Uncategorized

ಅಂಕೋಲಾ : ವಿಮಾನ ನಿಲ್ದಾಣದಿಂದ ನೆಲೆ ಕಳೆದುಕೊಳ್ಳುವವರ ಪುನರ್ವಸತಿಗೆ ಸ್ಥಳೀಯರ ವಿರೋಧ

ಕಾರವಾರ : ಅದು ಸ್ವಾತಂತ್ರ್ಯ ಚಳವಳಿ ವೇಳೆ ಸ್ಥಳೀಯರಲ್ಲಿ ಸಂಗ್ರಾಮದ ಕಿಚ್ಚು ಹೊತ್ತಿಸಿದ ಜಾಗ. ಮಾತ್ರವಲ್ಲದೆ ನಿತ್ಯ ಸಾವಿರಾರು ಗೋವುಗಳು ಸ್ವಚ್ಚಂದವಾಗಿ ಓಡಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವ ಹಚ್ಚ ಹಸಿರಿನ ಹುಲ್ಲಿನ ಬೇಣ. ಆದರೆ ಇದೀಗ ವಿಮಾನ ನಿಲ್ದಾಣದಿಂದ ನೆಲೆ ಕಳೆದುಕೊಳ್ಳುವವರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಮುಂದಾಗಿದ್ದು, ಇದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿ ಇಂದು ವಿಭಿನ್ನ ಪ್ರತಿಭಟನೆ ಮೂಲಕ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸೀಬರ್ಡ್ ಎರಡನೇ ಹಂತದ ಕಾಮಗಾರಿ ವೇಳೆ ಅಂಕೋಲಾ ತಾಲೂಕಿನ ಅಲಗೇರಿಯಲ್ಲಿ ನಾಗರಿಕ ವಿಮಾನ ನಿಲ್ದಾಣಕ್ಕೆ ಈಗಾಗಲೇ ಸಿದ್ದತೆ ನಡೆಸಲಾಗಿದೆ. ಈ ಸಂಬಂಧ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆಯೂ ಪ್ರಾರಂಭವಾಗಿದ್ದು, ಸ್ಥಳೀಯರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ತಾಲೂಕಿನ ಬಾಸ್ಗೋಡು ಗ್ರಾಮದ ನಡುಬೇಣದಲ್ಲಿಯೂ ಜಾಗ ಗುರುತಿಸಲಾಗಿದೆ. ಆದರೆ ಇದು ಸ್ಥಳೀಯರ ತೀವ್ರ ವಿರೋಧಕ್ಕೆ ಕಾರಣವಾಗಿದೆ.ಪ್ರಸ್ತುತ ಗುರುತಿಸಿರುವ ಜಾಗವು ಗೋಮಾಳವಾಗಿದ್ದು, ನಿತ್ಯ ಸಾವಿರಾರು ಗೋವುಗಳು ಹುಲ್ಲು ಮೇಯುವ ಸ್ಥಳವಾಗಿದೆ.ಅಲ್ಲದೆ ಸ್ವಾತಂತ್ರ್ಯ ಚಳವಳಿ ವೇಳೆ ಕ್ವಿಟ್ ಇಂಡಿಯಾ ಮತ್ತು ಉಪ್ಪಿನ ಸತ್ಯಾಗ್ರಹ ಚಳವಳಿಯ ಬಗ್ಗೆ ಸಭೆಗಳು ನಡೆದು ಸ್ಥಳೀಯರಿಗೆ ಸಂಗ್ರಾಮದ ಕಿಚ್ಚು ಹೊತ್ತಿಸಿದ ಪ್ರದೇಶವಾಗಿದೆ. ಇಂತಹ ಪ್ರದೇಶವನ್ನು ವಿಮಾನ ನಿಲ್ದಾಣದ ನಿರಾಶ್ರಿತರಿಗೆ ವಸತಿ ಕಲ್ಪಿಸಲು ಮುಂದಾಗಿರುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ತಮಟೆ ವಾದ್ಯದ ಮೂಲಕ ಮೈದಾನದ ಸುತ್ತ ಮೆರವಣಿಗೆ ನಡೆಸಿ ಯಾವುದೇ ಕಾರಣಕ್ಕೂ ಈ ಪ್ರದೇಶವನ್ನು ನೀಡುವುದಿಲ್ಲವೆಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ಇನ್ನು ನಡುಬೇಣವೂ ಒಟ್ಟು 9 ಎಕರೆ ಪ್ರದೇಶದಲ್ಲಿದ್ದು,ಅದರಲ್ಲಿ 6 ಎಕರೆ ಪ್ರದೇಶ ಆಟದ ಮೈದಾನವಾಗಿದೆ.ಆದರೆ ಮೊದಲಿನಿಂದಲೂ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಕ್ರಿಡಾಂಗಣ ಬಿಟ್ಟು ಉಳಿದ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಕ್ರೀಡಾಂಗಣ ಪಕ್ಕದಲ್ಲಿಯೇ ಸ್ಮಶಾನ ಇದೆ. ಮಾತ್ರವಲ್ಲದೆ ಈ ಪ್ರದೇಶದ ಕುರುಚಲು ಗಿಡಗಳ ಮಧ್ಯೆ ಔಷಧಿ ಗಿಡಗಳಿವೆ. ಅಲ್ಲದೆ ಪ್ರತಿ ದೀಪಾವಳಿಯಂದು ಇಲ್ಲಿ ಒಂದೆಡೆ ಸೇರಲಾಗುತ್ತದೆ. ಆದರೆ ಇಂತಹ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಲು ಮುಂದಾಗಿರುವ ಕ್ರಮ ಸರಿಯಲ್ಲ. ಕೂಡಲೇ ಈ ಕ್ರಮದಿಂದ ಹಿಂದೆ ಸರಿಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಒಟ್ಟಾರೆ ಐತಿಹಾಸಿಕ ಹಿನ್ನೆಲೆಯುಳ್ಳ ಪ್ರದೇಶದಲ್ಲಿ ಸರ್ಕಾರ ವಿಮಾನ ನಿಲ್ದಾಣದಿಂದ ನಿರಾಶ್ರಿತರಾದವರಿಗೆ ಪುನರ್ವಸತಿ ಕಲ್ಪಿಸಲು ಮುಂದಾಗಿರುವುದು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಾತ್ರವಲ್ಲದೆ ವಿಭಿನ್ನ ಪ್ರತಿಭಟನೆ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದು, ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button