Uncategorized

ಹಿಂದಿ ಹೇರಿಕೆ ವಿರೋಧಿಸಿ ರಾಮನಗರದಲ್ಲಿ ವಾಟಾಳ್ ಪ್ರತಿಭಟನೆ

ರಾಮನಗರ: ರಾಜ್ಯದಲ್ಲಿ ಹಿಂದಿ ಭಾಷೆ ಹೇರಿಕೆ ವಿರೋಧಿಸಿ ರಾಮನಗರದಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಐಜೂರು ವೃತ್ತದಲ್ಲಿ ಪಂಜು ಹಿಡಿದು ವಿನೂತನ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಹಿಂದಿ ಭಾಷೆ ವಿರುದ್ಧ ಕರಾಳ ದಿನ ಆಚರಣೆ ಮಾಡಲಾಗುತ್ತದೆ. ಪ್ರತಿಭಟನಾಕಾರರು ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು. ಪ್ರತಿಭಟನೆಗೆ ಹಲವು ಕನ್ನಡ ಪರ ಹೋರಾಟಗಾರರು ಸಾಥ್ ನೀಡಿದರು.

ಈ ವೇಳೆ ವಾಟಾಳ್ ನಾಗರಾಜ್ ಉರಿಯುತ್ತಿರುವ ಪಂಜು ಹಿಡಿದು ಕೇಂದ್ರದ ಬಿಜೆಪಿ ಸರ್ಕಾರವು ರಾಜ್ಯದ ಮೇಲೆ ನಿರಂತರವಾಗಿ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಕಿಡಿಕಾರಿದರು. ಕನ್ನಡ ಚಳುವಳಿ ವಾಟಾಳ್ ಪಕ್ಷದಿಂದ ನವೆಂಬರ್ 21 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಜಾಥಾ ನಡೆಯಲಿದೆ. ಹೋರಾಟಕ್ಕೆ ಕರ್ನಾಟಕದ ಜನರು ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಹಿಂದಿ ಹೇರಿಕೆಯಿಂದ ಪ್ರಾದೇಶಿಕ ಭಾಷೆಗಳಿಗೆ ದಕ್ಕೆಯಾಗುತ್ತದೆ ಹಾಗಾಗಿ ಕನ್ನಡ ಚಳುವಳಿ ವಾಟಾಳ್ ಪಕ್ಷದಿಂದ ನವೆಂಬರ್ 21ರಂದು ಕರಾಳ ದಿನ ಎಂದು ಘೋಷಣೆ ಮಾಡಿ ಹಿಂದಿ ವಿರೋಧಿ ಚಳುವಳಿ ನಡೆಸಲಾಗುತ್ತದೆ ಎಂದರು.

ನ.21 ರಂದು ರಾಜ್ಯಾದ್ಯಂತ ಹಿಂದಿ ವಿರೋಧಿ ಹೋರಾಟ ಮಾಡುತ್ತೇವೆ. ಅಂದು ಬೆಂಗಳೂರಿನ ಮೈಸೂರು ಬ್ಯಾಂಕ್, ಕೇಂಪೇಗೌಡ ರಸ್ತೆ ಹಾಗೂ ಎಲ್ಲಾ ಬ್ಯಾಂಕ್ಗಳ ಮುಂದೆ ಪ್ರತಿಭಟನೆ ನಡೆಸಿ ಹಿಂದಿ ಬೂತ ದಹನ ಮಾಡುವುದಾಗಿ ವಾಟಾಳ್ ನಾಗರಾಜ್ ಘೋಷಣೆ ಮಾಡಿದ ಅವರು, ಬ್ಯಾಂಕ್ ನಲ್ಲಿ ಹಿಂದಿ ಬರಹದ ಚೆಕ್ ಕೊಡ್ತಾರೆ. ಬ್ಯಾಂಕ್ ಗಳಿಗೆ ಕನ್ನಡಿಗರ ಹಣ ಬೇಕು, ಆದರೆ ಕನ್ನಡ ಭಾಷೆ ಬೇಡ. ಇದರ ವಿರುದ್ಧ ಬ್ಯಾಂಕ್ ಗಳಿಗೆ ನುಗ್ಗುತೇವೆ. ರಾಜ್ಯದ ಸಂಸದರು ಹಿಂದಿ ಭಾಷೆ ಹೇರಿಕೆಯ ವಿರುದ್ಧ ಲೋಕಸಭೆಯಲ್ಲಿ ಮಾತನಾಡಬೇಕು. ಹಿಂದಿ ಭಾಷೆ ಹೇರಿಕೆ ವಿರುದ್ಧ ಇಡೀ ರಾಜ್ಯ ಒಂದಾಗಬೇಕಾಗಿದೆ ಎಂದು ನುಡಿದರು.

