Uncategorized

ಸಿರಿಗೆರೆ ಶ್ರೀಗಳು ಪೀಠತ್ಯಾಗ ಮಾಡಿ ಉತ್ತರಾಧಿಕಾರಿ ನೇಮಕ‌ ಮಾಡಬೇಕು: ತರಳಬಾಳು ಪೀಠ ಉಳಿಸಿ ಜಾಗೃತಿ ಸಮಿತಿ ಆಗ್ರಹ

ದಾವಣಗೆರೆ: ಸಿರಿಗೆರೆ ತರಳಬಾಳು ಪೀಠಾಧಿಪ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಪೀಠತ್ಯಾಗ ಮಾಡಿ ಉತ್ತರಾಧಿಕಾರಿ ನೇಮಕ ಮಾಡಬೇಕು ಎಂದು ತರಳಬಾಳು ಪೀಠ ಉಳಿಸಿ ಜಾಗೃತಿ ಸಮಿತಿಯ ಮುಖಂಡರು ಒತ್ತಾಯಿಸಿದ್ದಾರೆ. ಈ ವೇಳೆ ಶಿವಸೈನ್ಯ ಕಾರ್ಯಕರ್ತರು ಹಾಗೂ ಜಾಗೃತಿ ಸಮಿತಿಯ ಸದಸ್ಯರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಪತ್ರಿಕಾಗೋಷ್ಠಿಯಲ್ಲಿಂದು ಶ್ರೀಗಳ ಕಾರ್ಯವೈಖರಿ ಖಂಡಿಸಿ ಮಾತನಾಡಿದ ಸಮಿತಿಯ ಮುಖಂಡ ಮುದೇಗೌಡ್ರ ವೀರಭದ್ರಪ್ಪ, ಸಮಾಜದ ಬೈಲಾ ಪ್ರಕಾರ ಹಿರಿಯ ಶ್ರೀಗಳ ಆಶಯದಂತೆ 6೦ ವರ್ಷ ಮೇಲ್ಪಟ್ಟವರು ಪೀಠಾಧಿಪತಿಯಾಗಿ ಮುಂದುವರೆಯುವಂತಿಲ್ಲ. ಹಾಗಾಗಿ ಪೀಠತ್ಯಾಗ ಮಾಡಬೇಕು. ಈ ಬಗ್ಗೆ ಶ್ರೀಗಳಿಗೆ ನಾಲ್ಕೈದು ಪತ್ರ ಬರೆದಿದ್ದೇವೆ. ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಲಿ ಶ್ರೀಗಳಿಗೆ 75 ವರ್ಷವಾಗಿದೆ. ಹಿಂದಿನ ಶ್ರೀಗಳಾದ ಶಿವಕುಮಾರ ಶಿವಾಚಾರ್ಯರು ಪ್ರಜಾಪ್ರಭುತ್ವ ರೀತಿಯಲ್ಲಿ ಅವರ 50 ನೇ ವಯಸ್ಸಿನಲ್ಲಿ ಪೀಠತ್ಯಾಗ ಮಾಡಿ ಹಾಲಿ ಶ್ರೀಗಳನ್ನು ಸಮಾಜಕ್ಕೆ ಪರಿಚಯಿಸಿ ಪಟ್ಟ ಕಟ್ಟಿ ವಿಶ್ರಾಂತಿ ಪಡೆದರು.ಅದರಂತೆ ಹಾಲಿ ಶ್ರೀಗಳು ಉತ್ತರಾಧಿಕಾರಿ ನೇಮಕಮಾಡಬೇಕು ಎಂದು ಒತ್ತಾಯಿಸಿದರು.

ಸಮಾಜ ಬಾಂಧವರು ಹಾಗೂ ಭಕ್ತರ ಸಮಕ್ಷಮದಲ್ಲಿ ನೂತನ ಪೀಠಾಧಿಪತಿಗಳನ್ನು ಆಯ್ಕೆಮಾಡಬೇಕು ಎಂದು ಆಗ್ರಹಿಸಿದರು.

