Uncategorized

ರೋಗಿಗಳನ್ನು ಮರದ ಕಂಬದಲ್ಲಿ ಹೊತ್ತು ಸಾಗಬೇಕು; ಈಚಲುಹೊಳೆ ಹಾಡಿಯ ಕರುಣಾಜನಕ ಕಥೆ

ಕಿರುಗುಂದ ರಫೀಕ್

ಚಿಕ್ಕಮಗಳೂರು: ಅರೇ.. ಇದೇನಿದು!? ಕಾಡಿನ ದಾರಿಯಲ್ಲಿ ಮರದ ಕಂಬದಲ್ಲಿ ಬಟ್ಟೆಗಳಿಂದ ಜೋಳಿಗೆಯ ಹಾಗೆ ಕಟ್ಟಿ ಏನನ್ನೋ ಹೆಗಲಮೇಲೆ ಹೊತ್ತುಕೊಂಡು ಸಾಗುತ್ತಿದ್ದಾರೆ ಇಬ್ಬರು..!, ಯಾವುದೋ ಪ್ರಾಣಿಯನ್ನು ಬೇಟೆಯಾಡಿ ಹೊತ್ತುಕೊಂಡು ಹೋಗುತ್ತಿರುವರೋ ಎಂಬಂತೆ ಭಾಸವಾಗುತ್ತದೆ ಆ ದೃಶ್ಯ. ಕೊನೆಗೆ ಕಡಿದಾದ ರಸ್ತೆಯೊಂದರ ಬಳಿ ಜೋಳಿಗೆಯನ್ನು ಇಳಿಸಿ, ಕಂಬಳಿಯನ್ನು ಸರಿಸಿದಾಗಲೇ ತಿಳಿಯುತ್ತದೆ ಅದರೊಳಗೆ ಓರ್ವ ಮಹಿಳೆಯನ್ನು ಹೊತ್ತು ತರಲಾಗಿದೆ ಎಂಬುದು!

ಹೌದು. ಹೇಳಲಷ್ಟೇ ಚಿಕ್ಕಮಗಳೂರು ʼಕಾಫಿ ನಾಡುʼ. ಈ ಜಿಲ್ಲೆಯ ಒಳಹೊಕ್ಕರೆ ಜನರ ಬದುಕಿನ ನೈಜ ಸ್ಥಿತಿಯೇನೆಂದು ತಿಳಿಯುತ್ತದೆ. ಇಲ್ಲಿನ ಗುಡ್ಡಗಾಡುಗಳ ನಡುವೆ ಎಷ್ಟೋ ಕುಗ್ರಾಮಗಳಲ್ಲಿ, ಹಾಡಿಗಳಲ್ಲಿ ಜನರು ನಾಗರಿಕ ಸೌಲಭ್ಯಗಳಿಂದ ವಂಚಿತವಾಗಿ ನರಕಸದೃಶ ಬದುಕು ಸಾಗಿಸುತ್ತಿದ್ದಾರೆ.

ಮುಖ್ಯವಾಗಿ ರೋಗಿಗಳನ್ನು, ಹಿರಿಯ ನಾಗರಿಕರನ್ನು ಕರೆದೊಯ್ಯಲು ರಸ್ತೆಗಳೇ ಇಲ್ಲ. ಇದಕ್ಕೆ ಸ್ಪಷ್ಟ ನಿದರ್ಶನವಾಗಿ ಕಾಣಿಸಿದೆ ಕಳಸ ತಾಲೂಕು ವ್ಯಾಪ್ತಿಯ ಕಳಕೋಡು ಗ್ರಾಮದ ಈಚಲುಹೊಳೆ ಎಂಬ ಹಾಡಿ.

ಇಲ್ಲಿ ಯಾರಾದರೂ ಅನಾರೋಗ್ಯಕ್ಕೀಡಾದರೆ ಅವರನ್ನು ಆಸ್ಪತ್ರೆಗೆ ಹೊತ್ತುಕೊಂಡೇ ಸಾಗಬೇಕಾಗಿದೆ. ಮರದ ಕಂಬಕ್ಕೆ ಜೋಳಿಗೆ ರೀತಿಯಾಗಿ ಬಟ್ಟೆ, ಸೀರೆಗಳನ್ನು ಕಟ್ಟಿ ಅದರೊಳಗೆ ರೋಗಿಯನ್ನು ಮಲಗಿಸಿ ಇಬ್ಬರು ಹೆಗಲುಕೊಟ್ಟು ಹೊತ್ತೊಯ್ಯುವಂತಹ ಕರುಣಾಜನಕ ದೃಶ್ಯಗಳಿಗೆ ಇದು ಸಾಕ್ಷಿಯಾಗಿದೆ. ನಿನ್ನೆಯಷ್ಟೇ ಓರ್ವ ಅನಾರೋಗ್ಯ ಮಹಿಳೆಯನ್ನು ಇದೇ ರೀತಿ ಕಟ್ಟಿ ಹೊತ್ತೊಯ್ದಿರುವ ದೃಶ್ಯಾವಳಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದ್ದು, ಇಲ್ಲಿನ ಜನರ ದುಸ್ಥಿತಿಯನ್ನು ಕಂಡು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಜನರು ಹಿಡಿಶಾಪ ಹಾಕತೊಡಗಿದ್ದಾರೆ.