ಹಿಂದಿ ಹೇರಿಕೆಯಿಂದ ಕನ್ನಡ ಬೆಳೆಯಲ್ಲ, ಕನ್ನಡಕ್ಕೆ ಅವಮಾನ ಆಗುತ್ತೆ. ರಾಜ್ಯದಲ್ಲಿ ಗುಜರಾತಿ, ತಮಿಳು, ಮಲಯಾಳಿಗಳು ತಿಂದು ತೇಗುತಿದ್ದಾರೆ. ಮುಂದಿನ ದಿನಗಳಲ್ಲಿ ಹಿಂದಿ ಭಾಷೆ ಪ್ರಬಲ ಆಗಿ ಕನ್ನಡ ಪತ್ರಿಕೋದ್ಯಮಕ್ಕೆ ಅಪಾಯ ಆಗುತ್ತೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಹಿಂದಿ ಭಾಷೆ ಹೇರಿಕೆ ವಿರುದ್ಧ ಕ್ರಿಯಾ ಸಮಿತಿ ರಚನೆ ಮಾಡುತ್ತೇವೆ. ಸರ್ಕಾರಿ ಸಮಾರಂಭದಲ್ಲಿ ಕನ್ನಡದಲ್ಲಿ ನಡೆಯಬೇಕು. ಕನ್ನಡ ಬಿಟ್ಟು ಯಾವುದೇ ಸಮಾರಂಭ ನಡೆಸಿದ್ರೆ ನಾವು ನುಗ್ಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಅಲ್ಲದೇ ಹಿಂದಿ ಚಲನಚಿತ್ರಗಳನ್ನು ಕರ್ನಾಟಕದಲ್ಲಿ ತೆರೆ ಕಾಣಲು ಬಿಡುವುದಿಲ್ಲ, ರಾಜ್ಯ ಸರ್ಕಾರ ರಾಜ್ಯದಲ್ಲಿ ಹಿಂದಿ ಹೇರಿಕೆ ಮಾಡುವುದನ್ನು ಬಿಟ್ಟು ಕನ್ನಡಕ್ಕೆ ಹೆಚ್ಚಿನ ಒತ್ತು ನೀಡುವಂತೆ ಆಗ್ರಹಿಸಿದರು. ಹಿಂದಿ ಭಾಷೆ ಹೇರಿಕೆಯ ವಿರುದ್ಧದ ನಮ್ಮ ಹೋರಾಟಕ್ಕೆ ಕನ್ನಡಿಗರು ಬೆಂಬಲ ನೀಡುವಂತೆ ಇದೇ ವೇಳೆ ವಾಟಾಳ್ ಮನವಿ ಮಾಡಿಕೊಂಡರು. ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಜಗದೀಶ್, ಸಾಮಾಜಿಕ ಹೋರಾಟಗಾರ್ತಿ ಹುಚ್ಚಯ್ಯನದೊಡ್ಡಿ ಮಂಗಳಮ್ಮ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Related Articles

Leave a Reply

Your email address will not be published.

Back to top button