Uncategorized

ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಸೋಲು ಸಿಎಂಗೆ ಮುಖಭಂಗವಲ್ಲ: ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ

ಧಾರವಾಡ : ಕರ್ನಾಟಕದ ಹಾನಗಲ್ ಹಾಗೂ ಸಿಂದಗಿ ಉಪ ಚುನಾವಣೆಯಲ್ಲಿ ಮತದಾರರು ತಮ್ಮ ಸಂವಿಧಾನಿಕ ಹಕ್ಕನ್ನು ಚಲಾಯಿಸಿ ಅಂತಿಮ ಫಲಿತಾಂಶ ನೀಡಿದ್ದಾರೆ. ಮತದಾರರ ತೀರ್ಪನ್ನು ನಾವು ಸ್ವಾಗತ ಮಾಡುತ್ತೇವೆ. ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಸೋಲು ಸಿಎಂಗೆ ಮುಖಭಂಗವಲ್ಲ, ಸೋಲು ಗೆಲುವು ಸಾಮಾನ್ಯ ಎಂದು ಸಚಿವ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಅನ್ನೋದು ಸಾಮಾನ್ಯ, ಇದು‌ ಮತದಾರರು ಕೊಟ್ಟಂತಹ ನಿರ್ಣಯ ಅದನ್ನ ನಾವು ಸ್ವಾಗತ ಮಾಡುತ್ತೇವೆ. ನಾವು ಎಲ್ಲಿ ಎಡವಿದ್ದೇವೆ ಅನ್ನೋದನ್ನ ಪರಾಮರ್ಶೆ ಮಾಡಿಕೊಳ್ಳುತ್ತೇವೆ. ಈ ಬಾರಿ ಸೋಲು ಅನುಭವಿಸಿದ ಕ್ಷೇತ್ರಗಳಲ್ಲಿ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸುತ್ತೇವೆ ಎಂದರು.

ನಮ್ನ ಅಭ್ಯರ್ಥಿ ಬಗ್ಗೆ ಅಪಸ್ವರ ಇತ್ತೋ ಏನೋ ಗೊತ್ತಿಲ್ಲ, ಹಾನಗಲ್ ಕ್ಷೇತ್ರದಲ್ಲಿ ನಮ್ಮನ್ನು ಜನರು ತಿರಸ್ಕಾರ ಮಾಡಿದ್ದಾರೆ. ಈ ಸೋಲನ್ನ ನಾವು ಒಪ್ಪಿ ಸ್ವಾಗತ ಮಾಡುತ್ತೇವೆ. ಪಕ್ಷ ಸೂಚಿಸಿದ ಅಭ್ಯರ್ಥಿ ಪರ ನಾವೆಲ್ಲ ಕೆಲಸ ಮಾಡಿದ್ದೇವೆ. ಮುಂದಿನ ಬಾರಿ ಗೆಲುವು ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ, ಇದು ಸಿಎಂಗೆ ಮುಖಭಂಗ ಅಲ್ಲ ಎಂದು ತಿಳಿಸಿದರು.

ಇನ್ನು ಹಾನಗಲ್ ಉಪಚುನಾವಣೆ ಸೋಲು ಸಿಎಂ ಸೋಲಲ್ಲ ಬಿಜೆಪಿಯ ಸೋಲು ಎಂಬ ಡಿಕೆಶಿ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಡಿಕೆಶಿಯವರು ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಉತ್ಸಾಹದಿಂದ ಮಾತನಾಡುತ್ತಿದ್ದಾರೆ. ಸಿಂಧಗಿಯಲ್ಲಿ ಅವರನ್ನ‌ ತಿರಸ್ಕಾರ ಮಾಡಿದ್ದಾರೆ. ದೇಶದ ಅನೇಕ ರಾಜ್ಯಗಳಲ್ಲಿ ನಾವು ಗೆಲುವು ಸಾಧಿಸಿದ್ದೇವೆ. ಎರಡೂ ಕ್ಷೇತ್ರದ ಜನರ ತೀರ್ಮಾನವನ್ನ ನಾವು ಸ್ವಾಗತ ಮಾಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಉತ್ತಮ‌ ಸಂದೇಶ ನೀಡಲಿದ್ದೇವೆ ಎಂದರು.

Related Articles

Leave a Reply

Your email address will not be published. Required fields are marked *

Back to top button