Uncategorized

ರಾಮನಗರ ನಗರಸಭೆ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ನ.9 ರಂದು ಚುನಾವಣೆ ನಿಗದಿ

ರಾಜೇಶ್ ಕೊಂಡಾಪುರ

ರಾಮನಗರ: ಇಲ್ಲಿನ ನಗರಸಭೆ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಗಳಿಗೆ ನವೆಂಬರ್ 9 ರಂದು ಚುನಾವಣೆ ನಿಗದಿಯಾಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಗದ್ದುಗೆಗಾಗಿ ಪೈಪೋಟಿ ತೀವ್ರಗೊಂಡಿದೆ.

ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಕಾಂಗ್ರೆಸ್ ನಲ್ಲಿ 8 ಮಂದಿ ಮಹಿಳೆಯರು ಹಾಗೂ ಪರಿಶಿಷ್ಟ ಜಾತಿ 2 ಸದಸ್ಯರು ಆಯ್ಕೆಯಾಗಿದ್ದು, ಇವರ ಪೈಕಿ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ನಗರಸಭೆಯಲ್ಲಿ ಒಟ್ಟು 31 ಸದಸ್ಯರ ಪೈಕಿ ಕಾಂಗ್ರೆಸ್ – 19, ಜೆಡಿಎಸ್ 11 ಹಾಗೂ ಒಬ್ಬರು ಪಕ್ಷೇತರ ಸದಸ್ಯರು ಇದ್ದಾರೆ. ಈಗಾಗಲೇ ಪಕ್ಷೇತರ ಸದಸ್ಯ ಫೈರೋಜ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಇನ್ನು ಸಂಸದ ಡಿ.ಕೆ. ಸುರೇಶ್ ಸೇರಿ ಕಾಂಗ್ರೆಸ್ ಬಲ 21 ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಸೇರಿ ಜೆಡಿಎಸ್ ಬಲ 12ಕ್ಕೆ ಏರಿಕೆ ಆಗಲಿದೆ. ಅಧಿಕಾರ ನಡೆಸಲು ನಿಚ್ಚಳ ಬಹುಮತ ಹೊಂದಿರುವ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ.

ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಗಳಳ ಮೀಸಲಾತಿ 30 ತಿಂಗಳ ಅವಧಿಯದ್ದಾಗಿದೆ. ವರಿಷ್ಠ ಸ್ಥಾನಕ್ಕೆ ಆಕಾಂಕ್ಷಿಗಳು ಹೆಚ್ಚಾಗಿರುವ ಕಾರಣ ಬಡಂಬಡಿಕೆಯ ಮೂಲಕ ಅಧಿಕಾರ ಹಂಚಿಕೆಯಾಗುವ ಸಾಧ್ಯತೆಗಳಿವೆ. ಸ್ಥಳೀಯ ಕಾಂಗ್ರೆಸ್ ಮಟ್ಟಿಗೆ ಡಿಕೆ ಸಹೋದರರೇ ಹೈಕಮಾಂಡ್ ಆಗಿರುವುದರಿಂದ ಅವರ ನಿರ್ಧಾರವೇ ಅಂತಿಮವಾಗಲಿದೆ. ನ.8 ರವರೆಗೆ ಎರಡೂ ಸ್ಥಾನಗಳಿಗೆ ಹೆಸರು ಘೋಷಣೆ ಅಸಾಧ್ಯ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಪಕ್ಷದಿಂದ ನಗರಸಭೆಗೆ 1ನೇ ವಾರ್ಡಿನಿಂದ ಟಿ.ಜಯಲಕ್ಷ್ಮಮ್ಮ , 4ನೇ ವಾರ್ಡಿನಿಂದ ತೇಜಸ್ವಿನಿ, 10ನೇ ವಾರ್ಡಿನಿಂದ ಮಜತ್ ಜಹಾ, 17ನೇ ವಾರ್ಡಿನಿಂದ ಗಿರಿಜಮ್ಮ, 20ನೇ ವಾರ್ಡಿನಿಂದ ಆಯಿಷಾ ಬಾನು, 27ನೇ ವಾರ್ಡಿನಿಂದ ಬಿ.ಕೆ. ಪವಿತ್ರ , 30ನೇ ವಾರ್ಡಿನಿಂದ ಬಿ.ಸಿ.ಪಾರ್ವತಮ್ಮ, 31ನೇ ವಾರ್ಡಿನಿಂದ ವಿಜಯಕುಮಾರಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಎಲ್ಲಾ ಮಹಿಳೆಯರು ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದಾರೆ. ಹೀಗಾಗಿ ಪೈಪೋಟಿ ಹೆಚ್ಚಾಗಿದೆ. ಮಹಿಳಾ ಸದಸ್ಯರ ಪೈಕಿ ಒಕ್ಕಲಿಗರು, ಲಿಂಗಾಯಿತು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಅಲ್ಪಸಂಖ್ಯಾತರಿದ್ದಾರೆ.

