Uncategorized

ಗೋರಿಗಳ ಸ್ಥಳಾಂತರಿಸುವಂತೆ ಮುಸಲ್ಮಾನರಿಗೆ ಸಚಿವ ಸುನೀಲ್ ಕುಮಾರ್ ಮನವಿ

ಚಿಕ್ಕಮಗಳೂರು: ದತ್ತಪೀಠದಲ್ಲಿ ಅನಗತ್ಯವಾಗಿ ನಿರ್ಮಾಣವಾಗಿರುವ ಗೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರ ಮಾಡಿಕೊಂಡು ಮುಸಲ್ಮಾನರು ಅಲ್ಲಿ ಪೂಜಾ ಕೈಂಕರ್ಯಗಳನ್ನು ಮಾಡಲಿ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದ ಮುಸಲ್ಮಾನ ಬಂಧುಗಳಿಗೆ ವಿನಂತಿ ಮಾಡುತ್ತೇನೆ. ದತ್ತಾತ್ರೇಯ ಪೀಠ ಬೇರೆ, ನಾಗೇನಹಳ್ಳಿಯಲ್ಲಿರುವ ಬಾಬಾಬುಡನ್ ದರ್ಗಾ ಬೇರೆ ಎಂಬುದು ದಾಖಲೆಗಳಲ್ಲಿ ಮತ್ತೆ ಮತ್ತೆ ಸಾಬೀತಾಗಿದೆ. ಹೈಕೋರ್ಟ್, ದತ್ತಪೀಠದಲ್ಲಿ ಹಿಂದೂಗಳ ಮುಖಾಂತರವೇ ಪೂಜೆ ಆಗಬೇಕು ಎಂಬ ನಿರ್ದೇಶನವನ್ನು ಕೊಟ್ಟ ನಂತರ ಮುಸ್ಲಿಮರು ಕಣ್ತೆರೆದು ನೋಡಬೇಕು. ನಿಮ್ಮ ನಾಗೇನಹಳ್ಳಿ ದರ್ಗಾವನ್ನು ನೀವು ಅಭಿವೃದ್ಧಿ ಮಾಡಿ. ಇಲ್ಲಿ ಅನಗತ್ಯವಾಗಿ ನಿರ್ಮಾಣವಾಗಿರುವ ಗೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರ ಮಾಡುವ ಮೂಲಕ ನೀವು ಅಲ್ಲಿ ಪೂಜಾ ಕೈಂಕರ್ಯಗಳನ್ನು ಮಾಡಿ. ಇಲ್ಲವೇ ಹಿಂದುಗಳಿಗೆ ಮುಕ್ತವಾಗಿ ಪೂಜೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ನಾನು ಮುಸಲ್ಮಾನರಿಗೆ ವಿನಂತಿ ಮಾಡುತ್ತಿದ್ದೇನೆ ಎಂದಿದ್ದಾರೆ.