ವಕೀಲ ಎಂ.ಸಿದ್ದಯ್ಯನವರು ಮಾತನಾಡಿ ನಮ್ಮ ಹೋರಾಟ ಮಠದ ವಿರುದ್ಧ ಅಲ್ಲ. ಪೀಠಾಧಿಪತಿಗಳಾಗಿ ಸುಧೀರ್ಘ 43 ವರ್ಷಗಳಿಂದ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ವರ್ತನೆಯ ಮೇಲೆ ಎಂದು ತಿಳಿಸಿದರು.

ಭಕ್ತ ಸಮುದಾಯ ಶ್ರೀಮಠದ ಬಗ್ಗೆ ಅಪಾರ ಗೌರವ ಅಭಿಮಾನ ಹೊಂದಿದೆ. ಆದರೆ ಶ್ರೀ ಮಠದ ಸಂಪರ್ಕ ಸುಲಭವಾಗಿ ಭಕ್ತ ಸಮುದಾಯಕ್ಕೆ ಸಿಗುತ್ತಿಲ್ಲ. ಇದರಿಂದ ಭಕ್ತರು ತಮ್ಮ ಕಷ್ಟಸುಖ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅನಾಥ ಪ್ರಜ್ಞೆ ಭಕ್ತಸಮುದಾಯದಲ್ಲಿ ಕಾಡಲಾರಂಭಿಸಿದೆ. ಸಮಾಜದಲ್ಲಿ ವಿಚಾರವಾದಿಗಳು, ಪರಿಣತರು ಇದ್ದರೂ ಕೂಡ ಅವರನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿಲ್ಲ. ಏಕಮುಖ ನಿರ್ಧಾರಗಳಿಂದ ಎಲ್ಲರನ್ನೂ ದೂರವಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜದ ಸಮಸ್ಯೆ ಬೀದಿಗೆ ಬಂದಿರುವುದಕ್ಕೆ ಶ್ರೀಗಳೇ ಕಾರಣ. ನಮಗೆ ಬೆದರಿಕೆ ಕೆರಗಳು ಬಂದರೂ ಕೂಡ ಅದಕ್ಕೆ ಅವರೇ ಕಾರಣ ಎಂದರು. ಸಮಿತಿಯ ಮುಖಂಡ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ ಶ್ರೀಗಳು ಶಿಕ್ಷಣ ಸಂಸ್ಥೆಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಸಮಾಜದ ಬಡವರಿಗೆ ನೆರವಾಗುವ ಶಿಕ್ಷಣ ಸಂಸ್ಥೆಗಳ ಬದಲಾಗಿ ಕೇವಲ ಆದಾಯ ತರುವಂತಹ ಕಲ್ಯಾಣಮಂಟಪಗಳನ್ನು ಅದ್ದೂರಿ ದೇವಾಲಯಗಳನ್ನಾಗಿ ಮಾರ್ಪಡಿಸಿ ಸ್ಥಾಪನೆ ಮಾಡಿದ್ದಾರೆ. ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಿಲ್ಲದಂತಹ ಸ್ಥಿತಿ ಎದುರಾಗಿದೆ. ಭಕ್ತರ ಹಣವನ್ನು ಅದ್ದೂರಿ ಕಟ್ಟಡಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದರು.