ಈಚಲುಹೊಳೆ ಹಾಡಿ ಕಳಸ ತಾಲೂಕು ಕೇಂದ್ರದಿಂದ 16 ಕಿ ಮೀ ದೂರದಲ್ಲಿದೆ. ಕಳಕೋಡು ಗ್ರಾಮದವರೆಗೆ ರಸ್ತೆ ಇದೆಯಾದರೂ ಭಾರೀ ಮಳೆಯಿಂದಾಗಿ ಇತ್ತೀಚೆಗೆ ಈ ರಸ್ತೆಯೂ ಹಾಳಾಗಿದೆ. ಕಳಕೋಡು ಗ್ರಾಮದಿಂದ 4 ಕಿ.ಮೀ ದೂರದಲ್ಲಿರುವ ಈಚಲು ಹೊಳೆ ಎಂಬ ಹಾಡಿಗೆ ಸೂಕ್ತ ರಸ್ತೆ ಸೌಲಭ್ಯವಿಲ್ಲದ ಪರಿಣಾಮ ಇಲ್ಲಿನ ನಿವಾಸಿಗಳು ಕಾಡಿನ ಮಧ್ಯೆ ಭದ್ರಾ ನದಿಯ ತೀರದಲ್ಲಿ ಕಡಿದಾದ ಕಚ್ಚಾ ದಾರಿಯಲ್ಲಿ ಕಲ್ಲುಮುಳ್ಳುಗಳನ್ನು ದಾಟಿಕೊಂಡು ಸಂಚರಿಸಬೇಕಾದ ದುಸ್ಥಿತಿಯಿದೆ.

ಈಚಲುಹೊಳೆ ಹಾಡಿಯಲ್ಲಿ ಸುಮಾರು 13 ಮನೆಗಳಿವೆ. ಬಹುತೇಕ ಜನರು ಆದಿವಾಸಿ ಸಮುದಾಯದವರು. ಸುಮಾರು 60ಕ್ಕೂ ಹೆಚ್ಚು ಜನಸಂಖ್ಯೆಯಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಅಗತ್ಯ ಕೆಲಸಕ್ಕಾಗಿ ಜನರು ಕಳಸ ಪಟ್ಟಣಕ್ಕೇ ಬರಬೇಕಾಗಿದೆ.

ಕಳಕೋಡು ಗ್ರಾಮದಿಂದ ಈಚಲುಹೊಳೆಗೆ ಸೂಕ್ತ ರಸ್ತೆ ನಿರ್ಮಿಸಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಾಡಿಯ ಜನರು ಹಲವಾರು ಬಾರಿ ಮನವಿ ಮಾಡಿದ್ದಾರೆ. ಆದರೆ ರಸ್ತೆ ನಿರ್ಮಾಣದ ಜಾಗ ಅರಣ್ಯ ಇಲಾಖೆಗೆ ಸೇರಿದೆ ಎನ್ನುವ ನೆಪದಲ್ಲಿ ರಸ್ತೆ ನಿರ್ಮಾಣದ ಕಾರ್ಯ ಇನ್ನೂ ಆಗಿಲ್ಲ. ಇದರಿಂದ ಜನರು ಅನಾಗರಿಕರಂತೆ ಬದುಕುವ ಸ್ಥಿತಿ ನಿರ್ಮಾಣವಾಗಿದೆ.

ಕಳಸ ಭಾಗದಲ್ಲಿ ಹಿಂದೆ ನಕ್ಸಲರ ಪ್ರಭಾವವಿತ್ತು. ಬಹುತೇಕ ಗ್ರಾಮಗಳು ನಕ್ಸಲ್ ಪೀಡಿತ ಗ್ರಾಮಗಳೆಂದು ಪರಿಗಣಿಸಿ ಆಗಿನ ಸರ್ಕಾರಗಳು ನಕ್ಸಲ್ ಪ್ಯಾಕೇಜ್ ಅಡಿಯಲ್ಲಿ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕೋಟ್ಯಂತರ ರೂ. ಅನುದಾನ ನೀಡಿತ್ತು. ಆದರೆ ಈ ನಕ್ಸಲ್ ಪ್ಯಾಕೇಜ್ ಹಣ ನೈಜ ಫಲಾನುಭವಿಗಳಿಗೆ ತಲುಪಿಲ್ಲ ಎಂಬುದಕ್ಕೆ ಈಚಲುಹೊಳೆ ಗಿರಿಜನರ ಹಾಡಿ ಸಾಕ್ಷಿ ಹೇಳುತ್ತಿದೆ.

“ರಸ್ತೆ ನಿರ್ಮಿಸುವಂತೆ ಹಲವು ವರ್ಷಗಳಿಂದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಲೇ ಮಾಡಿದ್ದೇವೆ. ಆದರೆ ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ ಎಂಬ ಕಾರಣಕ್ಕೆ ಇಂದಿಗೂ ರಸ್ತೆ ನಿರ್ಮಿಸಿಲ್ಲ. ರೋಗಿಗಳನ್ನು ಮರದ ಕಂಬಕ್ಕೆ ಕಟ್ಟಿಕೊಂಡು ಹೊತ್ತು ಸಾಗಿಸಬೇಕಾದ ಸಂಕಟ ನಮ್ಮದಾಗಿದೆ”
-ಈಚಲುಹೊಳೆ ಗ್ರಾಮಸ್ಥರು

Related Articles

Leave a Reply

Your email address will not be published. Required fields are marked *

Back to top button