Uncategorized

ರೈತರಿಗೆ ಮಾರಕವಾಗಿರುವ ಕಾಯ್ದೆಗಳನ್ನು ವಿರೋಧಿಸಿ ವಿಚಾರ ಸಂಕಿರಣ

ಚಿಕ್ಕಮಗಳೂರು: ರೈತರಿಗೆ ಮಾರಕವಾಗಿರುವ ಕಾಯ್ದೆಗಳನ್ನು ವಿರೋಧಿಸಿ ಜಿಲ್ಲೆಯ ಶೃಂಗೇರಿ ಹಾಗೂ ಚಿಕ್ಕಮಗಳೂರಿನಲ್ಲಿ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

ಅ.25ರಂದು ಶೃಂಗೇರಿಯಲ್ಲಿ ಸಂಯುಕ್ತ ರೈತ ಕಾರ್ಮಿಕ ಒಕ್ಕೂಟ ಆಶ್ರಯದಲ್ಲಿ ಗೌರಿಶಂಕರ ಸಭಾಂಗಣದಲ್ಲಿ ಬೆಳಗ್ಗೆ 10ಗಂಟೆಗೆ ವಿಚಾರ ಸಂಕಿರಣ ನಡೆಯಲಿದ್ದು, ವಿಶ್ರಾಂತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನದಾಸ್ ಭಾಗವಹಿಸುವರು. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ನಡೆಯುತ್ತಿರುವ ಕಾರ್ಯಕ್ರಮದ ಯಶಸ್ಸಿಗೆ ಈಗಾಗಲೇ ಕಾರ್ಯಕರ್ತರು ಹಳ್ಳಿಹಳ್ಳಿಗೆ ತೆರಳಿ ಜನಜಾಗೃತಿ ಮೂಡಿಸತೊಡಗಿದ್ದಾರೆ ಎಂದು ತಿಳಿಸಿದರು.

ಅ.27ರಂದು ಬೆಳಗ್ಗೆ 11 ಗಂಟೆಗೆ ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ರೈತರನ್ನು ರಕ್ಷಿಸಿ ಸಂವಿಧಾನ ಉಳಿಸಿ ಘೋಷಣೆಯಡಿ ವಿಚಾರ ಸಂಕಿರಣವನ್ನು ಜನಸಂಸ್ಕೃತಿ ವೇದಿಕೆ ಹಮ್ಮಿಕೊಂಡಿದೆ. ಮೋದಿ ನೇತೃತ್ವದ ಸರ್ಕಾರ ರೈತರ ಸಮಾಧಿ ಮೇಲೆ ರಾಜ್ಯಭಾರ ಮಾಡಲು ಹೊರಟಿದ್ದು, ಒಂದು ವರ್ಷದಿಂದ ಮುಷ್ಕರ ನಡೆಸುತ್ತಿದ್ದರೂ ಪ್ರತಿಪಕ್ಷಗಳನ್ನು ಕರೆದು ಚರ್ಚಿಸುವ ಸೌಜನ್ಯ ತೋರಿಲ್ಲ ಎಂದು ಜನಸಂಸ್ಕೃತಿ ವೇದಿಕೆ ಮುಖಂಡರು ಆರೋಪಿಸಿದ್ದಾರೆ.

ಜನವಿರೋಧಿ ನೀತಿಗಳನ್ನು ಅಡ್ಡಿಪಡಿಸುವ ಶಕ್ತಿಗಳನ್ನು ನಾಶಮಾಡುವ ಯತ್ನಕ್ಕೆ ಸರ್ಕಾರ ಕೈಹಾಕಿದ್ದು, ದೇಶವನ್ನು ವಿಭಜನೆ ಮಾಡಿ ಮಾರಾಟಕ್ಕೆ ಹೊರಟಿದ್ದಾರೆ. ರೈತರ ಹೋರಾಟ ದಮನ ಮಾಡಲು ಮುಳ್ಳುಬೇಲಿ, ಕಂದಕ ನಿರ್ಮಾಣ, ಜಲಫಿರಂಗಿ ಪ್ರಯೋಗ, ರೈತರ ಹತ್ಯೆ ಇನ್ನಿತರೆ ವಿಕೃತ ಕೃತ್ಯಕ್ಕೆ ಕೇಂದ್ರ ಸರ್ಕಾರ ಕೈಹಾಕಿದೆ ಎಂದು ಆರೋಪಿಸಿದ್ದಾರೆ.

ಉದ್ದೇಶಿತ ಕಾಯ್ದೆಗಳಿಂದ ರೈತರ ಬದುಕು ಮೂರಾಬಟ್ಟೆಯಾಗಲಿದೆ ಅಲ್ಲದೆ, ಕೃಷಿ ವಲಯ ಸಂಪೂರ್ಣ ಕಾರ್ಪೊರೇಟರ್ ಹಿಡಿತಕ್ಕೆ ಸಿಲುಕಿ ನಲುಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು ಹಾಗೂ ಜನರಲ್ಲಿ ಇರುವ ಗೊಂದಲಗಳನ್ನು ನಿವಾರಿಸುವ ಉದ್ದೇಶದಿಂದ, ಕರಾಳ ಕಾನೂನನ್ನು ವಿರೋಧಿಸಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಒಕ್ಕೂಟದ ಮುಖಂಡರಾದ ಎಚ್ ಎಂ ರೇಣುಕಾರಾಧ್ಯ, ಎಚ್ ಎಚ್ ದೇವರಾಜ್, ಏಂ ಎಲ್ ಮೂರ್ತಿ, ಗುರುಶಾಂತಪ್ಪ, ರವೀಶ್, ಬಸಪ್ಪ, ಬಿ ಅಮ್ಜದ್, ಬಸವರಾಜ್ ಮತ್ತಿತರರು ಇದ್ದರು

Related Articles

Leave a Reply

Your email address will not be published.

Back to top button