ದುರ್ನಾತ ಬೀರುತ್ತಿರುವ ನೀಲಗುಂದ ಗ್ರಾಮ: ಶೌಚಾಲಯವಿಲ್ಲದೆ ಪರದಾಡುತ್ತಿರುವ ಮಹಿಳೆಯರು
ವರದಿ: ರಾಚಪ್ಪ ಬನ್ನಿದಿನ್ನಿ
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೆ ಗ್ರಾಮದ 3ನೇ ವಾರ್ಡ ಮಹಿಳೆಯರು ನಿತ್ಯ ಪರದಾಡುವಂತಾಗಿದೆ. ಗ್ರಾಮದಲ್ಲಿ ಸಾರ್ವಜನಿಕರ ಶೌಚಾಲಯಕ್ಕೆ ಗ್ರಾಮ ಪಂಚಾಯಿತಿ ಜಾಗ ಇದೆ. ಆದರೆ ಆ ಜಾಗದಲ್ಲಿ ಮುಳ್ಳು-ಕಂಠಿ ಬೆಳೆದು ನಿಂತಿದ್ದು ಶೌಚಕ್ಕೆ ಸ್ವಲ್ಪವೂ ಜಾಗ ಇಲ್ಲದಂತಾಗಿದೆ. ಗ್ರಾಪಂ ಯವರು ಶೌಚಾಲಯ ನಿರ್ಮಿಸದ ಕಾರಣ ಮಹಿಳೆಯರಿಗೆ ರಸ್ತೆಬದಿ ಮೊಲ-ಮೂತ್ರ ವಿಸರ್ಜನೆ ಅನಿವಾರ್ಯವಾಗಿದೆ. ಪುರುಷರು ಓಡಾಡುವ ರಸ್ತೆ ಬದಿ ಮಹಳೆಯರು ಎದ್ದು ಕುಳಿತು ಶೌಚ ಮುಗಿಸುವುದರಲ್ಲಿ ದಿನಕ್ಕೆ ಮೂರು ನಾಲ್ಕು ತಾಸು ಶೌಚಕ್ಕಾಗಿ ಕಾಲಹರಣ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಒಂದು ಕುಟುಂಬಕ್ಕೆ ಒಂದು ಶೌಚಾಲಯ ನಿರ್ಮಿಸಿ ಕೊಡುವುದಾಗಿ ಸುಳ್ಳು ಬರವಸೆ ನೀಡಿ ಗ್ರಾಮದ ೫೦ಕ್ಕೂ ಹೆಚ್ಚು ಕುಟುಂಬದ ಆಧಾರ ಕಾರ್ಡ ತೆಗೆದುಕೊಂಡಿದ್ದಾರೆ. ಸದ್ಯ ಎಲ್ಲರ ಹೆಸರಲ್ಲಿ ಶೌಚಾಲಯ ನಿರ್ಮಿಸಿ ಬಿಲ್ ಸಹ ತೆಗೆಯಲಾಗಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಗ್ರಾಪಂ ಯವರು ಐದಾರು ಸಮುದಾಯ ಶೌಚಾಲಯಗಳನ್ನು ನಿರ್ಮಿಸಿ ಕೈ ತೊಳೆದುಕೊಂಡಿದ್ದಾರೆ ಎಂದು ಗ್ರಾಮದ ತುಳಸಪ್ಪ ಬಾರಕೇರ ಆರೋಪಿಸಿದ್ದಾರೆ.
ನಿರ್ಮಿಸಿದ ಆರು ಶೌಚಾಲಯಕ್ಕೆ ನೀರು ವಿದ್ಯುತ್ ವ್ಯವಸ್ಥೆ ಇಲ್ಲದೆ ನಿರ್ವಹನೆ ಕೊರತೆಯಿಂದ ಪಾಳುಬಿದ್ದಿವೆ. ಸದ್ಯ ಮೊಲ-ಮೂತ್ರದಿಂದ ತುಂಬಿಕೊಂಡಿದ್ದು ಗ್ರಾಮದ ತುಂಬ ದುರ್ವಾಸನೆ ಬೀರುತ್ತಿವೆ. ಗ್ರಾಮದ ಮಹಿಳೆಯರು ಮಕ್ಕಳು ಎಲ್ಲೆಂದರಲ್ಲಿ ಶೌಚ ವಿಸರ್ಜನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ದುರ್ವಾಸನೆಗೆ ಮಹಿಳೆಯರು ಮಕ್ಕಳು ಬೇಸತ್ತು ಹೋಗಿದ್ದಾರೆ..
ರೋಗದ ಭೀತಿ:
ಪಕ್ಕದಲ್ಲೇ ಚಿಕ್ಕ ಮಕ್ಕಳು ಕಲಿಯುವ ಅಂಗನವಾಡಿ ಕೇಂದ್ರವಿದೆ. ಮೂಗು ಮುಚ್ಚಿಕೊಂಡೆ ಕಾರ್ಯನಿರ್ವಹಿಸುವ ಪರಿಸ್ಥಿತಿ ಬಂದೊದಗಿದೆ. ಗ್ರಾಮದಲ್ಲಿ ರೋಗದ ಬೀತಿ ಎದುರಾಗಿದ್ದು ಸುಮಾರು ವರ್ಷಗಳಿಂದ ಈ ಬಗ್ಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ. ಕೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸುವ ಪಿಡಿಒ ನೆಪಹೇಳಿ ಕಾಲದೂಡುತ್ತಿದ್ದಾರೆ ಎಂದು ಗ್ರಾಮದ ಮಹಿಳೆಯರು ದೂರುತ್ತಿದ್ದಾರೆ.
