Uncategorized

ಪರ್ಸೆಂಟೇಜ್ ವ್ಯವಹಾರ: ನೊಟೀಸ್​ಗೆ ಸಲೀಂ, ಉಗ್ರಪ್ಪ ಉತ್ತರಿಸಿದ್ದಾರೆ: ರೆಹಮಾನ್ ಖಾನ್

ಬೆಂಗಳೂರು: ಜಲಸಂಪನ್ಮೂಲ ಇಲಾಖೆಯಲ್ಲಿ ಪರ್ಸೆಂಟೇಜ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಕುರಿತು ಇತ್ತೀಚೆಗೆ ಮಾಧ್ಯಮದವರ ಎದುರೇ ಮೈಕ್ ಆನ್ ಮಾಡಿ ಪಿಸು ಮಾತನಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ನೊಟೀಸ್ ಗೆ ಪಕ್ಷದ ಮಾಧ್ಯಮ ಸಂಯೋಜಕ ಎಂ.ಎ.ಸಲೀಮ್ ಮತ್ತು ಪಕ್ಷದ ಮುಖಂಡ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಉತ್ತರ ನೀಡಿದ್ದಾರೆ ಎಂದು ಪ್ರದೇಶ ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಕೆ.ರೆಹಮಾನ್ ಖಾನ್ ಹೇಳಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಸ್ತು ಪಾಲನಾ ಸಮಿತಿಗೆ ಈ ಇಬ್ಬರೂ ನೀಡಿರುವ ಉತ್ತರವನ್ನು ತಾವಿನ್ನೂ ನೋಡಿಲ್ಲ. ಸಮಿತಿ ಸಭೆಯಲ್ಲಿ ಅದನ್ನು ನೋಡುತ್ತೇವೆ ಎಂದರು.

ಸಲೀಮ್ ಮಾತನಾಡಿದ್ದು ಮೇಲ್ನೋಟಕ್ಕೆ ಸ್ಪಷ್ಟವಾಗಿತ್ತು. ಹೀಗಾಗಿ ಅವರ ವಿರುದ್ಧ ಕ್ರಮ ಜರುಗಿಸಲಾಯಿತು. ಆದರೆ ಉಗ್ರಪ್ಪ ಅವರ ಮಾತು ಅಸ್ಪಷ್ಟವಾಗಿತ್ತು. ಅವರು ನರೆಯಾಡಿದ್ದು ಕಾಣಿಸುತ್ತಿತ್ತು. ಡಿ.ಕೆ.ಶಿವಕುಮಾರ್ ಅವರ ನೇಮಕಕ್ಕೆ ತಾವು ಶ್ರಮಿಸಿದ್ದನ್ನು ಹೇಳಿದ್ದಾರೆ. ಅದು ದೊಡ್ಡ ತಪ್ಪಲ್ಲ ಎಂದು ರೆಹಮಾನ್ ಖಾನ್ ಹೇಳಿದರು.

ಜಾಫರ್ ಷರೀಫ್ ಮೊಮ್ಮಗನನ್ನ ಸೋಲಿಸಿದ್ದು ಸಿದ್ದರಾಮಯ್ಯ ಎಂಬ ಎಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಜಾಫರ್ ಷರೀಫ್ ಮೊಮ್ಮಗನಿಗೆ ಜೆಡಿಎಸ್ನಿಂದ ಟಿಕೆಟ್ ಕೊಟ್ಟು ಗೆಲ್ಲಿಸಬೇಕಿತ್ತು’ ಎಂದು ಮಾರ್ನುಡಿದರು. ಕುಮಾರ ಸ್ವಾಮಿ ಅವರ ಹೇಳಿಕೆ ಸತ್ಯವಲ್ಲ ಎಂದು ಸ್ಪಷ್ಟಪಡಿಸಿದರು. ಹೀಗೆ ಮಾತನಾಡುತ್ತಾ ಹೋದರೆ ನಾವೂ ಕೂಡ ಸಾಕಷ್ಟು ಮಾತನಾಡಬಹುದು ಎಂದರು.

ಕಾಂಗ್ರೆಸ್ ಜಾತ್ಯಾತೀತ ಪಕ್ಷ. ಹೀಗಾಗಿ ಮುಸ್ಲಿಮರು ಕಾಂಗ್ರೆಸ್ ಜೊತೆಗಿದೆ. ಬಿಜೆಪಿ ಕೂಡ ಜಾತ್ಯಾತೀತವಾದರೆ ಮುಸ್ಲಿಮರು ಪಕ್ಷದ ಜೊತೆಗಿರುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು. ದೇಶದಲ್ಲಿ 22 ಕೋಟಿಗೂ ಅಧಿಕ ಮುಸ್ಲಿಮರಿದ್ದಾರೆ. ಹೀಗಿರುವಾಗ ಅವರು ಹೇಗೆ ಅಲ್ಪಸಂಖ್ಯಾತರಾಗುತ್ತಾರೆ ಎಂದು ಪ್ರಶ್ನಿಸಿದರು.

ಸಿ.ಎಂ ಇಬ್ರಾಹಿಂ ಅವರು ಪಕ್ಷದ ಹಿರಿಯ ನಾಯಕ.. ಅವರನ್ನು ವಿಧಾನ ಪರಿಷತ್ ನಾಯಕ ಸ್ಥಾನ ನೀಡಬೇಕೋ ಬೇಡವೋ ಎಂಬುದಕ್ಕೆ ಸಮುದಾಯದ ಬಣ್ಣ ಕೊಡುವುದು ಬೇಡ. ಅವರು ಜೆಡಿಎಸ್ನಿಂದ ಕಾಂಗ್ರೆಸ್ ಸೇರಿದಾಗ ಸಚಿವರನ್ನಾಗಿ ಮಾಡಲಾಗಿತ್ತು. ನನಗೂ ಅಧಿಕಾರ ನೀಡಿದ್ದು ಕಾಂಗ್ರೆಸ್ ಪಕ್ಷ. ಅವರಿಗೂ ಕಾಂಗ್ರೆಸ್ ಪಕ್ಷ ಅಧಿಕಾರ ನೀಡಿದ್ದು ಎಂಬುದು ಸುಳ್ಳೇ ಎಂದು ಪ್ರಶ್ನಿಸಿದರು.

Related Articles

Leave a Reply

Your email address will not be published. Required fields are marked *

Back to top button