ಅರ್ಚಕರ ನೇಮಕದಲ್ಲಿ ನಾಟಕ ಬೇಡ; ಸರ್ಕಾರಕ್ಕೆ ಪ್ರಮೋದ್ ಮುತಾಲಿಕ್ ಎಚ್ಚರಿಕೆ
ಚಿಕ್ಕಮಗಳೂರು: ದತ್ತಪೀಠಕ್ಕೆ ಅರ್ಚಕರ ನೇಮಕದ ವಿಚಾರದಲ್ಲಿ, ಸಮಿತಿ ರಚನೆ, ಅಹವಾಲು ಸ್ವೀಕಾರ ಇತ್ಯಾದಿ ನಾಟಕವಾಡುವ ಬದಲು ತಕ್ಷಣ ಹಿಂದೂ ಅರ್ಚಕರನ್ನು ನೇಮಿಸಬೇಕು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಹೈಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹವಾದದ್ದು. ಹಿಂದೆ ಕಾಂಗ್ರೆಸ್ ಸರ್ಕಾರ ತುಷ್ಠೀಕರಣದ ಭಾಗವಾಗಿ ಮುಜಾವರನನ್ನು ಪೂಜೆಗೆ ನೇಮಿಸಿ, ಮೂರ್ಖತನ ಪ್ರದರ್ಶಿಸಿತ್ತು. ಬಳಿಕ ಈವರೆಗೆ ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಸಬೂಬು ಹೇಳುತ್ತಾ ದಿನದೂಡಲಾಯಿತು. ಈಗ ಕೋರ್ಟ್ ಆದೇಶ ಬಂದಿದೆ. ಬಿಜೆಪಿಯವರದೇ ಸರ್ಕಾರವಿದೆ. ಮೀನಮೇಷ ಎಣಿಸದೆ ಕಾಲಹರಣ ಮಾಡದೆ, ಹಿಂದೂಗಳಿಗೆ ಸಿಕ್ಕ ಅವಕಾಶಕ್ಕೆ ಕಲ್ಲು ಹಾಕಬೇಡಿ ಎಂದು ಒತ್ತಾಯಿಸಿದರು.
ಈಗ ಸಮಿತಿ ರಚನೆ ಮಾಡಿ, ಸಾರ್ವಜನಿಕ ಅಹವಾಲು ಸ್ವೀಕರಿಸುವ ಅಗತ್ಯವಿಲ್ಲ. ಮೂವತ್ತು ವರ್ಷಗಳಿಂದ ನಿರಂತರ ಶ್ರಮಪಟ್ಟು ದಾಖಲೆಗಳನ್ನು ಸಲ್ಲಿಸಲಾಗಿದೆ ಮತ್ತೆ ಹಿಂದುಗಳನ್ನು ಮೂರ್ಖರನ್ನಾಗಿಸಿ ಮೋಸ ಮಾಡಬೇಡಿ. ಹಿಂದು ಅರ್ಚಕರ ನೇಮಕಕ್ಕೆ ಸಂಬಂಧಿಸಿ ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಂಡು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡಲಿ. ವಿರೋಧಿಗಳು ಬೇಕಾದರೆ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರಲಿ. ಅದನ್ನು ತೆರವು ಮಾಡಿಸಬಹುದು. ಒಂದೊಮ್ಮೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾದರೆ ಹಿಂದೂ ಸಮಾಜ ಎಂದಿಗೂ ಕ್ಷಮಿಸದು ಎಂದು ಎಚ್ಚರಿಕೆ ನೀಡಿದರು.