ರಾಮನಗರ ನಗರಸಭೆಯ ಅಧ್ಯಕ್ಷ ಸ್ಥಾನ ಇಲ್ಲಿಯವರಿಗೆ ಲಿಂಗಾಯಿತರಿಗೆ ದೊರಕಿಲ್ಲ. ಹೀಗಾಗಿ ಲಿಂಗಾಯಿತರನ್ನು ಪರಿಗಣಿಸಿ ಎಂದು ವೀರಶೈವ ಲಿಂಗಾಯತರು ಆಗ್ರಹಿಸಿದ್ದಾರೆ. ಪಂಜಾಬ್ ರಾಜ್ಯದಲ್ಲಿ ಮುಖ್ಯ ಮಂತ್ರಿ ಸ್ಥಾನವನ್ನು ದಲಿತರಿಗೆ ಕೊಟ್ಟಿದ್ದೀರಿ. ಇಲ್ಲಿಯೂ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿಯವರಿಗೆ ನೀಡಿ ಮಾದರಿಯಾಗುವಂತೆ ದಲಿತ ಮುಖಂಡರು ಒತ್ತಾಯಿಸುತ್ತಿದ್ದಾರೆ.

ಅಲ್ಪಸಂಖ್ಯಾತರನ್ನು ಪರಿಗಣಿಸಿ ಎಂದು ಆಗ್ರಹಿಸುತ್ತಿರುವವರು ಹೆಚ್ಚಾಗಿದ್ದಾರೆ. ಹೀಗಾಗಿ 8 ಮಂದಿಯ ಪೈಕಿ ಯಾರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಬೇಕು ಎಂಬುದು ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಸದ್ಯಕ್ಕೆ ಅಧ್ಯಕ್ಷ ಸ್ಥಾನಕ್ಕೆ 6 ಮಂದಿಯ ನಡುವೆ ತೀವ್ರ ಪೈಪೋಟಿ ಇದೆ ಎಂದು ಗೊತ್ತಾಗಿದೆ.

ಇನ್ನು ಉಪಾಧ್ಯಕ್ಷ ಸ್ಥಾನ ಪರಿಶೀಷ್ಟ ಜಾತಿಗೆ ಮೀಸಲಾಗಿದ್ದು, 1ನೇ ವಾರ್ಡಿನ ಜಯಲಕ್ಷ್ಮಮ್ಮ ಮತ್ತು 6ನೇ ವಾರ್ಡಿನ ಸೋಮಶೇಖರ್ (ಮಣಿ) ಪರಿಶಿಷ್ಟ ಜಾತಿ ಸದಸ್ಯರಾಗಿದ್ದಾರೆ. ಹೀಗಾಗಿ ಇವರಿಬ್ಬರ ನಡುವೆ ಪೈಪೋಟಿ ಇರಲಿದೆ.

ಒಡಬಂಡಿಕೆ ಮೂಲಕ ಹಂಚಿಕೆ:

ರಾಮನಗರ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳು ಮತ್ತು ಅರ್ಹತೆ ಇರುವವರ ಸಂಖ್ಯೆ ಸಾಕಷ್ಟಿರುವುದರಿಂದ ತಲಾ 10 ತಿಂಗಳ ಅವಗೆ ಒಡಂಬಡಿಕೆಯ ಮೂಲಕ ಅಧಿಕಾರ ಹಂಚಬಹುದು ಎಂದು ಹೇಳಲಾಗುತ್ತಿದೆ. ಕಳೆದ ನಗರಸಭೆಯಲ್ಲಿಯೂ ಕಾಂಗ್ರೆಸ್ ಅಕಾರದಲ್ಲಿತ್ತು. ಆಗಲೂ ಇದೇ ರೀತಿ ಒಡಂಬಡಿಕೆ ರಾಜಕರಣವನ್ನು ಕಾಂಗ್ರೆಸ್ ಅನುಸರಿಸಿತ್ತು. ಆದರೆ ಹೀಗೆ ಅಧಿಕಾರ ಹಂಚಿದರೆ ಯಾರೊಬ್ಬರೂ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಅನಿಸಿಕೆಗಳು ವ್ಯಕ್ತವಾಗಿವೆ.

ಕಳೆದ ಬಾರಿಯ ಅಧಿಕಾರದ ಉದಾಹರಣೆಯನ್ನು ಕಾಂಗ್ರೆಸ್ ಕಾರ್ಯಕರ್ತರೇ ಕೊಡುತ್ತಿದ್ದಾರೆ. ಹೀಗಾಗಿ ಒಗ್ಗಟ್ಟಿನ ಮಂತ್ರ ಜಪಿಸಿ ಪೂರ್ಣಾವಗೆ ಒಬ್ಬರೇ ಅಧ್ಯಕ್ಷರನ್ನು ಆಯ್ಕೆ ಮಾಡಿದರೆ ಕಾಂಗ್ರೆಸ್‌ಗೆ ಉತ್ತಮ ಭವಿಷ್ಯವಿರಲಿದೆ ಎಂಬ ಅಭಿಪ್ರಾಯಗಳು ಕಾಂಗ್ರೆಸ್ ಪಾಳಯದಲ್ಲಿ ವ್ಯಕ್ತವಾಗಿದೆ.

Related Articles

Leave a Reply

Your email address will not be published.

Back to top button