ಸಮಿತಿಯ ಶಾಂತಗಂಗಾಧರ್ ಹಾಗೂ ಮಾದನಬಾವಿ ರುದ್ರಪ್ಪಗೌಡ ಮಾತನಾಡಿ ಶ್ರೀಗಳ ಕಾರ್ಯವೈಖರಿ ಪ್ರಶ್ನಿಸಿದವರನ್ನು ಕೆಟ್ಟವರಂತೆ ಬಿಂಬಿಸಲಾಗುತ್ತಿದೆ.ಮಠದ ವಿರೋಧಿಗಳು ಸಮಾಜ ವಿರೋಧಿಗಳು ಎಂಬ ಹಣೆಪಟ್ಟಿ ಕಟ್ಟುತ್ತಾರೆ. ಕೆಲವರ ಬಗ್ಗೆ ಶ್ರೀಗಳು ಇಲ್ಲಸಲ್ಲದ ಆರೋಪ ಮಾಡಿ ಬಾಯಿಮುಚ್ವಿಸುವ ಕೆಲಸ ಮಾಡುತ್ತಿದ್ದಾರೆ.ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ ಎಂದು ಆರೋಪಿಸಿದರು.

ತರಳಬಾಳು ಶ್ರೀಗಳು ಪೀಠತಾಗ್ಯ ಮಾಡಬೇಕೆಂದು ಒತ್ತಾಯಿಸಿ ಪತ್ರಿಕಾಗೋಷ್ಠಿ ನಡೆಸಿದವರ ಮೇಲೆ ಶಿವಸೈನ್ಯದ ಮುಖಂಡರಾದ ಶಶಿಧರ್ ಹೆಮ್ಮನಬೇತೂರು ಹರಿಹಾಯ್ದ ಘಟನೆ ಜರುಗಿತು. ಶ್ರೀ ಗಳಿಂದ ಸೌಲಭ್ಯ ಪಡೆದು ಇದೀಗ ಅವರ ವಿರುದ್ದ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಅವರು ತರಳಬಾಳು ಮಠ ಶಿಸ್ತಿಗೆ ಹೆಸರಾಗಿದೆ. ಶ್ರೀಗಳ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದ ಮುಖಂಡರು ಎಲ್ಲಾ ರೀತಿಯ ಉಪಯೋಗ ಪಡೆದುಕೊಂಡು ಅವರ ವಿರುದ್ದ ಮಾತನಾಡುವುದು ಖಂಡನೀಯ.ಗುರುಗಳು ಸದಾ ಭಕ್ತರ ನಡುವೆ ಇರುತ್ತಾರೆ. ಅಂತವರ ಬಗ್ಗೆ ದೂಷಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಾಜದ ಸಮಸ್ಯೆ ಇಂದು ಬೀದಿಗೆ ಬಂದಿದೆ ಎಂದರೆ ಅದಕ್ಕೆ ಸ್ವಾಮೀಜಿಯವರೇ ಕಾರಣ. ಉತ್ತಾರಾಧಿಕಾರಿ ನೇಮಕ ಮಾಡುವಂತೆ ಪತ್ರ ಬರೆದರೆ ಅದಕ್ಕೆ ಉತ್ತರಿಸುವುದಿಲ್ಲ. ಪ್ರಶ್ನೆ ಮಾಡಿದವರನ್ನು ಕಟ್ಟಿಹಾಕಲು ಮುಗ್ದ ಭಕ್ತರನ್ನು ಶ್ರೀಗಳು ಬಳಸಿಕೊಳ್ಳುತ್ತಿದ್ದಾರೆ. ಹಾಲಿ ಶ್ರೀಗಳು ಉತ್ತರಾಧಿಕಾರಿಯಾಗಿ 43 ವರ್ಷದಿಂದಲೂ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ.ಅದಕ್ಕೆ ತರಳಬಾಳು ಮಠ ಉಳಿಸಿ ಜಾಗೃತಿ ಸಮಿತಿ ರಚಿಸಿಕೊಂಡು ನೂತನ ಪೀಠಾಧಿಪತಿ ನೇಮಕ ಮಾಡುವಂತೆ ಒತ್ತಾಯಿಸುತ್ತಿದ್ದೇವೆ ಎಂದು ಎಸ್.ಟಿ ಶಾಂತಗಂಗಾಧರ್ ಸ್ಪಷ್ಟಪಡಿಸಿದರು.

Related Articles

Leave a Reply

Your email address will not be published.

Back to top button