Uncategorized

ಕರ್ನಾಟಕ ಏಕೀಕರಣದ ಚಳವಳಿ ನಮ್ಮ ಧಾರವಾಡದ ನೆಲದಲ್ಲಿ ಜನ್ಮ ತಾಳಿದ್ದು: ಶಂಕರ್ ಪಾಟೀಲ್ ಮುನೇನಕೊಪ್ಪ

ಧಾರವಾಡ: ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ದೊರೆತಿರುವ ಪ್ರಾಮುಖ್ಯತೆಯಂತೆಯೇ, ಕರ್ನಾಟಕ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣಕ್ಕಾಗಿ ನಡೆದ ಚಳವಳಿಯೂ ಮಹತ್ವ ಪಡೆದಿದೆ. ಸುಮಾರು 19 ಆಡಳಿತ ಭಾಗಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳು, ಬ್ರಿಟಿಷರ ಆಡಳಿತದ ನಂತರ ಮತ್ತೆ ಒಂದಾಗಿರುವುದು ನಮ್ಮೆಲ್ಲರ ಸೌಭಾಗ್ಯದ ಮತ್ತು ಐಕ್ಯತೆಯ ಸಂಗತಿಯಾಗಿದ್ದು, ಕರ್ನಾಟಕ ಏಕೀಕರಣದ ಚಳವಳಿಯು ಇದೇ ನಮ್ಮ ಧಾರವಾಡದ ನೆಲದಲ್ಲಿ ಜನ್ಮ ತಾಳಿದ್ದು ನಮಗೆಲ್ಲ ಅಭಿಮಾನದ ವಿಷಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿದರು.

ಜಿಲ್ಲಾಡಳಿತದಿಂದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಇಂದು ಏರ್ಪಡಿಸಿದ್ದ 66 ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದ ಅವರು, ಇಲ್ಲಿನ ನರೇಂದ್ರ ಗ್ರಾಮದ ರಾ.ಹ. ದೇಶಪಾಂಡೆಯವರು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಓದುವಾಗ ಭಾಷೆಯ ಕಾರಣಗಳಿಂದ ಅನೇಕ ಬಾರಿ ನೊಂದಿದ್ದರು. 1887 ರಿಂದಲೇ ಕನ್ನಡ ಭಾಷೆಯ ದೀನ ಸ್ಥಿತಿಯನ್ನು ದೂರ ಮಾಡುವುದಕ್ಕಾಗಿ ಕನ್ನಡ ಜನರ ಸಹಾಯದಿಂದ ಒಂದು ಸಂಘ ಸ್ಥಾಪಿಸಲು ಅವರು ಪ್ರಯತ್ನಿಸುತ್ತಿದ್ದರು. ಅವರ ಪ್ರಯತ್ನದ ಫಲವಾಗಿ ಜುಲೈ 20, 1890 ರಲ್ಲಿ ಧಾರವಾಡದಲ್ಲಿ ಸಮಾನ ಮನಸ್ಕರ ಸಹಕಾರದೊಂದಿಗೆ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪಿಸಿದರು. ಕನ್ನಡಿಗರನ್ನು ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಒಂದುಗೂಡಿಸಲು ಧಾರವಾಡದಲ್ಲಿ ನಡೆದ ಚಳುವಳಿ, ಹೋರಾಟಗಳು ಇಡೀ ರಾಜ್ಯಕ್ಕೆ ದಿಕ್ಸೂಚಿಯಾಗಿದ್ದವು. ಡೆಪ್ಯೂಟಿ ಚನ್ನಬಸಪ್ಪನವರು ಕನ್ನಡ ಮಾಧ್ಯಮ ಶಿಕ್ಷಣಕ್ಕೆ ತಮ್ಮ ಅಮೂಲ್ಯ ಕೊಡುಗೆ ನೀಡಿರುವುದನ್ನು ನಾವೆಲ್ಲ ಸದಾಕಾಲ ನೆನೆಯಬೇಕು ಎಂದರು.

ಕರ್ನಾಟಕ ಏಕೀಕರಣಕ್ಕೆ ಒತ್ತಾಯಿಸಿ ಹುಬ್ಬಳ್ಳಿ ಸಮೀಪದ ಅದರಗುಂಚಿ ಗ್ರಾಮದಲ್ಲಿ ಅಂದಿನ ನೇತಾರರಾಗಿದ್ದ ಅದರಗುಂಚಿ ಶಂಕರಗೌಡ ಪಾಟೀಲರು 23 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದರು. ಅದರ ಪರಿಣಾಮವಾಗಿ ಲೋಕಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲು ಸಾಧ್ಯವಾಯಿತು. ಸುದೀರ್ಘ ಹೋರಾಟದ ಫಲವಾಗಿ 1956 ರ ನವೆಂಬರ್ 1 ರಂದು ಕನ್ನಡ ಮಾತನಾಡುವ ಪ್ರದೇಶಗಳೆಲ್ಲ ಅಖಂಡವಾಗಿ ಮೈಸೂರು ರಾಜ್ಯದಲ್ಲಿ ಒಂದುಗೂಡಿದವು. ನಂತರದಲ್ಲಿ 1973 ರಲ್ಲಿ ಕರ್ನಾಟಕ ಎಂದು ಮರುನಾಮಕರಣಗೊಂಡಿತು ಎಂದು ಕರ್ನಾಟಕ ಏಕೀಕರಣ ಹೋರಾಟ ನಡೆದು ಬಂದ ದಾರಿಯನ್ನು ಈ ವೇಳೆ ಮೆಲುಕು ಹಾಕಿದರು. ‌

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 1 ಲಕ್ಷ 75 ಸಾವಿರ ಹೆಕ್ಟೇರ್ ಹಿಂಗಾರಿ ಬಿತ್ತನೆ ಗುರಿ

ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ 1 ಲಕ್ಷ 75 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಈವರೆಗೆ ಸುಮಾರು 35 ಸಾವಿರ ಹೆಕ್ಟೇರ್ ಕೃಷಿ ಭೂಮಿ ಬಿತ್ತನೆಯಾಗಿದೆ. 93 ಮಿಲಿ ಮೀಟರ್ ವಾಡಿಕೆ ಮಳೆಗೆ 83 ಮಿಲಿ ಮೀಟರ್ ಮಳೆಯಾಗಿದ್ದು, ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಮಳೆಯ ಪ್ರಮಾಣ ಶೇಕಡಾ 10 ರಷ್ಟು ಕಡಿಮೆಯಾಗಿದೆ. ಉತ್ತಮ ಮಳೆಯಾಗುವ ನಿರೀಕ್ಷೆಯಿದೆ ಎಂದರು.‌

ಹಿಂಗಾರು ಹಂಗಾಮಿಗಾಗಿ 20,741 ಕ್ವಿಂಟಾಲ್ ಬಿತ್ತನೆ ಬೀಜ, 2385 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ಸೇರಿದಂತೆ ಒಟ್ಟು 6495 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳನ್ನು ಪೂರೈಸಲಾಗಿದೆ. ಮಹಾತ್ಮಾಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ, ಕೃಷಿ ಸಂಬಂಧಿತ ಚಟುವಟಿಕೆಗಳ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

Related Articles

Leave a Reply

Your email address will not be published.

Back to top button