ನೀರಿನ ಗಲಾಟೆ ನೋಡಿದರು.. ಹುಡುಗಿ ಕೊಡಲ್ಲ ಅಂದ್ರು… ಎಲ್ಲಿ ಆಗಿದ್ದು ಗೊತ್ತಾ…?
ದಾವಣಗೆರೆ: ರಸ್ತೆ ಆಗಲಿಲ್ಲ ಎಂಬ ಕಾರಣಕ್ಕೆ ದಾವಣಗೆರೆ ಜಿಲ್ಲೆಯ ಮಾಯಕೊಂಡ ರಾಂಪುರದ ಯುವತಿ ಬಿಂದು ಮದುವೆಯಾಗಲ್ಲ ಎಂಬ ಪಟ್ಟು ಹಿಡಿದು ಯಶಸ್ವಿಯಾದದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದ್ರೆ, ಈಗ ಮತ್ತೊಂದು ವಿಚಿತ್ರ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರು ಗ್ರಾಮದಲ್ಲಿ ನಡೆದಿದೆ.
ಹೌದು. ಮಲೇಬೆನ್ನೂರಿನಲ್ಲಿ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ ಎಂಬ ಕಾರಣಕ್ಕೆ ಮದುವೆ ಮುರಿದು ಬಿದ್ದಿದೆ. ಕಳೆದ ಹದಿನೈದು ದಿನಗಳಿಂದ ಮಲೇಬೆನ್ನೂರಿನ ಪುರಸಭೆಯ 2 ನೇ ವಾರ್ಡ್ ನಲ್ಲಿ ನೀರು ಬರುತ್ತಿರಲಿಲ್ಲ. ಇದು ಸ್ಥಳೀಯರು ರೊಚ್ಚಿಗೇಳುವಂತೆ ಮಾಡಿತು. ಮಾತ್ರವಲ್ಲ, ಪುರಸಭೆ ಎದುರು ಖಾಲಿ ಕೊಡಗಳನ್ನಿಟ್ಟು ಪ್ರತಿಭಟನೆ ನಡೆಸುತ್ತಿದ್ದರು. ಕಳೆದ ಹದಿನೈದು ವರ್ಷಗಳಿಂದಲೂ ಈ ಸಮಸ್ಯೆ ಇದ್ದು, ಜನರು ನೀರು ಸಿಗದೇ ಪರದಾಟ ನಡೆಸುತ್ತಿದ್ದರು. ಹೋರಾಟ ತೀವ್ರಗೊಳಿಸಿದ್ದರು.
ಇನ್ನು ಈ ವಾರ್ಡ್ ನ ಯುವಕನೊಬ್ಬನ ಜೊತೆ ಬೇರೆ ಊರಿನ ಯುವತಿ ಮದುವೆಗೆ ಬಹುತೇಕ ಮಾತುಕತೆ ನಡೆದಿತ್ತು. ಬಳಿಕ ಹುಡುಗಿಯ ಮನೆಯ ಕಡೆಯವರು ಈ ಗ್ರಾಮಕ್ಕೆ ಹುಡುಗನ ಮನೆ ನೋಡಿಕೊಂಡು ಹೋಗಲು ಬಂದಿದ್ದರು. ಆಗ ನೀರು ಬರುತಿತ್ತು. ನೀರು ಹಿಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯರ ನಡುವೆ ಗಲಾಟೆ ನಡೆದಿದೆ. ಇದನ್ನು ನೋಡಿದ ಹುಡುಗಿಯ ಪೋಷಕರು ಹಾಗೂ ಸಂಬಂಧಿಕರು ಮದುವೆಗೆ ನೋ ಎಂದಿದ್ದಾರೆ. ಆ ನಂತರ ಯುವಕನ ಮನೆಯ ಕಡೆಯವರು ಹೇಗೋ ಸಮಾಧಾನ ಮಾಡಿ ಮನೆಗೆ ಕರೆದುಕೊಂಡು ಬಂದಿದ್ದಾರೆ.
ಬಂದು ಎಲ್ಲಾ ಮಾತುಕತೆ ನಡೆಸಿ ಹೋದ ಹುಡುಗಿಯ ಕಡೆಯವರು ಆಮೇಲೆ ಏನನ್ನೂ ಹೇಳಿಲ್ಲ. ಮದುವೆ ಮಾಡಿಸುವ ಬ್ರೋಕರ್ ಗೆ ಈ ವಿಚಾರ ಕೇಳಿದರೆ ಅವ್ರೇನೂ ಹೇಳುತ್ತಿಲ್ಲ ಎಂದಷ್ಟೇ ಹೇಳಿದ್ದಾರೆ. ಆ ನಂತರ ಹುಡುಗನ ಕಡೆಯವರು ಹುಡುಗಿ ಕಡೆಯವರಿಗೆ ಫೋನ್ ಮಾಡಿ ವಿಚಾರಿಸಿದಾಗ ನೀರಿಗಾಗಿ ಆ ಪರಿ ಗಲಾಟೆ ನೋಡಿದ್ದೇವೆ. ಯಾವುದೇ ಕಾರಣಕ್ಕೂ ಮಲೇಬೆನ್ನೂರಿಗೆ ಕೊಡುವುದಿಲ್ಲ ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ.
ನೀರಿನ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ನೆಂಟಸ್ಥನ ಅರ್ಧಕ್ಕೆ ಮೊಟಕುಗೊಂಡಿದೆ. ಮಲೆಬೆನ್ನೂರಿನ 2, 3 ಮತ್ತು 5 ನೇ ವಾರ್ಡ್ ನಲ್ಲಿ ಕಳೆದ ಹದಿನೈದು ದಿನಗಳಿಂದ ನೀರು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಪುರಸಭೆ ಎದುರು ಗಲಾಟೆ ನಡೆಸಿದ್ದರು. ನೆಂಟಸ್ತಿಕೆ ಬೆಳೆಸಲು ಭಾನುವಳ್ಳಿಯಿಂದ ಮಲೆಬೆನ್ನೂರಿಗೆ ಬಂದಿದ್ದ ನೆಂಟರು ವಾಪಸ್ ಆಗಿದ್ದಾರೆ. ಒಟ್ಟಿನಲ್ಲಿ ನೀರು ಬಾರದಿದ್ದಕ್ಕೆ ಹಾಗೂ ಗಲಾಟೆ ನಡೆದಿದ್ದಕ್ಕೆ ಮದುವೆಯೇ ಮುರಿದು ಬಿದ್ದಿದ್ದು ವಿಪರ್ಯಾಸವೇ ಸರಿ.