Uncategorized

ಹೊನ್ನಾವರ: ಮಹಿಮೆ ಗ್ರಾಮದಲ್ಲಿ ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಹಳ್ಳದ ಕಂಟಕ

ಕಾರವಾರ : ಉತ್ತರ ಕನ್ನಡ ಜಿಲ್ಲೆ ಕಾಡು ಪ್ರದೇಶವನ್ನು ಹೆಚ್ಚು ಹೊಂದಿರುವ ಜಿಲ್ಲೆ. ಹೀಗಾಗಿ ಇಲ್ಲಿನ ಜನರು ತಮ್ಮ ಊರುಗಳಿಂದ ನಗರ ಪ್ರದೇಶಕ್ಕೆ ಬರಬೇಕು ಎಂದರೆ ಹರಸಾಹಸವನ್ನು ಪಡಬೇಕಾಗುತ್ತದೆ.

ಹೀಗಾಗಿ ಹಲವು ಗ್ರಾಮಗಳಿಗೆ ಇಂದಿನವರೆಗೂ ಮೂಲ ಸೌಕರ್ಯಗಳೆನ್ನುವುದು ಮರೀಚಿಕೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಹಿಮೆ ಗ್ರಾಮ ಕಳೆದ 50 ವರ್ಷಗಳಿಂದ ಮೂಲ ಸೌಕರ್ಯದಿಂದ ವಂಚಿತವಾಗಿದೆ. ಬಹುತೇಕ ಅರಣ್ಯವನ್ನು ಹೊಂದಿರುವ ಈ ಗ್ರಾಮ ಹೊನ್ನಾವರ ನಗರದಿಂದ 48 ಕಿಲೋಮೀಟರ್ ದೂರದಲ್ಲಿರುವ ಉಪ್ಪೋಣಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರುತ್ತದೆ. ಈ ಗ್ರಾಮದಲ್ಲಿ 1200 ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಈ ಕ್ಷೇತ್ರವನ್ನು ಭಟ್ಕಳ – ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಪ್ರತಿನಿಧಿಸುತ್ತಿದ್ದಾರೆ.

ಹಳ್ಳದಲ್ಲಿ ಜೀವ ಕೈಯಲ್ಲಿ ಹಿಡಿದು ಸಾಗುವ ವಿದ್ಯಾರ್ಥಿಗಳು

ಮಹಿಮೆ ಗ್ರಾಮದಲ್ಲಿ 42 ವಿದ್ಯಾರ್ಥಿಗಳು ಹೊನ್ನಾವರದ ವಿವಿಧ ಶಾಲೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಇವರೆಲ್ಲರೂ ಪ್ರತಿ ದಿನ ಶಾಲೆ, ಕಾಲೇಜಿಗೆ ತೆರಳಲು ಮುಂಜಾನೆ ಐದು ಘಂಟೆಗೆ ಹೊರಡಬೇಕು. ಮಹಿಮೆ ಗ್ರಾಮಕ್ಕೆ ರಸ್ತೆ ಹಾಗೂ ಸೇತುವೆ ಇಲ್ಲದ ಕಾರಣ ಪ್ರತಿ ವಿದ್ಯಾರ್ಥಿಗಳು ಎಂಟು ಕಿಲೋಮೀಟರ್ ನಡೆದುಕೊಂಡು ಬರಬೇಕು. ದಾರಿಯ ಮಧ್ಯದಲ್ಲಿ ಹಳ್ಳ ಹರಿಯುವುದರಿಂದ ಈ ಹಳ್ಳ ದಾಟಬೇಕಾದರೆ ಒಬ್ಬರನ್ನೊಬ್ಬರು ಕೈ ಹಿಡಿದುಕೊಂಡು ಸಾಗಬೇಕಾಗುತ್ತದೆ. ಮಳೆಗಾಲದಲ್ಲಿ ನೆರೆ ಬರುವುದರಿಂದ ಹಳ್ಳ ದಾಟುವುದು ಕಷ್ಟವಾಗಿದೆ. ಹೀಗಾಗಿ ಹಳ್ಳದಲ್ಲಿ ಹೆಚ್ಚು ನೀರಿದ್ದ ದಿನ ಶಾಲೆ, ಕಾಲೇಜುಗಳಿಗೆ ತೆರಳುವಂತಿಲ್ಲ.

