ಕುಮಟಾ : ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ
ಕಾರವಾರ : ಮಹಿಳೆಯೋರ್ವಳು ಅವಧಿ ಮುನ್ನವೇ ತ್ರಿವಳಿ ಮಕ್ಕಳಿಗೆ ಸಹಜ ಹೆರಿಗೆ ಮೂಲಕ ಜನ್ಮ ನೀಡಿರುವ ಅಪರೂಪದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ.ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ.
ಕುಮಟಾ ತಾಲೂಕಿನ ಗೋಕರ್ಣ ಸಮೀಪದ ಗಂಗಾವಳಿ ಗ್ರಾಮದ ನಿವಾಸಿ ಹಲೀಮಾ ಸಾಧಿಕ್ ಸಾಬ್ ಎಂಬವರಿಗೆ 7 ನೇ ತಿಂಗಳಿನಲ್ಲಿಯೇ ಹೊಟ್ಟೆ ನೋವು ಕಾಣಿಸಿಕೊಂಡ ಪರಿಣಾಮ ಕುಮಟಾ ಪಟ್ಟಣದ ಡಾ.ಜಾನು ಮಣಕೀಕರ್ ನರ್ಸಿಂಗ್ ಹೋಮ್ನಲ್ಲಿ ದಾಖಲಿಸಲಾಗಿತ್ತು. ಗರ್ಭಿಣಿಯನ್ನು ಪರೀಕ್ಷಿಸಿದ ವೈದ್ಯ ಡಾ.ಪ್ರಶಾಂತ ಮಣಕೀಕರ್ ಅವರು ಹೆರಿಗೆ ಮಾಡಿಸುವ ಬಗ್ಗೆ ತಿಳಿಸಿದ್ದರು. ಅದರಂತೆ ಇಂದು ಸುರಕ್ಷಿತ ಮತ್ತು ಯಶಸ್ವಿಯಾಗಿ ನಾರ್ಮಲ್ ಹೆರಿಗೆ ಮಾಡಿಸಲಾಗಿದೆ.ಹಲೀಮಾ ಸಾದಿಕ್ ಸಾಬ್ ಅವರು ಎರಡು ಹೆಣ್ಣು ಮತ್ತು ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ತಾಯಿ ಮತ್ತು ಮೂರು ಶಿಶುಗಳು ಆರೋಗ್ಯವಾಗಿವೆ. ಆದರೂ ಕೂಡ ಶಿಶುಗಳು ಸಂಪೂರ್ಣ ಬೆಳವಣಿಗೆಯಾಗದ ಕಾರಣ ಅವುಗಳ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಮಣಿಪಾಲ ಆಸ್ಪತ್ರೆಯ ಶಿಶು ಸುರಕ್ಷತಾ ಕೇಂದ್ರದಲ್ಲಿ ಇರಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ. ಪ್ರಶಾಂತ ಮಣಕೀಕರ್ ತಮ್ಮ ಆಸ್ಪತ್ರೆಯಲ್ಲಿ ಇದೇ ಮೊದಲು ತ್ರಿವಳಿ ಮಕ್ಕಳಿಗೆ ಮಹಿಳೆ ಜನ್ಮ ನೀಡಿದ ಘಟನೆ ನಡೆದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಹೆರಿಗೆ ಸಮಯದಲ್ಲಿ ಯಾವುದೇ ತೊಂದರೆಯಾಗಿಲ್ಲ. ಎಲ್ಲಾ ಸುಸೂತ್ರವಾಗಿ ನಾರ್ಮಲ್ ಹೆರಿಗೆ ಆಗಿದೆ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.