Uncategorized

ಮಡಿಕೇರಿ ದಸರಾ 2021 : ಅದ್ದೂರಿಯಾಗಿ ನೆರವೇರಿದ ಜನೋತ್ಸವ

ಕೊಡಗು : COVID 19ರ ಹಿನ್ನಲೆಯಲ್ಲಿ ಸರ್ಕಾರ ಮತ್ತು ಕೊಡಗು ಜಿಲ್ಲಾಡಳಿತ ಸಾಕಷ್ಟು ನಿರ್ಬಂಧಗಳನ್ನು ಹಾಕಿ ಸರಳ ರೀತಿಯಾಗಿ ದಸರಾ ಆಚರಣೆಗೆ ಅವಕಾಶ ನೀಡಿತ್ತು. ಆದರೂ ಮಡಿಕೇರಿ ದಸರಾ ಸಾವಿರಾರು ಪ್ರವಾಸಿಗರು ಸೇರಿ ಅದ್ಧೂರಿಯಾಗಿಯೇ ನಡೆದಿದೆ. ಶುಕ್ರವಾರ ರಾತ್ರಿಯಿಡೀ ನಡೆದ ಮೈನವಿರೇಳಿಸೋ ದಶಮಂಟಪಗಳ ಶೋಭಾಯಾತ್ರೆ ಜನರ ಮನಸೂರೆಗೊಂಡಿತು.

ಐತಿಹಾಸಿಕ ಜನೋತ್ಸವವಾಗಿ ನಡೆಯುವ ಮಡಿಕೇರಿ ದಸರಾ ಕೋವಿಡ್ ಕಾರಣದಿಂದ ಕಳೆದ ವರ್ಷ ಕೇವಲ ಸಾಂಪ್ರದಾಯಿಕ ಮಂಟಪಗಳ ಸ್ಥಾಪನೆಗೆ ಅಷ್ಟೇ ಸೀಮಿತವಾಗಿತ್ತು. ಈ ಬಾರಿ ಕೋವಿಡ್ ಸ್ವಲ್ಪ ಕಡಿಮೆ ಆಗಿರುವುದರಿಂದ ಅದ್ಧೂರಿ ಅಲ್ಲದಿದ್ದರೂ ತಕ್ಕಮಟ್ಟಿಗೆ ದಸರಾ ಆಚರಣೆಗೆ ಅವಕಾಶ ಮಾಡಿಕೊಡಲಾಗಿತ್ತು.

ಜಿಲ್ಲೆಯ ಮಡಿಕೇರಿ ನಗರದ ಪ್ರಮುಖ ಬೀದಿಗಳಲ್ಲಿ ಪ್ರದರ್ಶನಗೊಂಡ ಆಂಜನೇಯ ದರ್ಶನ, ಆದಿ ಶಕ್ತಿಯಿಂದ ಶುಂಭ ನೀಶುಂಭರ ಸಂಹಾರ, ಗಣಪತಿಯಿಂದ ಗಜಾಸುರನವಧೆ, ಚಂಡ ಮುಂಡರ ವಧೆ ಸೇರಿದಂತೆ ಹಲವು ಪೌರಾಣಿಕ ಕಥಾವಸ್ತುವನ್ನು ಆಧರಿಸಿದ ನೃತ್ಯ ಪ್ರದರ್ಶನಗಳನ್ನು, ಯುದ್ಧದ ದೃಶ್ಯಗಳನ್ನು ಮಂಟಪಗಳು ಸಾದರಪಡಿಸಿದವು.
ಶುಕ್ರವಾರ ರಾತ್ರಿ 11 ಗಂಟೆಗೆ ಶುರುವಾದ ದಶಮಂಟಪಗಳ ಶೋಭಾಯಾತ್ರೆ ಬೆಳಿಗ್ಗೆ 5 ಗಂಟೆವರೆಗೂ ನಡೆಯಿತು.

ಅಬ್ಬರದ ಡಿಜೆ ಸೌಂಡ್ ಜೊತೆಗೆ ಬಣ್ಣದ ಓಕುಳಿ, ವಿವಿಧ ಪೌರಾಣಿಕ ಕಥೆಗಳು, ರಾಕ್ಷಸರ ನರ್ತನಗಳು ಜನರನ್ನು ಆ ಕ್ಷಣಕ್ಕೆ ದೇವಲೋಕಕ್ಕೆ ಕರೆದೊಯ್ದಿದ್ದವು ಎಂದರೆ ತಪ್ಪಾಗಲಾರದು

ಕೋವಿಡ್ ನಿಯಮಗಳನ್ನು ಪಾಲಿಸಿ ಸರಳ ದಸರಾ ಆಚರಣೆಗೆ ಅನುವು ಮಾಡಿ ಕೊಡಲಾಗಿತ್ತು. ಆದರೂ ದುಷ್ಟರ ಸಂಹಾರದ ಸಂಕೇತ ನವರಾತ್ರಿಯ ಅಂಗವಾಗಿ ನಡೆದ ದಶಮಂಟಪಗಳ ಶೋಭಾಯಾತ್ರೆ ದೇವಾನುದೇವತೆಗಳ ಪವಾಡಕ್ಕೆ ಸಾಕ್ಷಿಯಾಯಿತು. ಸಹಸ್ರಾರು ಭಕ್ತರು ದಸರಾದಲ್ಲಿ ಭಾಗವಹಿಸಿ ಭಾವಪರವಶತೆಯಲ್ಲಿ ಮುಳುಗಿ ಎದ್ದರು.

ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಪ್ರವಾಸಿಗರು ಮೆರವಣಿಗೆ ನೋಡಲು ಮುಗಿಬಿದ್ದರು. ಒಟ್ಟಿನಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಹೆಚ್ಚಿನ ಸಂಖ್ಯೆಯ ವೀಕ್ಷಕರಿಗೆ ಭಾಗವಹಿಸಲು ಅವಕಾಶ ಇಲ್ಲದಿದ್ದರಿಂದ ಬಹುತೇಕ ಜನರು ಮಡಿಕೇರಿಯ ದಸರಾ ಕಣ್ತುಂಬಿಕೊಳ್ಳಲು ಜಿಲ್ಲೆಗೆ ಆಗಮಿಸಿದ್ದರು.

ಮಡಿಕೇರಿ ನಗರದ 10 ದೇವಾಲಯಗಳಿಂದ ಹೊರಡುವ 10 ಮಂಟಪಗಳ ಜೊತೆಗೂ ತಲಾ ಕೇವಲ 100 ಜನರು ಮೀರದಂತೆ ಇದ್ದು ಮಂಟಪಗಳ ಶೋಭಾಯಾತ್ರೆ ನಡೆಸುವಂತೆ ಅವಕಾಶ ನೀಡಲಾಗಿತ್ತು

ಆದರೆ ಇದನ್ನೇ ಬಳಸಿಕೊಂಡ ಹೊರ ಜಿಲ್ಲೆಯ ಕನಿಷ್ಠ 20 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಮಡಿಕೇರಿಗೆ ಲಗ್ಗೆ ಇಟ್ಟಿದ್ರು. ರಾತ್ರಿ 11 ಗಂಟೆಗೆ ಆಯಾ ದೇವಾಲಯಗಳ ಬಳಿಯಿಂದ ಹೊರಟ ಪ್ರತೀ ಮಂಟಪಗಳ ಮೆರವಣಿಗೆಯೊಂದಿಗೆ ಕನಿಷ್ಠ ಸಾವಿರ ಜನರಿದ್ರು. ಮಡಿಕೇರಿಯ ಪ್ರತೀ ಬೀದಿ ಬೀದಿಗಳಲ್ಲಿ ಜನರ ದಂಡೇ ಹರಿದು ಬರುತ್ತಿತ್ತು.

ಮಾಸ್ಕ್ ಹಾಕುವುದನ್ನು ಕೊಡಗು ಜಿಲ್ಲಾಡಳಿತ ಕಡ್ಡಾಯಗೊಳಿಸಿತ್ತು. ಆದರೂ ಬಹುತೇಕರು ಮಾಸ್ಕ್ ಹಾಕಿಯೇ ಇರಲಿಲ್ಲ. ಅಲ್ಲಲ್ಲಿಯೇ ನಿಂತಿದ್ದ ಪೊಲೀಸರು ಲಾಠಿ ರುಚಿ ತೋರಿಸಿ ಮಾಸ್ಕ್ ಹಾಕಿಸಬೇಕಾಯಿತು.

ಸರಳ ಆಚರಣೆ ಎಂದಿದ್ದ ಮಡಿಕೇರಿ ದಸರಾ ಈ ಬಾರಿ ಜನೋತ್ಸವವಾಗಿಯೇ ಆಚರಣೆಯಾಗಿದೆ ಎಂಬ ಸಂತಸವನ್ನು ದಸರಾ ಸಮಿತಿ ಅಧ್ಯಕ್ಷ ರಮೇಶ್ ವ್ಯಕ್ತಪಡಿಸಿದರು‌. ಇದರಿಂದ ಒಂದು ವೇಳೆ ಕೊಡಗು ಜಿಲ್ಲೆಯಲ್ಲಿ ಒಂದಷ್ಟು ಕೋವಿಡ್ ಪ್ರಕರಣಗಳು ಹೆಚ್ಚಳವಾದ್ರೂ ಅಚ್ಚರಿ ಇಲ್ಲ. 2021 ರ ದಸರಾ ಹಬ್ಬ ಮುಗಿದಿದ್ದದರೂ ಜನಮಾನಸದಲ್ಲಿ ಅಚ್ವಳಿಯದೇ ಉಳಿದಿದೆ.

Related Articles

Leave a Reply

Your email address will not be published. Required fields are marked *

Back to top button