Uncategorized

ಬಿಜೆಪಿ ದಲಿತ ನಾಯಕರಿಗೆ ಸಿದ್ದರಾಮಯ್ಯ ಸವಾಲು

ಬೆಂಗಳೂರು: ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ ಕಾಯ್ದೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತಂದು ಬಜೆಟ್ ನ ಶೇಕಡಾ 24ರಷ್ಟನ್ನು ದಲಿತರ ಕಲ್ಯಾಣಕ್ಕಾಗಿ ಮೀಸಲಿಡಲು ಭಾರತೀಯ ಜನತಾ ಪಕ್ಷ ಸರ್ಕಾರ ಸಿದ್ದ ಇದೆಯೇ?

ಇದು-ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು.

ನಾನು ದಲಿತರನ್ನು ಅವಮಾನಿಸಿದ್ದೇನೆ ಎಂಬ ಸುಳ್ಳು ಆರೋಪದ ಮೂಲಕ ಅತ್ಯಂತ ಕೀಳುಮಟ್ಟದ ಆರೋಪಗಳನ್ನು ಬಿಜೆಪಿ ದಲಿತ ಮೋರ್ಚಾದ ಕೆಲವು ನಾಯಕರು ಮಾಡಿರುವುದನ್ನು ಮಾಧ್ಯಮಗಳ ವರದಿಗಳ ಮೂಲಕ ಗಮನಿಸಿದ್ದೇನೆ.

ಸಿಂದಗಿಯಲ್ಲಿ ನಡೆದಿದ್ದ ಮಾದಿಗ ದಂಡೋರಾ ಸಭೆಯಲ್ಲಿ ಗೋವಿಂದ ಕಾರಜೋಳ, ರಮೇಶ್ ಜಿಗಜಿಣಗಿ, ನಾರಾಯಣ ಸ್ವಾಮಿ ಮೊದಲಾದ ನಾಯಕರು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನವನ್ನು ವಿರೋಧಿಸುವ ಬಿಜೆಪಿ ಜೊತೆ ಸ್ವಾರ್ಥಕ್ಕಾಗಿ ಸೇರಿದ್ದಾರೆ ಎಂದು ಹೇಳಿದ್ದೆ ಹೊರತು ಎಲ್ಲಿಯೂ ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರಿದ್ದಾರೆ ಎಂದು ಹೇಳಿಲ್ಲ ಎಂದರು.

ಸಿದ್ದರಾಮಯ್ಯ ಗುರುವಾರ ಬಿಡುಗಡೆ ಮಾಡಿರುವ ಹೇಳಿಕೆಯ ಸಾರಾಂಶ:

ನನ್ನನ್ನು ದಲಿತ ವಿರೋಧಿ ಎಂದು ಚಿತ್ರಿಸಲು ಹೊರಟಿರುವ ಬಿಜೆಪಿ ದಲಿತ ಮೋರ್ಚಾದ ತಥಕಾಥಿತ ನಾಯಕರು, ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಸಂವಿಧಾನ ಬದಲಿಸುತ್ತೇವೆ ಎಂದಾಗ, ದಲಿತರನ್ನು ನಾಯಿಗಳು ಎಂದು ತುಚ್ಚೀಕರಿಸಿದಾಗ ಎಲ್ಲಿ ಹೋಗಿದ್ದರು? ಯಾಕೆ ಬಾಯಿ ಮುಚ್ಚಿಕೊಂಡಿದ್ದರು? ಯಾಕೆ ಪ್ರತಿಭಟಿಸಲಿಲ್ಲ? ಎನ್ನುವುದನ್ನು ಕೂಡಾ ರಾಜ್ಯದ ಜನತೆಗೆ ತಿಳಿಸಬೇಕು.

ರಾಜಕೀಯ ಅಧಿಕಾರ ಎನ್ನುವುದು ಅಭಿವೃದ್ದಿಯ ಬಾಗಿಲನ್ನು ತೆರೆಯುವ ಮಾಸ್ಟರ್ ಕೀಲಿಕೈ’ ಎನ್ನುವ ಬಾಬಾಸಾಹೇಬ್ ಅಂಬೇಡ್ಕರ್ ಮಾತನ್ನು ಸಂಪೂರ್ಣವಾಗಿ ನಾನು ನಂಬಿದವನು. ನನ್ನ ಕೈಗೆ ಅಧಿಕಾರ ಬಂದಾಗೆಲ್ಲ ಅದನ್ನು ಬಳಸಿಕೊಂಡು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವೂ ಸೇರಿದಂತೆ ಸರ್ವಜನರ ಕಲ್ಯಾಣಕ್ಕಾಗಿ ಕೆಲಸ ಮಾಡಿದ್ದೇನೆ.

