ಉತ್ತರ ಕನ್ನಡ: ಮೊದಲ ಮಹಿಳಾ ಎಸ್ಪಿಯಾಗಿ ಡಾ.ಸುಮನ್ ಡಿ.ಪೆನ್ನೇಕರ್ ನೇಮಕ
ಕಾರವಾರ : ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ವರ್ಗಾವಣೆಯಾಗಿದ್ದು, ಇದೀಗ ಜಿಲ್ಲೆಗೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಯಾಗಿದ್ದ ಡಾ.ಸುಮನ್ ಡಿ.ಪೆನ್ನೇಕರ್ ಅವರನ್ನು ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ. ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರನ್ನು ಗದಗ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.
2019 ರ ಆಗಸ್ಟ್ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ನೇಮಕಗೊಂಡಿದ್ದ ಶಿವಪ್ರಕಾಶ್ ದೇವರಾಜು ದಶಕಗಳಷ್ಟು ಹಳೆಯ ಪ್ರಕರಣಗಳಿಗೆ ಸಂಬಧಿಸಿದಂತೆ ಆರೋಪಿಗಳ ಬಂಧನ, ಅಕ್ರಮ ಜಾನುವಾರು ಸಾಗಣೆಗೆ ಬ್ರೇಕ್ ಹಾಕುವ ಕಾರ್ಯ, ಓಸಿ, ಮಟ್ಕಾಕ್ಕೆ ಕಡಿವಾಣ ಸೇರಿದಂತೆ ಹತ್ತು ಹಲವು ಕಾರ್ಯಗಳ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದರು.
ಕಳೆದ ಮೂರು ತಿಂಗಳ ಹಿಂದೆ ಸರ್ಕಾರ ವರ್ಗಾವಣೆ ಆದೇಶ ಹೊರಡಿಸಿ ಜಿಲ್ಲೆಗೆ ಉತ್ತರ ಪ್ರದೇಶ ಮೂಲದ 2010 ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಅವರನ್ನು ನೇಮಕಗೊಳಿಸಿತ್ತು. ಆದರೆ ಆ ಆದೇಶದಲ್ಲಿ ಶಿವಪ್ರಕಾಶ್ ದೇವರಾಜು ಅವರನ್ನು ವರ್ಗಾಯಿಸಿ ಸ್ಥಳ ನಿಯುಕ್ತಿ ಮಾಡಿರಲಿಲ್ಲ. ಅಂತಿಮವಾಗಿ ಆದೇಶ ಜಾರಿಯಾಗದೆ ವರ್ತಿಕಾ ಅವರನ್ನು ಮಂಡ್ಯಕ್ಕೆ ನಿಯುಕ್ತಿಗೊಳಿಸಲಾಗಿತ್ತು. ಶಿವಪ್ರಕಾಶ್ ದೇವರಾಜು ಉತ್ತರ ಕನ್ನಡದಲ್ಲೇ ಮುಂದುವರಿದಿದ್ದರು. ಇದೀಗ ಎರಡನೇ ಬಾರಿಗೆ ವರ್ಗಾವಣೆ ಆದೇಶವಾಗಿದೆ.
ಮೊದಲ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿ:
ಇದೀಗ ಮಾಡಲಾದ ಆದೇಶದಂತೆ ನಿಯುಕ್ತಿಯಾದರೆ ಡಾ.ಸುಮನ್ ಡಿ.ಪೆನ್ನೇಕರ್ ಅವರು ಉತ್ತರ ಕನ್ನಡದ ಮೊದಲ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿ ಎನ್ನುವ ಗೌರವಕ್ಕೆ ಪಾತ್ರರಾಗಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಗೆ ಈವರೆಗೆ ಮಹಿಳಾ ಅಧಿಕಾರಿಗಳು ಎಸ್ಪಿಯಾಗಿ ನೇಮಕವಾಗಿರಲಿಲ್ಲ. ಮೊದಲ ಮಹಿಳಾ ಜಿಲ್ಲಾಧಿಕಾರಿಯಾಗಿ ಇಂಕಾಗ್ಲೋ ಜಮೀರ್ 2012 ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಡಾ.ಸುಮನ್ ಮೊದಲ ಮಹಿಳಾ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಬೆಳಗಾವಿ ಜಿಲ್ಲೆಯ ಬೀಡಿ ಗ್ರಾಮದ ಡಾ.ಸುಮನ್ 2013ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಆಯುರ್ವೇದಿಕ್ ವೈದ್ಯರಾಗಿದ್ದ ಅವರು 2009 ರಿಂದ ಯುಪಿಎಸ್ಸಿಗೆ ತಯಾರಿ ನಡೆಸಿದ್ದರು. 2018ನೇ ಸಾಲಿನಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವೇಳೆ ಉಂಟಾಗಿದ್ದ ಭೂಕುಸಿತದ ಸಂದರ್ಭದಲ್ಲಿ ಅವರು ಮತ್ತವರ ತಂಡ ನಡೆಸಿದ್ದ ರಕ್ಷಣಾ ಕಾರ್ಯಕ್ಕೆ ಅಲ್ಲಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರು ತಮ್ಮ ಮಗಳನ್ನು ಅಂಗನವಾಡಿಗೆ ದಾಖಲಿಸಿ ಸರಳತೆ ಮೆರೆದಿದ್ದರು. ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿಯೂ ಅವರು ಕರ್ತವ್ಯ ನಿರ್ವಹಿಸಿ ಹೆಸರು ಮಾಡಿದ್ದರು.