Uncategorized

ಅಂಕೋಲಾ: ಆಕ್ಸಿಜನ್ ಸಮೇತ ಮನೆಗೆ ತೆರಳಿದ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಗೌಡ

ಕಾರವಾರ : ಅನಾರೋಗ್ಯಕ್ಕೀಡಾಗಿ ಕಳೆದೊಂದು ವಾರದಿಂದ ಕಾರವಾರ ನಗರದ ಕ್ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪದ್ಮಶ್ರೀ ಪ್ರಶಸ್ತಿ ವಿಜೇತೆ ಸುಕ್ರಿ ಬೊಮ್ಮ ಗೌಡ ಅವರು ದೀಪಾವಳಿ ಹಬ್ಬಕ್ಕೆ ಮನೆಗೆ ಹೋಗಬೇಕೆಂದು ಹಠ ಹಿಡಿದು ಉಪವಾಸ ಕುಳಿತು ತಮ್ಮ ನಿವಾಸಕ್ಕೆ ತೆರಳಿದ ಘಟನೆ ನಡೆದಿದೆ.

ಸುಕ್ರಜ್ಜಿ ಅವರು ಅಸ್ತಮಾ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಅವರು ಕಳೆದೊಂದು ವಾರದಿಂದ ಕ್ರೀಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆಯೇ ಮನೆಗೆ ಕಳುಹಿಸುವಂತೆ ಸುಕ್ರಜ್ಜಿ ಅವರು ವೈದ್ಯರಲ್ಲಿ ಕೇಳಿಕೊಂಡಿದ್ದರಂತೆ.ಆದರೆ ಆಕ್ಸಿಜನ್ ಸಮಸ್ಯೆ ಹಿನ್ನೆಲೆಯಲ್ಲಿ ಕೆಲ ದಿನಗಳವರೆಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದರು.

ಆದರೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮನೆಗೆ ಹೋಗಲೇಬೇಕು ಎಂದು ಸುಕ್ರಜ್ಜಿ ಹಠ ಹಿಡಿದು ಆಹಾರ ಸೇವಿಸದೆ ಉಪವಾಸ ಕುಳಿತ್ತಿದ್ದರು.ಕೊನೆಗೂ ಮಣಿದ ವೈದ್ಯರು ಸುಕ್ರಜ್ಜಿಗೆ ಆಕ್ಸಿಜನ್ ವ್ಯವಸ್ಥೆ ಸಹಿತ ಮನೆಗೆ ತೆರಳಲು ಕಾರವಾರದ ಸಾಮಾಜಿಕ ಕಾರ್ಯಕರ್ತ ಮಾಧವ ನಾಯಕ ಅವರ ಮುಂದಾಳತ್ವದಲ್ಲಿ ಅನುವು ಮಾಡಿಕೊಟ್ಟಿದ್ದಾರೆ.

ಅಂಕೋಲಾದ ಬಡಗೇರಿಯಲ್ಲಿರುವ ಸುಕ್ರಜ್ಜಿ ಅವರು ತಮ್ಮ ಮನೆಗೆ ತೆರಳಿದ್ದು, ಅಲ್ಲಿ ಕುಟುಂಬ ಸದಸ್ಯರೊಂದಿಗೆ ದೀಪಾವಳಿ ಹಬ್ಬವನ್ನ ಆಚರಣೆ ಮಾಡಿದ್ದಾರೆ. ಏನಾದರು ತೀವ್ರ ತರಹದ ಸಮಸ್ಯೆಗಳಿದ್ದಲ್ಲಿ ತಕ್ಷಣ ತಮ್ಮನ್ನು ಸಂಪರ್ಕಿಸುವಂತೆ ಕುಟುಂಬಸ್ಥರಿಗೆ ವೈದ್ಯರು ತಿಳಿಸಿದ್ದಾರೆ.

Related Articles

Leave a Reply

Your email address will not be published.

Back to top button