ತನೆ ಕಂಡು ಉಳಿದ ವಿದ್ಯಾರ್ಥಿಗಳು ದಂಗಾಗಿ ಮಹಡಿ ಮೇಲೆ ಜಮೆಯಾಗಿದ್ದಾರೆ. ಬಳಿಕ ಆ ವಿದ್ಯಾರ್ಥಿಯನ್ನು ಮುಖ್ಯಶಿಕ್ಷಕ ಮೇಲೆ ಎಳೆದುಕೊಂಡಿದ್ದಾರೆ.
ಈ ದೃಶ್ಯ ಜಾಲತಾಣಗಳಲ್ಲಿ ಹರಿದಾಡಿದಾಗ ಮುಖ್ಯ ಶಿಕ್ಷಕನ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆದರೆ ಈ ಬಗ್ಗೆ ವಿದ್ಯಾರ್ಥಿಯ ತಂದೆ ರಂಜಿತ್ ಯಾದವ್ ಬಳಿ ಪ್ರತಿಕ್ರಿಯಿಸಿ, ಮುಖ್ಯಶಿಕ್ಷಕ ಮಾಡಿರುವುದು ತಪ್ಪು. ಆದರೆ ಅವರು ನನ್ನ ಮಗನನ್ನು ಮೇಲಿಂದ ಎಸೆಯುವ ಉದ್ದೇಶ ಹೊಂದಿರಲಿಲ್ಲ. ಅವನ ಮೇಲಿದ್ದ ಪ್ರೀತಿಯಿಂದಲೇ ಶಿಕ್ಷಕರು ಆ ರೀತಿ ಹೆದರಿಸಿರಬಹುದು ಎಂದು ಹೇಳಿದ್ದಾರೆ.
ಬಾಲ ನ್ಯಾಯಕಾಯ್ದೆ ಅಡಿಯಲ್ಲಿ ಬಂಧಿತನಾಗಿರುವ ಮುಖ್ಯಶಿಕ್ಷಕ ಮನೋಜ್ ವಿಶ್ವಕರ್ಮ ತನಗೆ ವಿದ್ಯಾರ್ಥಿ ಸೋನು ಯಾದವ್ಗೆ ಹೆಚ್ಚಿನ ಬುದ್ಧಿವಾದ ಹೇಳುವಂತೆ ಆತನ ತಂದೆ ರಂಜಿತ್ ಯಾದವ್ ಹೇಳಿದ್ದರು. ತುಂಬಾ ಕೀಟಲೆಯ ವಿದ್ಯಾರ್ಥಿಯಾಗಿದ್ದ ಸೋನು ಇತರೆ ಮಕ್ಕಳಿಗೆ ಕಚ್ಚುತ್ತಿದ್ದ ಅಷ್ಟೇ ಅಲ್ಲದೆ ಶಿಕ್ಷಕರಿಗೂ ಕಚ್ಚುತ್ತಿದ್ದ. ಈ ವರ್ತನೆಯನ್ನು ಹೇಗಾದರೂ ಸರಿಪಡಿಸುವಂತೆ ಆತನ ತಂದೆ ನನಗೆ ಹೇಳಿದ್ದರಿಂದ ಬುದ್ಧಿ ಕಲಿಸುವ ಸಲುವಾಗಿ ಹೀಗೊಂದು ಪ್ರಯತ್ನವಾಗಿ ಕೊನೆಯ ಮಹಡಿಯಿಂದ ತಲೆಕೆಳಗಾಗಿ ನೇತಾಡಿಸಿದೆವು ಎಂದು ಹೇಳಿದ್ದಾರೆ.