ಹಾವು ಚೇಳಿನ ಭಯ:
ಶೌಚಾಲಯದ ಜಾಗ ಮುಳ್ಳು ಕಂಠಿಯಿಂದ ತುಂಬಿಕೊಂಡು ಹಾವು, ಚೇಳು ವಾಸವಾಗಿವೆ. ಗ್ರಾಮದಲ್ಲಿ ಮಹಿಳೆಯರು ರಾತ್ರಿ ಹೊತ್ತು ಶೌಚಕ್ಕೆ ಹೋಗಲು ಭಯವಂತೆ. ಸಾಕಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ, ಪ್ರತಿ ಮನೆಯಲ್ಲೂ ರೋಗದಿಂದ ಬಳಲುತ್ತಿದ್ದಾರೆ. ಶೌಚಾಲಯ ಜಾಗವನ್ನ ಮಹಿಳೆಯರೆಲ್ಲ ಸೇರಿ ಸ್ವತಃ ಸ್ವಚ್ಛ ಮಾಡಲು ಹೋದ್ರ ವಿರೋಧಿಸುತ್ತಿದ್ದಾರೆ. ಶೌಚಾಲಯ ನಿರ್ಮಿಸುದಿದ್ದರೂ ಪರವಾಗಿಲ್ಲ ಶೌಚಾಲಯದ ಜಾಗ ಸ್ವಚ್ಛಗೊಳಿಸಿ ಮಹಿಳೆಯರಿಗೆ ಅನಕೂಲ ಮಾಡಿಕೊಡಿ ಎಂದು ಗ್ರಾಮದ ಮಹಿಳೆಯರು ಮನವಿ ಮಾಡಿದ್ದಾರೆ.
ವೈಯಕ್ತಿಕ ಶೌಚಾಲಯ ಇಲ್ಲದ ಕಾರಣ ಸಮಸ್ಯ ಇದೆ. ಸದ್ಯ ಸಾರ್ವಜನಿಕರ ಅನುಕೂಲಕ್ಕೆ 6 ಸಮುದಾಯ ಶೌಚಾಲಯ ನಿರ್ಮಿಸಲಾಗಿದೆ. ಸರಿಯಾಗಿ ಉಪಯೋಗಿಸದ ಕಾರಣ ತುಂಬಾ ಗಲಿಜಾಗಿವೆ. ಸದ್ಯ ಶೌಚಾಲಯ ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಅನಕೂಲ ಮಾಡಿಕೊಡುತ್ತೆವೆ. ಸಾರ್ವಜನಿಕರು ಸಹ ಶೌಚಾಲಯ ಸರಿಯಾಗಿ ಉಪಯೋಗಿಸಬೇಕು. ನಮ್ಮ ಪಂಚಾಯತಿಗೆ ಸೇರಿದ ಜಾಗದ ಸಮಸ್ಯೆ ಇದ್ದು ಗ್ರಾಮದ ಪ್ರಮುಖರು ಸೇರಿ ಬಗೆಹರಿಸಿಕೊಳ್ಳಬೇಕು ಎಂದು ಗ್ರಾಪಂ ಪಿಡಿಒ ಶೋಭಾ ಚಾವಣಿ ತಿಳಿಸಿದರು.
ನಮ್ಮೂರಾಗ ಹೆಣ್ಣುಮಕ್ಕಳಿಗೆ ಮರ್ಯಾದೆ ಇಲ್ಲಂಗಗಾಗೇತ್ರಿ. ಮೂಖಕ್ಕ ಬಟ್ಟೆ ಕಟ್ಗೊಂಡ ಗನಮಕ್ಕಳ ಮುಂದ ಸಂಡಾಸಕ್ಕ ಕುಂದ್ರು ಪರಸ್ಥಿತಿ ಬಂದೈತ್ರಿ. 100 ಆಧಾರ ಕಾರ್ಡ ಓದರ್ರೀ 6 ಪಾಯಖಾನಿ ಕಟ್ಟಿಸ್ಯರ್ರೀ. ಅದರಾಗ 3 ಗಂಡಸರಿಗೆ 3 ಹೆಂಗಸರಿಗೆ ಅಂದ್ರು. ಕಟ್ಟಿಸಿ ಒಂದ ವರ್ಷ ಆತ್ರಿ ಅದರಾಗ ಯಾರೊಬ್ರು ಹೆಜ್ಜಿ ಇಡಾಂಗಿಲ್ರಿ ಹಂಗ ವಾಸನೆ ಬರ್ತಾವು. ಯಾರಮುಂದ ಹೇಳೋನ್ರಿ ನಮ್ಮ ಸಂಕಟ ಎಂದು ಶಾರದಾ ಕರಸೆಕ್ಕಿ ಹೇಳುತ್ತಾರೆ.