ಇನ್ನು ಸ್ವಲ್ಪ ನೀರು ಇಳಿದರೆ ಊರಿನ ಜನರು ದಡದ ಎರಡೂ ಕಡೆ ಹಗ್ಗ ಹಾಕಿ ಮಕ್ಕಳನ್ನು ದಾಟಿಸುತ್ತಾರೆ.ಇವೆಲ್ಲಾ ಸಂಕಟವನ್ನು ಅನುಭವಿಸಿ ಎಂಟು ಕಿಲೋಮೀಟರ್ ದುರ್ಗಮ ಹಾದಿಯಲ್ಲಿ ಸಾಗಿ ಹೆದ್ದಾರಿಯಲ್ಲಿ ನಿಂತು ಬಸ್ ಏರಿ ಹೋಗುವುದರಲ್ಲಿ ಶಾಲೆ, ಕಾಲೇಜಿನ ಸಮಯ ಪ್ರಾರಂಭವಾಗಿರುತ್ತದೆ. ಇನ್ನು ಶಾಲೆ, ಕಾಲೇಜು ಮುಗಿಸಿ ಮರಳಿ ಮನೆಗೆ ತೆರಳುವಾಗ ರಾತ್ರಿ ಏಳು ಗಂಟೆಯಾಗುತ್ತದೆ. ಮಳೆಗಾಲದಲ್ಲಿ ಆರು ತಿಂಗಳು ಈ ಗ್ರಾಮಕ್ಕೆ ಹೊರ ಊರಿನ ಸಂಪರ್ಕ ಇರುವುದಿಲ್ಲ. ಹೀಗಾಗಿ ಈ ಆರು ತಿಂಗಳು ತಮ್ಮ ಮನೆಗೆ ಬೇಕಾದ ಅಕ್ಕಿ, ಬೇಳೆಕಾಳು ಸಂಗ್ರಹಿಸಿಕೊಳ್ಳಬೇಕಾಗುತ್ತದೆ. ಈ ನಡುವೆ ರೋಗಿಗಳು, ಗರ್ಭಿಣಿಯರು ಇದ್ದರೆ ಆ ಕಷ್ಟ ದೇವರಿಗೆ ಪ್ರೀತಿ ಅನ್ನುವಂತಾಗಿದೆ. ಅವರನ್ನು ಸಂಬಂಧಿಕರ ಮನೆಯಲ್ಲಿ ಇರಿಸಿ ಕಾಪಾಡಬೇಕು. ಎಷ್ಟೋ ಬಾರಿ ಆ್ಯಂಬ್ಯುಲೆನ್ಸ್ ಸಹ ಈ ಭಾಗದಲ್ಲಿ ಬರದೇ ಜೋಳಿಗೆಯಲ್ಲಿ ರೋಗಿಗಳನ್ನು ಸಾಗಿಸಿದ ಉದಾಹರಣೆಗಳಿವೆ.

ಪ್ರತಿ ದಿನ ಹಳ್ಳ ದಾಟಿ ಎಂಟು ಕಿಲೋಮೀಟರ್ ನಡೆಯುವುದು ವಿದ್ಯಾರ್ಥಿಗಳಿಗೆ ಕಷ್ಟವಾಗಿದೆ.ಇನ್ನು ಈ ಭಾಗದಿಂದ ಬಾಲಕಿಯರೇ ಹೆಚ್ಚು ಶಾಲೆ, ಕಾಲೇಜಿಗೆ ತೆರಳುವುದರಿಂದ ಸಮಸ್ಯೆ ಇನ್ನೂ ಹೆಚ್ಚಾಗಿದ್ದು, ಹಳ್ಳ ದಾಟಲು ಹೆದರಿ ಆರು ಜನ ವಿದ್ಯಾರ್ಥಿಗಳು ಏಳನೇ ತರಗತಿ ನಂತರ ವಿದ್ಯಾಭಾಸವನ್ನು ನಿಲ್ಲಿಸಿದ್ದಾರೆ.

