ಅನಾಥವಾಗಿದ್ದ ಅಸ್ವಸ್ಥ ವ್ಯಕ್ತಿಗೆ ಸಾಮಾಜಿಕ ಸೇವಾ ಸಂಸ್ಥೆಯಿಂದ ಆರೈಕೆ
ಚಿಕ್ಕಮಗಳೂರು: ಮಲೆನಾಡು ಭಾಗ ಮೂಡಿಗೆರೆ ತಾಲೂಕಿನಲ್ಲಿ ಸಮಾಜಮುಖಿ ಚಟುವಟಿಕೆಗಳಿಂದ ಗುರುತಿಸಿಕೊಂಡಿರುವ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ತಂಡವು ಸದಾ ಒಂದಿಲ್ಲೊಂದು ಮಾನವೀಯ ಕಾರ್ಯಗಳಿಂದ ಗಮನ ಸೆಳೆಯುತ್ತಿದೆ.
ಪಟ್ಟಣದ ಕೆಎಂ ರಸ್ತೆಯ ಗ್ರೀನ್ ಪಾರ್ಕ್ ಹೋಟೆಲ್ ಬಳಿ ಅನಾಥ ವ್ಯಕ್ತಿಯೋರ್ವ ಸರಿಯಾಗಿ ಮಾತನಾಡಲು ಬಾರದೆ, ಕಾಲು ಬೆರಳಿನಲ್ಲಿ ಗ್ಯಾಂಗ್ರೀನ್ ಆಗಿ ನಡೆದಾಡಲು ಆಗದ ಸ್ಥಿತಿಯಲ್ಲಿ ಇರುವುದನ್ನು ಕಂಡು ಹೊಟೇಲ್ ಮಾಲೀಕ ಸಾಲಿ ಎಂಬವರು ಸಾಮಾಜಿಕ ಸೇವಾ ಸಂಸ್ಥೆಗೆ ಕರೆ ಮಾಡಿ ತಿಳಿಸಿದರು. ತಕ್ಷಣ ಸ್ಥಳಕ್ಕಾಗಮಿಸಿದ ತಂಡವು ಅಸ್ವಸ್ಥ ವ್ಯಕ್ತಿಗೆ ಕಟಿಂಗ್ ಶೇವಿಂಗ್ ಮಾಡಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿ, ಶುಭ್ರಗೊಳಿಸಿದರು. ನಂತರ 108 ಆಂಬುಲೆನ್ಸ್ ಮೂಲಕ ಎಂಜಿಎಂ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು.
ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ಅಧ್ಯಕ್ಷ ಪಿಶ್ ಮೋನು, ಕಾರ್ಯಾಧ್ಯಕ್ಷ ಅಬ್ದುಲ್ ರಹಿಮಾನ್ ಸಹ ಕಾರ್ಯದರ್ಶಿ ಶರೀಫ್, ಫಿಶ್ ಹಸೈನಾರ್ ಹಾಗೂ ಗ್ರೀನ್ ಪಾರ್ಕ್ ಹೋಟೆಲ್ ಮಾಲೀಕ ಸಾಲಿ ಮಾನವೀಯ ಕಾರ್ಯದಲ್ಲಿ ಪಾಲ್ಗೊಂಡಿದ್ದರು.