IPL 2021: ರಾಹುಲ್ ಅಬ್ಬರಕ್ಕೆ ಸೋತ ಚೆನ್ನೈ ಸೂಪರ್ ಕಿಂಗ್ಸ್
ದುಬೈ : ಇಂಡಿಯನ್ ಪ್ರೀಮಿಯರ್ ಲೀಗ್ ನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನಾಯಕ ಕೆ.ಎಲ್. ರಾಹುಲ್ ಅವರ ಅಜೇಯ 98 ರನ್ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ವಿಕೆಟ್ ಜಯ ಗಳಿಸಿ ಪ್ರಭುತ್ವ ಸಾಧಿಸಿದೆ.
ಈ ಜಯದೊಂದಿಗೆ ಪಂಜಾಬ್ ಪಡೆ ಅಂಕ ಪಟ್ಟಿಯಲ್ಲಿ 5 ನೇ ಸ್ಥಾನಕ್ಕೆ (ರನ್ ಸರಾಸರಿ ಆಧಾರದ ಮೇಲೆ) ಜಿಗಿದಿದೆ. ಆದರೆ ಪ್ಲೇ ಆಫ್ ಗೆ ಅರ್ಹತೆ ಪಡೆಯಬೇಕಾದರೆ ನಾಳೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ ಸೋಲಬೇಕು ಜತೆಯಲ್ಲಿ ಇಂದು ನಡೆಯುವ ಎರಡನೇ ಪಂದ್ಯದಲ್ಲಿ ಕೆಕೆಆರ್ 180 ರನ್ ಚೇಸ್ ಮಾಡುತ್ತ 71ರನ್ ಅಂತರದಲ್ಲಿ ಸೋಲಬೇಕು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಪಂಜಾಬ್ ತಂಡ ಧೋನಿ ಪಡೆಯನ್ನು ಕೇವಲ 134 ರನ್ ಗೆ ಕಟ್ಟಿ ಹಾಕಿತು. ಫಾಫ್ ಡು ಪ್ಲೆಸಿಸ್ 76 ರನ್ ಗಳಿಸಿ ಚೆನ್ನೈನ ಸಾಧಾರಣ ಮೊತ್ತಕ್ಕೆ ನೆರವಾದರು.
135 ರನ್ ಗಳ ಅಲ್ಪ ಮೊತ್ತವನ್ನು ಬೆಂಬತ್ತಿದ ಪಂಜಾಬ್ ನಾಯಕ ರಾಹುಲ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಇನ್ನೂ 7 ಓವರ್ ಬಾಕಿ ಇರುವಾಗಲೇ 4 ವಿಕೆಟ್ ಕಳೆದುಕೊಂಡು ಜಯದ ಗುರಿ ತಲುಪಿತು.
42 ಎಸೆತಗಳನ್ನು ಎದುರಿಸಿದ ರಾಹುಲ್ 7 ಬೌಂಡರಿ ಮತ್ತು 8 ಸಿಕ್ಸರ್ ನೆರವಿನಿಂದ 98 ರನ್ ಗಳಿಸಿ ಜಯದ ರೂವಾರಿ ಎನಿಸಿದರು. ನಿರೀಕ್ಷೆಯಂತೆ ರಾಹುಲ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.