Uncategorized

ದಿಲ್ಲಿ ದಾದಾಗಿರಿ ಇನ್ನು ನಡೆಯದು; ಗೋವಾದಲ್ಲಿ ಬಿಜೆಪಿ ವಿರುದ್ಧ ಮಮತಾ ಗುಡುಗು

ಪಣಜಿ: ಗೋವಾದ ತಮ್ಮ ಮೊದಲ ಭೇಟಿಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತ, ದೆಹಲಿ ದಾದಾಗಿರಿಯನ್ನು ಕೊನೆಗಾಣಿಸುವ ಪ್ರತಿಜ್ಞೆ ಮಾಡಿದ್ದಾರೆ.

ನಾನು ನಿಮ್ಮ ಸಹೋದರಿಯ ಹಾಗೆ. ನಿಮ್ಮ ಅಧಿಕಾರ ಹಿಡಿಯಲು ನಾನು ಬಂದಿಲ್ಲ. ಆದರೆ ಜನರು ತೊಂದರೆ ಎದುರಿಸುತ್ತಿರುವಾಗ ಅವರನ್ನು ನೋಡಲು ನನ್ನ ಹೃದಯ ಮಿಡಿಯುತ್ತದೆ ಎಂದು ಮಮತಾ ಹೇಳಿದ್ದಾರೆ.

ಮಮತಾ ದೀದಿ ಬಂಗಾಳದಲ್ಲಿರುವುದು. ಗೋವಾಕ್ಕೆ ಹೇಗೆ ಹೋಗುತ್ತಾಳೆ ಎಂದು ಕೆಲವರು ಪ್ರಶ್ನಿಸುತ್ತಾರೆ. ಯಾಕಿಲ್ಲ? ನಾನೊಬ್ಬ ಭಾರತೀಯಳು. ನಾನು ಎಲ್ಲಿಗೆ ಬೇಕಾದರೂ ಹೋಗಬಹುದು. ಚಿತ್ರೋತ್ಸವ ಉದ್ಘಾಟನೆಗೆ ಬಂದಾಗ ಯಾರೂ ಈ ಪ್ರಶ್ನೆ ಕೇಳಿಲ್ಲ, ಅಭಿವೃದ್ಧಿ ಕಾಮಗಾರಿಗೆ ಬಂದಾಗ ಈ ಪ್ರಶ್ನೆ ಕೇಳಿಲ್ಲ. ಮತ್ತು ನಾನು ಹಿಂದೂ ಅಥವಾ ಮುಸ್ಲಿಂ ಅಥವಾ ಕ್ಯಾಥೋಲಿಕ್ ಅಥವಾ ಕ್ರಿಶ್ಚಿಯನ್ ಎಂದು ನೀವು ನನಗೆ ಈ ಪ್ರಶ್ನೆಯನ್ನು ಕೇಳುತ್ತಿದ್ದೀರಾ? ನಾನು ಜಾತ್ಯತೀತತೆಯನ್ನು ನಂಬುತ್ತೇನೆ, ನಾನು ಏಕತೆಯನ್ನು ನಂಬುತ್ತೇನೆ. ಭಾರತ ನನ್ನ ಮಾತೃಭೂಮಿ. ಬಂಗಾಳ ನನ್ನ ತಾಯ್ನೆಲವಾಗಿದ್ದರೆ, ಗೋವಾ ಕೂಡ ನನ್ನ ತಾಯ್ನೆಲವೇ ಎಂದು ಮಮತಾ ಬ್ಯಾನರ್ಜಿ ಹೇಳಿದರು.

ನಾನು ಹಿಂದೂ ವಿರೋಧಿ ಎಂದು ಬಿಜೆಪಿಯವರು ಆಗಾಗ ಹೇಳುತ್ತಿದ್ದರು. ನಾನು ಹಿಂದೂ. ನನಗೆ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡಲು ಇವರು ಯಾರು? ನಾನೂ ಬ್ರಾಹ್ಮಣ ಕುಟುಂಬದವಳೇ. ಆದರೆ ಇದನ್ನೆಲ್ಲ ಎಂದೂ ನಾನು ಹೇಳಿಕೊಂಡಿಲ್ಲ. ಹೇಳಲು ಬಹಳ ನೋವಾಗುತ್ತಿದೆ. ನಾನು ತಪ್ಪಿತಸ್ಥೆ ಎಂಬ ಭಾವನೆ ಉಂಟಾಗುತ್ತಿದೆ. ಏಕೆಂದರೆ ಹಿಂದೆಂದೂ ಇಂಥದ್ದು ಸಂಭವಿಸಲಿಲ್ಲ ಎಂದು ಮಮತಾ ಹೇಳಿದರು.

ಬೇಕಾದರೆ ನಾನು ಸಾಯುತ್ತೇನೆ. ಆದರೆ ದೇಶವನ್ನು ಒಡೆಯಲಾರೆ. ನಾವು ಜನರನ್ನು ಒಗ್ಗೂಡಿಸಬೇಕೇ ಹೊರತು ಅವರನ್ನು ಒಡೆಯಬಾರದು ಎಂದು ಮಮತಾ ಬ್ಯಾನರ್ಜಿ ಹೇಳಿದರು.

ಗೋವಾ ಜನತೆ ತಮ್ಮದೇ ಸರ್ಕಾರವನ್ನು ಆಯ್ಕೆ ಮಾಡಬೇಕೆಂಬುದು ಟಿಎಂಸಿಯ ಬಯಕೆಯಾಗಿದೆ. ಮತ್ತು ಇದಕ್ಕಾಗಿ ಗೋವಾ ಜನತೆಗೆ ಟಿಎಂಸಿ ನೆರವಾಗುತ್ತದೆ. ನಾನು ಹೊರಗಿನವನಲ್ಲ. ನಾನು ಗೋವಾದ ಮುಖ್ಯಮಂತ್ರಿಯಾಗಲು ಹೋಗುತ್ತಿಲ್ಲ. ಆದರೆ ಒಂದು ವ್ಯವಸ್ಥೆ, ಪೋಲೀಸಿಂಗ್, ಫೆಡರಲಿಸಂ ಮತ್ತು ಭ್ರಷ್ಟಾಚಾರ ವಿರೋಧಿ ಸರ್ಕಾರ ಇರುವುದನ್ನು ನಾನು ನೋಡಲು ಬಯಸುತ್ತೇನೆ. ಇಲ್ಲಿಯವರೇ ಅಧಿಕಾರಕ್ಕೆ ಏರಬೇಕೆಂದು ಬಯಸಿದ್ದೇನೆ ಎಂದರು.

ಕಳೆದ 60 ವರ್ಷಗಳಿಂದ ಕಾಂಗ್ರೆಸ್ ಇಲ್ಲಿದೆ. ಆದರೆ ಏನನ್ನೂ ಮಾಡಲಿಲ್ಲ ಎಂದ ಅವರು, ನಿಮ್ಮ ಶಾಸಕರನ್ನು ನಿಯಂತ್ರಿಸುವುದಕ್ಕೂ ನಿಮ್ಮಿಂದ ಆಗುವುದಿಲ್ಲವೇ? ಬಿಜೆಪಿಯನ್ನು ಅಧಿಕಾರಕ್ಕೆ ಬರಲು ಬಿಡುತ್ತೀರಾ? ಇದು ಮತ್ತೂ ಸಂಭವಿಸುವುದಿಲ್ಲ ಎಂದು ಯಾರು ಹೇಳಲು ಸಾಧ್ಯ? ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

Related Articles

Leave a Reply

Your email address will not be published.

Back to top button