ಇವೆಲ್ಲವೂ ಅಧಿಕೃತ ದಾಖಲೆಯ ರೂಪದಲ್ಲಿ ಜನರ ಮುಂದಿದೆ. ಇದೇ ರೀತಿ ಭಾರತೀಯ ಜನತಾ ಪಕ್ಷ ತಮ್ಮ ಕೈಗೆ ಅಧಿಕಾರ ಬಂದಾಗ ಏನು ಮಾಡಿದೆ ಎನ್ನುವುದು ಕೂಡಾ ದೇಶ ಮತ್ತು ರಾಜ್ಯದ ಜನತೆಯ ಮುಂದಿದೆ.

ದಲಿತರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ರಚಿಸಿದ್ದ ಕಾಯ್ದೆಗಳು, ರೂಪಿಸಿ ಜಾರಿಗೆ ತಂದಿರುವ ಕಾರ್ಯಕ್ರಮಗಳನ್ನು ಮುಂದಿಟ್ಟು ಸಾರ್ವಜನಿಕವಾಗಿ ಚರ್ಚೆ ನಡೆಸಿದರೆ ನಾನು ಅದರಲ್ಲಿ ಭಾಗವಹಿಸಲು ಸಿದ್ದನಿದ್ದೇನೆ.

ಈ ಮೂಲಕ ಯಾವ ಪಕ್ಷ ದಲಿತರ ಪರವಾಗಿದೆ ಮತ್ತು ವಿರುದ್ದವಾಗಿದೆ ಎನ್ನುವುದನ್ನು ಸಾರ್ವಜನಿಕರ ತೀರ್ಮಾನಿಸಲಿ.

ರಾಜ್ಯ ಬಜೆಟ್ ನ ಶೇಕಡಾ 24.1ರಷ್ಟು ಭಾಗವನ್ನು ಮೀಸಲಿಡುವ SCSP/TSP ಕಾಯ್ದೆಯನ್ನು ನಾನು ಜಾರಿಗೆ ತಂದಿದ್ದೆ. ಆಂಧ್ರಪ್ರದೇಶ ಸರ್ಕಾರದಲ್ಲಿ ಇದೇ ಉದ್ದೇಶ ಕಾಯ್ದೆಯಿದ್ದರೂ ನಾವು ರಚಿಸಿದ ಕಾಯ್ದೆ ಹೆಚ್ಚು ಪ್ರಗತಿಪರವಾದುದು, ನಮ್ಮಲ್ಲಿನ ಕಾಯ್ದೆಯ ಪ್ರಕಾರ ಮೀಸಲಿಟ್ಟ ಶೇಕಡಾ 24.ರಷ್ಟು ಬಜೆಟ್ ಹಣ ಖರ್ಚಾಗದಿದ್ದರೆ ಅದನ್ನು ಮುಂದಿನ ವರ್ಷಕ್ಕೆ ಬಳಸಬಹುದಾಗಿದೆ ಮತ್ತು ಮೀಸಲಿಟ್ಟ ಅನುದಾನವನ್ನು ಖರ್ಚು ಮಾಡದ ಸಂಬಂಧಿತ ಇಲಾಖಾ ಅಧಿಕಾರಿಗಳ ವಿರುದ್ದ ಕ್ರಮವನ್ನು ಕೈಗೊಳ್ಳಬಹುದಾಗಿದೆ.

2008-09ರಿಂದ 2012-13ನೇ ಸಾಲಿನವರೆಗೆ ಬಿಜೆಪಿ ಸರ್ಕಾರ SCSP/TSP ಯೋಜನೆಯಡಿ ಖರ್ಚು ಮಾಡಿದ್ದು ಕೇವಲ ರೂ.22,261 ಕೋಟಿ. ನಮ್ಮ ಸರ್ಕಾರದ ಅವಧಿಯಲ್ಲಿ ರೂ. 88,395 ಕೋಟಿ. ಯಾರು ದಲಿತ ವಿರೋಧಿ? ನಾನಾ? ಬಿಜೆಪಿ ನಾಯಕರಾ?

