ಧಾರವಾಡ: RSS ರಾಷ್ಟ್ರೀಯ ಮಟ್ಟದ ಬೈಠಕ್ಗೆ ಮೋಹನ್ ಭಾಗವತ್ ಚಾಲನೆ
ಧಾರವಾಡ: ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ಗರಗ ರಸ್ತೆಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಇಂದಿನಿಂದ ಮೂರು ದಿನಗಳ ಕಾಲ RSS ಸಂಘದ ರಾಷ್ಟ್ರೀಯ ಬೈಠಕ್ ಆರಂಭವಾಗಿದೆ. ಆರ್ ಎಸ್ ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಹಾಗೂ ಸರ ಸಂಚಾಲಕ ( ಪ್ರಧಾನ ಕಾರ್ಯದರ್ಶಿ) ದತಾತ್ರೇಯಾ ಹೊಸಬಾಳೆ ಅವರು ಮೂರು ದಿನಗಳ ನಡೆಯುವ ಬೈಠಕ್ ಗೆ ಚಾಲನೆ ನೀಡಿದರು.
RSS ಸಂಘದ ರಾಷ್ಟ್ರೀಯ ಮಟ್ಟದ ಬೈಠಕನಲ್ಲಿ ದೇಶದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ, ಬಾಂಗ್ಲಾದೇಶದಲ್ಲಿ ನವರಾತ್ರಿ ವೇಳೆ ದುರ್ಗಾ ಪೂಜೆ ಸಂದರ್ಭದಲ್ಲಿಯೇ ಹಿಂದೂಗಳ ಮೇಲೆ ನಡೆದ ದಾಳಿಯ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ. ಅಲ್ಲದೆ ಈಗಾಗಲೇ ಆರ್ಎಸ್ಎಸ್ ಬೈಠಕ್ ಹಿನ್ನೆಲೆಯಲ್ಲಿ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಸುತ್ತಮುತ್ತಲಿನ ರಸ್ತೆಗಳು, ಪ್ರಮುಖ ವೃತಗಳು ಕೇಸರಿ ಬಣ್ಣದ ಬಾವುಟಗಳು ಹಾರಾಡುತ್ತಿವೆ.
ಅಕ್ಟೋಬರ್ 28 ಇಂದಿನಿಂದ ಅಕ್ಟೋಬರ್ 30ರವರೆಗೆ ಧಾರವಾಡದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಆರ್ಎಸ್ಎಸ್ ಬೈಠಕ್ ನಡೆಯಲಿದೆ. ಎರಡು ವರ್ಷಗಳ ಬಳಿಕ ಈ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಕಳೆದ ವರ್ಷ ಕೊರೊನಾದಿಂದಾಗಿ ಈ ಸಭೆಯನ್ನು ರದ್ದುಗೊಳಿಸಲಾಗಿತ್ತು. 2025ಕ್ಕೆ ಆರ್ಎಸ್ಎಸ್ ಶತಮಾನೋತ್ಸವ ಇದ್ದು, ಈ ಹಿನ್ನೆಲೆಯಲ್ಲಿ 2021ರಿಂದ 2024ರ ಅವಧಿಯಲ್ಲಿ ಯಾವ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂಬುದರ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. ಅಲ್ಲದೆ ಇದು ಪೂರ್ಣ ಪ್ರಮಾಣದ ಬೈಠಕ್ ಆಗಿದೆ. ಆರ್ಎಸ್ಎಸ್ ಮುಖ್ಯಸ್ಥ, ಸರಸಂಘಚಾಲಕ ಮೋಹನ ಭಾಗವತ್, ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಅಖಿಲ ಭಾರತೀಯ ಕ್ಷೇತ್ರೀಯ ಮತ್ತು ಪ್ರಾಂತ ಸ್ಥರದ ಕಾರ್ಯಕರ್ತರು ಸೇರಿ ದೇಶದ ವಿವಿಧ ರಾಜ್ಯಗಳಿಂದ ಒಟ್ಟು 350ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಬೈಠಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಕೊರೊನಾ ಬಗ್ಗೆ ಎಲ್ಲ ಜಾಗೃತಿ ಇಟ್ಟುಕೊಂಡು ಕಾರ್ಯಕ್ರಮ ಕೈಗೊಂಡಿದ್ದು, ಜುಲೈನಲ್ಲೇ ಈ ಕಾರ್ಯಕ್ರಮದ ಯೋಜನೆ ಹಾಕಲಾಗಿತ್ತು. ಆದರೆ, ಕೊರೊನಾ ಅಲೆ ಕಡಿಮೆಯಾಗಲಿ ಎಂದು ಇದೀಗ ಸಭೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಸಭೆಯಲ್ಲಿ ಯಾವುದೇ ಜನಪ್ರತಿನಿಧಿಗಳಿಗೆ ಭಾಗವಹಿಸಲು ಅವಕಾಶ ಇರುವಿದಿಲ್ಲ.
ಅ. 30ರಂದು ಬೈಠಕ್ ಕೊನೆಯ ದಿನವಾಗಿದ್ದು, ಅಂದು ಬಾಂಗ್ಲಾದೇಶದಲ್ಲಿ ದಾಳಿಗೆ ಒಳಗಾಗಿರುವ ಹಿಂದೂಗಳ ಕುರಿತು ಅಂತಿಮ ತೀರ್ಮಾಣ ಕೈಗೊಳ್ಳುವ ಸಾಧ್ಯತೆಯಿದೆ. ಅಲ್ಲದೆ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗುತ್ತಿರುವುದರ ಕುರಿತು ಕೂಡ ಚರ್ಚೆಯಾಗುವ ಸಾಧ್ಯತೆಯಿದ್ದು, ಹಾಗೇ ಮುಂದಿನ ವರ್ಷ ನಡೆಯುವ ಚುನಾವಣೆಗಳ ಬಗ್ಗೆಯೂ ಚರ್ಚೆ ನಡೆಯುವಬಹುದು ಎಂದು ಹೇಳಲಾಗುತ್ತಿದೆ.