ತಂದೆ ತಾಯಿ ಕಳೆದುಕೊಂಡ ಸಹೋದರಿಯರ ಶಿಕ್ಷಣದ ಜವಾಬ್ದಾರಿ ಹೊತ್ತುಕೊಂಡ ಆರ್. ಅಶೋಕ್
ದಾವಣಗೆರೆ: ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಕಂದಾಯ ಸಚಿವ ಆರ್. ಅಶೋಕ್ರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಸುಗಮವಾಗಿ ನಡೆಯಿತು. ಗ್ರಾಮದ ಜನರ ಸಮಸ್ಯೆ ಆಲಿಸಿದ ಸಚಿವರು ಸ್ಥಳದಲ್ಲಿಯೇ ಸಮಸ್ಯೆ ಪರಿಹರಿಸುವ ಕೆಲಸ ಮಾಡಿದರು. ಕಟ್ಟೆ ಮೇಲೆ ಕುಳಿತು ಜನರ ಸಮಸ್ಯೆ ಕೇಳಿದ ಅಶೋಕ್ ಆದಷ್ಟು ಬೇಗ ಪರಿಹರಿಸುವ ಭರವಸೆ ನೀಡಿದರು.
ಗ್ರಾಮದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಅಹವಾಲು ಸ್ವೀಕಾರ ವೇಳೆ ಇಬ್ಬರು ಸಹೋದರಿ ವಿದ್ಯಾರ್ಥಿನಿಯರ ವಿದ್ಯಾಭ್ಯಾಸದ ಜಬಾಬ್ದಾರಿಯನ್ನು ಆರ್. ಅಶೋಕ್ ತೆಗೆದುಕೊಂಡರು.
ವಿದ್ಯಾರ್ಥಿನಿಯರ ತಂದೆ ತಾಯಿ ಇಬ್ಬರು ಅನಾರೋಗ್ಯದಿಂದ ಮೃತರಾಗಿದ್ದರು. ಹೊನ್ನಾಳಿ ತಾಲ್ಲೂಕಿನ ಅಣಜಿ ನಿವಾಸಿಗಳಾದ ವಿದ್ಯಾರ್ಥಿಗಳಾದ ಮಲ್ಲಿಕಾ ಹಾಗೂ ನಯನಾ ಎಂಬ ಸಹೋದರಿಯರು ತುಂಬಾನೇ ಕಷ್ಟದಲ್ಲಿದ್ದಾರೆ. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ರಟ್ಟಿಹಳ್ಳಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ಶಾಲಾ ಶುಲ್ಕ ಕಟ್ಟಲಾಗದಷ್ಟು ಸಮಸ್ಯೆಯಲ್ಲಿ ಇದ್ದಾರೆ. 10 ನೇ ತರಗತಿಯವರಗೆ ವಿದ್ಯಾಭ್ಯಾಸ ಖರ್ಚು ಭರಿಸುವುದಾಗಿ ಆರ್. ಅಶೋಕ್ ಭರವಸೆ ನೀಡಿದರು.
ಕುಂದೂರು ಗ್ರಾಮ ವಾಸ್ತವ್ಯ ಕಾರ್ಯಕ್ರಮ ವೇಳೆ ಸಹೋದರಿಯರಿಗೆ ಸಾಂತ್ವನ ಹೇಳಿದ ಸಚಿವ ಅಶೋಕ್ ಅವರು, ಸಚಿವ ಸೋಮಣ್ಣ, ನಾನು ಒಳ್ಳೆಯ ಸ್ನೇಹಿತರು.ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವೆಲ್ಲರೂ ಒಟ್ಟಾಗಿದ್ದೇವೆ ಎಂದು ಬೆಂಗಳೂರು ಉಸ್ತುವಾರಿ ಕುರಿತಂತೆ ಪ್ರತಿಕ್ರಿಯೆ ನೀಡಿದರು.
ಬೆಂಗಳೂರು ಉಸ್ತುವಾರಿ ವಿಚಾರ ಕೇಳಿದ್ದಕ್ಕೆ ನಾವೆಲ್ಲಾ ಒಟ್ಟಾಗಿದ್ದೇವೆ ಎಂದ ಸಚಿವ ಆರ್ ಅಶೋಕ್, ಗ್ರಾಮ ವಾಸ್ತವ್ಯಕ್ಕೆ ಬಂದು ಜನರ ಕುಂದುಕೊರತೆ ಆಲಿಸಿದ್ದೇನೆ. ಜನರು ಸ್ಮಶಾನ ಭೂಮಿಗೆ ಜಾಗವಿಲ್ಲದೆ ಇರೋ ಬಗ್ಗೆ ಮಾತನಾಡಿದ್ದಾರೆ. ಇಲ್ಲಿ ಸರ್ಕಾರಿ ಜಮೀನು ಇಲ್ಲದೆ ಇರೋ ಕಾರಣಕ್ಕೆ ರೈತರಿಗೆ ಮನವಿ ಮಾಡಿದ್ದೇನೆ. ಯಾರಾದ್ರೂ ಜಮೀನು ಕೊಡಿ ಹಣ ಕೊಡ್ತಿನಿ ಅಂತ ಹೇಳಿದ್ದೀನಿ. ಸಾಕಷ್ಟು ಜನರು ಬಗರ್ ಹುಕುಂ ಜಮೀನು ಬಗ್ಗೆ ಅರ್ಜಿ ಕೊಟ್ಟಿದ್ದಾರೆ. ಅದರ ಬಗ್ಗೆ ಪರಿಶೀಲನೆ ಮಾಡ್ತೀವಿ ಎಂದು ತಿಳಿಸಿದರು.