2020-21ರ ಕೇಂದ್ರ ಬಜೆಟ್ ನ ಗಾತ್ರ 34 ಲಕ್ಷ ಕೋಟಿ ರೂಪಾಯಿಗಳು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಈ ಬಜೆಟ್ ನ ಶೇಕಡಾ 24ರಷ್ಟನ್ನು ಅವರ ಕಲ್ಯಾಣಕ್ಕಾಗಿ ಮೀಸಲಿಟ್ಟರೆ ಅದು ಎಂಟುವರೆ ಲಕ್ಷ ಕೋಟಿ ರೂಪಾಯಿಗಳಾಗುತ್ತದೆ. ನನ್ನನ್ನು ದಲಿತ ವಿರೋಧಿ ಎಂದು ಆರೋಪಿಸುವವರು ಪ್ರಧಾನಿ ನರೇಂದ್ರಮೋದಿಯವರಿಗೆ ಮನವರಿಕೆ ಮಾಡಿಕೊಟ್ಟು ರಾಜ್ಯದಲ್ಲಿ ನಾನು ಜಾರಿಗೆ ತಂದಿದ್ದ SCP/TSP ಕಾಯ್ದೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರುವಂತೆ ಮಾಡಲು ಸಿದ್ದರಿದ್ದಾರೆಯೇ? ಇದು ಬಿಜೆಪಿಯಲ್ಲಿರುವ ದಲಿತ ನಾಯಕರಿಗೆ ನನ್ನ ಸವಾಲು.

2020-21ರ ಕೇಂದ್ರ ಬಜೆಟ್ ನಲ್ಲಿ ಪರಿಶಿಷ್ಟ ಜಾತಿಯ ಕಲ್ಯಾಣಕ್ಕೆ ನೀಡಿರುವ ಅನುದಾನ ರೂ.8030 ಕೋಟಿ ಮತ್ತು ಗುಡ್ಡಗಾಡು ಜನರ ಅಭಿವೃದ್ದಿಗೆ ನೀಡಿರುವ ಅನುದಾನ ರೂ.7524 ಕೋಟಿ. ಬೇರೆ ಯಾವ ಕಾರ್ಯಕ್ರಮಗಳನ್ನು ಪ್ರತ್ಯೇಕವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಾಗಿ ಕೇಂದ್ರ ಸರ್ಕಾರ ನೀಡಿದೆ ಎನ್ನುವುದನ್ನು ಬಿಜೆಪಿ ನಾಯಕರೇ ತಿಳಿಸಬೇಕು.
ಪರಿಶಿಷ್ಟ ಜಾತಿ/ಪಂಗಡದ ಸರ್ಕಾರಿ ನೌಕರರ ಮುಂಬಡ್ತಿ ಸೌಲಭ್ಯವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದಾಗ ಕಣ್ಣು ಮುಚ್ಚಿಕೂತಿದ್ದರು ಬಿಜೆಪಿಯ ದಲಿತ ನಾಯಕರು. ಸುಗ್ರಿವಾಜ್ಞೆ ಮೂಲಕ ಆ ಸೌಲಭ್ಯವನ್ನು ಮತ್ತೆ ಜಾರಿಗೊಳಿಸಿದ್ದು ನಮ್ಮ ಸರ್ಕಾರ .

ಈಗ ನನ್ನ ವಿರುದ್ದ ಘೋಷಣೆ ಕೂಗುತ್ತಿರುವ ಕೆಲವು ನಾಯಕರೇ ನನ್ನ ಪರವಾಗಿ ಜೈಕಾರ ಹಾಕಿದ್ದರು. ಪರಿಶಿಷ್ಟ ಜಾತಿ/ಪಂಗಡದ ಗುತ್ತಿಗೆದಾರರಿಗೆ ಒಂದು ಕೋಟಿ ರೂಪಾಯಿ ವರೆಗಿನ ಸರ್ಕಾರಿ ಕಾಮಗಾರಿಗಳಲ್ಲಿ ಶೇಕಡಾ 18ರಷ್ಟು ಮೀಸಲಾತಿ ನೀಡಿ ಕೆಟಿಟಿಪಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ನಮ್ಮ ಸರ್ಕಾರ. ದೇಶದಲ್ಲಿ ಯಾವ ಸರ್ಕಾರ ಕೂಡಾ ನೀಡದೆ ಇದ್ದ ಸೌಲಭ್ಯವನ್ನು ಮೊದಲ ಬಾರಿಗೆ ಜಾರಿಗೆ ತಂದದ್ದು ನಮ್ಮ ಸರ್ಕಾರ. ಬಿಜೆಪಿ ದಲಿತರ ಪರ ಎಂದು ಹೇಳುತ್ತಿರುವ ನಾಯಕರು ಪ್ರಧಾನಿ ನರೇಂದ್ರ ಮೋದಿಯವರಿಗೆ ಹೇಳಿ ರಾಷ್ಟ್ರಮಟ್ಟದಲ್ಲಿ ದಲಿತರಿಗೆ ಈ ಅನುಕೂಲವನ್ನು ಮಾಡಿಕೊಡಲು ಸಾಧ್ಯವಿದೆಯೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Related Articles

Leave a Reply

Your email address will not be published.

Back to top button