ರೈತ ಹೋರಾಟ ಬಗ್ಗುಬಡಿಯಲು ಕೇಸರಿ ಗೂಂಡಾಗಿರಿ; ಸಿಪಿಐಎಂಎಲ್ ರೆಡ್ ಸ್ಟಾರ್ ಆರೋಪ
ಚಿಕ್ಕಮಗಳೂರು: ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ಹೋರಾಟನಿರತ ರೈತರ ಮೇಲೆ ನಡೆದ ಕ್ರೂರ ದಾಳಿ ಮತ್ತು ಹತ್ಯೆಯನ್ನು ಖಂಡಿಸಿ ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷದಿಂದ ಮೂಡಿಗೆರೆ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.
ರೈತರ ಐತಿಹಾಸಿಕ ಹೋರಾಟವನ್ನು ಬಗ್ಗುಬಡಿಯುವ ವ್ಯವಸ್ಥಿತ ಯೋಜನೆಯಾಗಿ, ಉತ್ತರ ಪ್ರದೇಶದಲ್ಲಿ ಕೇಸರಿ ಗೂಂಡಾಗಿರಿ ನಡೆದಿದೆ ಎಂದು ಪಕ್ಷದ ಮುಖಂಡ ನಾರಾಯಣ ಆರೋಪಿಸಿದರು.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರ ಅವರ ಬೆಂಗಾವಲು ಪಡೆ ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ವಾಹನ ಹರಿಸಿ ದಾಳಿ ಮಾಡಿ, ಮೂವರು ರೈತರನ್ನು ಹತ್ಯೆ ಮಾಡಿದ್ದಾರೆ. ಒಟ್ಟು ಒಂಭತ್ತು ರೈತರು ಬಲಿಯಾಗಿದ್ದಾರೆ. ಅಲ್ಲದೆ ಸಚಿವರ ಪುತ್ರ ಆಶಿಶ್ ರೈತರ ಮೇಲೆ ಗುಂಡು ಹಾರಿಸಿದಾಗ ಓರ್ವ ರೈತ ಮತ್ತು ಹಲವು ರೈತರು, ಮುಖಂಡರು ಗಾಯಗೊಂಡಿದ್ದಾರೆ. ಕೇಸರಿ ಗೂಂಡಾಗಳು ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಇತ್ತೀಚೆಗೆ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ನಂತರದಲ್ಲಿ ಈ ಕೃತ್ಯಗಳು ನಡೆದಿವೆ ಎಂದು ಆರೋಪಿಸಿದರು.
ಪ್ರಕರಣದ ರೂವಾರಿ ಸಚಿವ ಮತ್ತು ಪುತ್ರ ಸಹಿತ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು. ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ಪ್ರಕರಣದ ತನಿಖೆಯಾಗಬೇಕು ಹಾಗೂ ಹತ್ಯೆಗೀಡಾದ ರೈತರ ಕುಟುಂಬಗಳಿಗೆ ತಲಾ 1 ಕೋಟಿ ಪರಿಹಾರ ನೀಡಬೇಕೆಂದು ಎಂದು ಆಗ್ರಹಿಸಿದರು.
ನಾರಾಯಣ, ಶೇಖರ್, ಕೃಷ್ಣಪ್ಪ, ಕೃಷ್ಣ, ಸಂತೋಷ್, ವಿಠಲ, ಪ್ರಸಾದ್ ಗುರುಪ್ರಸಾದ್ ಇದ್ದರು.