ದತ್ತಪೀಠದ ಹೋರಾಟದ ಮೂಲಕ ಸಾರ್ವಜನಿಕ ಜೀವನದಲ್ಲಿ ನಾನು ರೂಪುಗೊಳ್ಳುತ್ತಾ, ನನ್ನ ಬೆಳವಣಿಗೆಗೆ ದತ್ತಪೀಠದ ಹೋರಾಟ ಪ್ರಮುಖವಾದ ಸಂಗತಿಯಾಗಿದೆ. ಆ ಹೋರಾಟದ ಮೂಲಕವೇ ಸಾರ್ವಜನಿಕ ಜೀವನದಲ್ಲಿ ನಾವು ಗುರುತಿಸಿಕೊಂಡಿದ್ದೆವೆ. ಅದರ ಮೂಲಕವೇ ಜನಪ್ರತಿನಿಧಿಯಾಗಿ, ಮಂತ್ರಿಯಾಗುವ ಅವಕಾಶ ನನಗೆ ಸಿಕ್ಕಿದೆ. ಬಹುಶಃ ದತ್ತಾತ್ರೇತರ ಕೃಪೆ ಮತ್ತು ಹೋರಾಟದಲ್ಲಿ ಭಾಗಿಯಾಗಿದ್ದ ಎಲ್ಲ ಕಾರ್ಯಕರ್ತರ ಸಹಭಾಗಿತ್ವದ ಕಾರಣಕ್ಕೆ ಇಂದು ಜವಾಬ್ದಾರಿಯುತ ಸ್ಥಾನಕ್ಕೆ ಬಂದಿದ್ದೇನೆ. ನನ್ನ ಜೀವನದ ಅತ್ಯಂಗ ಯೋಗವೆಂದರೆ, ನಾನು ಮಂತ್ರಿಯಾಗಿರುವಾಗಲೇ ಹೈಕೋರ್ಟ್ ಕೂಡ ದತ್ತಪೀಠದ ಹಿಂದೂಗಳ ಭಾವನೆಗಳ ಪರವಾಗಿ ತೀರ್ಪನ್ನು ಕೊಟ್ಟಿರುವುದು ಅತ್ಯಂತ ಸಂತೋಷ, ಭಕ್ತಿಪೂರ್ವಕವಾಗಿ ದತ್ತಾತ್ರೇಯ ಪಾದುಕೆ ದರ್ಶನ ಪಡೆದು ಸಾರ್ವಜನಿಕ ಕೆಲಸವನ್ನು ಇನ್ನಷ್ಟು ಮಾಡಲು, ಹಿಂದುತ್ವವ ಪರವಾದ ಕೆಲಸಕಾರ್ಯಗಳನ್ನು ಇನ್ನಷ್ಟು ಶಕ್ತಿ ನೀಡುವಂತೆ ದತ್ತಾತ್ರೇಯ ದೇವರ ಬಳಿ ಪ್ರಾರ್ಥನೆ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಹಿಂದೆ ಇದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದತ್ತಪೀಠದ ಕುರಿತಂತೆ ಹಿಂದುಗಳ ವಿರುದ್ಧವಾದ ಯೋಚನೆಗಳು, ನಿರ್ಣಯಗಳನ್ನು ಮಾಡಿಕೊಂಡಿತ್ತು. ಸುಪ್ರೀಂ ಕೋರ್ಟ್ ತೀರ್ಪು ಇದ್ದರೂ ಸಹ ಇಲ್ಲಿ ಹಿಂದುಗಳಿಗೆ ಪೂಜೆಗೆ ಅವಕಾಶ ಮಾಡಿಕೊಡಬಾರದು ಎಂಬ ದುರುದ್ದೇಶದಿಂದ ಸಮಿತಿಯೊಂದನ್ನು ರಚಿಸಿ, ಮುಜಾವರ್ ನೇಮಕ ಮಾಡಿ, ಅಂದಿನ ಹಿಂದೂ ವಿರೋಧಿ ಸರ್ಕಾರ ತೀರ್ಮಾನ ತೆಗೆದುಕೊಂಡಿತ್ತು. ಇಂದು ಆ ಅರ್ಜಿ ತಿರಸ್ಕಾರಗೊಂಡಿದ್ದು, ಹಿಂದುಗಳ ಪರವಾದ ನ್ಯಾಯ ಸಿಕ್ಕಿದೆ. ಇಲ್ಲಿ ಮುಜಾವರ್ ಪೂಜೆ ಮಾಡುವುದಲ್ಲ. ಹಿಂದೂ ಅರ್ಚಕರೇ ಪೂಜೆ ಮಾಡಬೇಕು ಎಂದು ಹೈಕೋರ್ಟ್ ತೀರ್ಪು ಕೊಟ್ಟಿರುವುದನ್ನು ಲಕ್ಷಾಂತರ ಹಿಂದೂಗಳು ಸ್ವಾಗತಿಸುತ್ತಿದ್ದೇವೆ. ದಶಕಗಳ ಹೋರಾಟದ ಫಲವಾಗಿ ಈ ಜಯ ಸಿಕ್ಕಿರುವುದು ಎಲ್ಲಾ ಹೋರಾಟಗಾರರು ಸಂತೋಷಗೊಂಡು, ಸಂಭ್ರಮಿಸುವಂತಾಗಿದೆ ಎಂದು ಹೇಳಿದರು.

ಇಂದು ಇರುವ ಸರ್ಕಾರ ಹಿಂದುಗಳ ಭಾವನೆಗಳ ಪರವಾಗಿರುವ, ಗೌರವಿಸುವ ಸರ್ಕಾರವಾಗಿದೆ. ಹಿಂದು ಸಮಾಜ ಯಾವ ಭಾವನೆಗಳನ್ನು ವ್ಯಕ್ತಪಡಿಸುತ್ತೋ ಅದರ ಪರವಾಗಿ ನಿಲ್ಲುವಂತಹ ಸರ್ಕಾರವಿದು. ಹೀಗಾಗಿ ಕೋರ್ಟ್ ನಿರ್ದೇಶನದಂತೆ ಮುಖ್ಯಮಂತ್ರಿಗಳ ಸೂಚನೆಯಂತೆ ಆದಷ್ಟು ಶೀಘ್ರ ಸಮಿತಿಯನ್ನು ರಚನೆ ಮಾಡಿ, ಹೈಕೋರ್ಟ್ ಆದೇಶಕ್ಕೆ ಮನ್ನಣೆ ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

Related Articles

Leave a Reply

Your email address will not be published.

Back to top button