ಮಹಿಮೆ ಶಾಲೆಗೆ ಶಿಕ್ಷಕರ ಕೊರತೆ

ಈ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯೂ ಸಹ ಇದೆ.ಆದರೆ ಇರುವ ಮಕ್ಕಳ ಸಂಖ್ಯೆಗೆ ಇಬ್ಬರು ಮಾತ್ರ ಶಿಕ್ಷಕರಿದ್ದಾರೆ. 86 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರೂ ಇಲ್ಲಿಗೆ ಹೊಸದಾಗಿ ವರ್ಗಾವಣೆಗೊಳ್ಳುವ ಶಿಕ್ಷಕರು ಇಲ್ಲಿಗೆ ಬರಲು ನಿರಾಕರಿಸುತ್ತಾರೆ. ಒಂದು ವೇಳೆ ವರ್ಗವಾಗಿ ಬಂದರೂ ಹೆಚ್ಚು ದಿನ ಉಳಿಯದೇ ಬೇರೆಡೆ ವರ್ಗ ಮಾಡಿಸಿಕೊಂಡು ಹೋಗುತ್ತಾರೆ. ಹೀಗಾಗಿ ಇಲ್ಲಿ ಶಿಕ್ಷಕರ ಕೊರತೆ ಹಲವು ವರ್ಷಗಳಿಂದ ಹಾಗೆಯೇ ಇದೆ. ಇಬ್ಬರು ಶಿಕ್ಷಕರು ಮಾತ್ರ ಇರುವುದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಹ ಸಿಗುತ್ತಿಲ್ಲ.

ಮನವಿ ಸಲ್ಲಿಸಿ ಸುಸ್ತಾದ ಗ್ರಾಮಸ್ಥರು

ಹಿಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಂದ ಹಿಡಿದು ಇಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಸಹ ತಮ್ಮೂರಿನ ಸಮಸ್ಯೆ ಕುರಿತು ಇಲ್ಲಿನ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್, ಶಾಸಕ ಸುನೀಲ್ ನಾಯ್ಕ ಅವರಿಗೆ ಮನವಿ ಮಾಡಿ ಸುಸ್ತಾದ ಗ್ರಾಮಸ್ಥರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರಸ್ತೆ ಹಾಗೂ ಕಿರು ಸೇತುವೆ ನಿರ್ಮಿಸುವಂತೆ ಆಗ್ರಹಿಸಿದ್ದಾರೆ. ಆದರೆ ಇದಕ್ಕೆ ಕಿವಿಗೊಡದ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸುವ ಕೆಲಸಕ್ಕೆ ಮಾತ್ರ ಕೈ ಹಾಕಿಲ್ಲ. ಹೀಗಾಗಿ ಶಾಲೆಗೆ ಹೋಗುವ ತಮ್ಮ ಮಕ್ಕಳು ಮರಳಿ ಬರುವ ನಿರೀಕ್ಷೆಯನ್ನೇ ಕಳೆದುಕೊಂಡಿರುವ ಇಲ್ಲಿನ ಜನರು ಮಕ್ಕಳನ್ನು ಶಾಲೆಗೆ ಕಳುಹಿಸಲು ಸಹ ಹಿಂದು ಮುಂದು ನೋಡುತ್ತಿದ್ದು, ಹೀಗೆಯೇ ಪರಿಸ್ಥಿತಿ ಮುಂದುವರಿದರೆ ಮತ್ತಷ್ಟು ವಿದ್ಯಾರ್ಥಿಗಳು ಶಾಲೆ ಬಿಡುವ ಅನಿವಾರ್ಯತೆ ಎದುರಾಗಲಿದೆ.

Related Articles

Leave a Reply

Your email address will not be published.

Back to top button