Uncategorized

ಬೈತಖೋಲ್ ಬಂದರು ಕಾಮಗಾರಿಗೆ ಸ್ಥಳೀಯರ ವಿರೋಧ

ಕಾರವಾರ : ಭದ್ರತೆ ದೃಷ್ಟಿಯಿಂದ ಕದಂಬ ನೌಕಾನೆಲೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ನಿರ್ಮಾಣವಾಗಿದೆ. ಏಷ್ಯಾದಲ್ಲಿಯೇ ಅತಿ ದೊಡ್ಡ ನೌಕಾನೆಲೆ ಎನ್ನುವ ಹೆಗ್ಗಳಿಕೆಯನ್ನು ಕದಂಬ ನೌಕಾನೆಲೆ ಹೊಂದಿದೆ.

ನೌಕಾನೆಲೆ ನಿರ್ಮಾಣಕ್ಕೆ ಸಾವಿರಾರು ಕುಟುಂಬ ತಮ್ಮ ಮನೆ, ಜಮೀನುಗಳನ್ನು ಬಿಟ್ಟುಕೊಟ್ಟು ನಿರಾಶ್ರಿತರಾಗಿದ್ದಾರೆ. ಅವರೆಲ್ಲ ಇನ್ನೂ ಸಂಕಷ್ಟದಲ್ಲಿದ್ದಾರೆ. ಇದರ ನಡುವೆ ಇದೀಗ ಕಾರವಾರ ತಾಲೂಕಿನ ಬೈತಖೋಲ್ ಬಂದರು ಸಮೀಪ ನೌಕಾನೆಲೆ ಅಧಿಕಾರಿಗಳು ಕಾಮಗಾರಿಯೊಂದನ್ನು ಕೈಗೆತ್ತಿಕೊಳ್ಳಲು ಮುಂದಾಗಿದ್ದು, ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಕದಂಬ ನೌಕಾನೆಲೆ ಏಷ್ಯಾದ ಅತಿ ದೊಡ್ಡ ನೌಕಾನೆಲೆಯಾಗಿದೆ.ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅರಗಾ ಗ್ರಾಮದಲ್ಲಿ ನಿರ್ಮಾಣವಾದ ಕದಂಬ ನೌಕಾನೆಲೆಗೆ ಈ ಹಿಂದೆ ಸಾವಿರಾರು ಕುಟುಂಬಗಳು ತಮ್ಮ ಮನೆ, ಜಮೀನುಗಳನ್ನು ಬಿಟ್ಟುಕೊಟ್ಟು ನಿರಾಶ್ರಿತರಾಗಿದ್ದರು. ಕೃಷಿ ಭೂಮಿಯನ್ನು ಬಿಟ್ಟುಕೊಟ್ಟ ರೈತರು, ಸಮುದ್ರ ಬಳಿಯ ಪ್ರದೇಶವನ್ನೂ ಬಿಟ್ಟು ಕೊಟ್ಟು ಮೀನುಗಾರರು ಇಂದಿಗೂ ಸಂಕಷ್ಟದಲ್ಲಿದ್ದಾರೆ.

ವಾಚ್ ಟವರ್​ಗೆ ಸಂಪರ್ಕ ಕಲ್ಪಿಸಲು ಕಾಮಗಾರಿ:

ಇದರ ನಡುವೆ ತಾಲೂಕಿನ ಬೈತಖೋಲ್ ಗುಡ್ಡ ವ್ಯಾಪ್ತಿಯ ವಾಚ್ ಟವರ್​ಗೆ ಸಂಪರ್ಕ ಕಲ್ಪಿಸಲು ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗೂ ಗಡಿಯುದ್ದಕ್ಕೂ ಗೋಡೆ ಕಟ್ಟಲು ನೌಕಾನೆಲೆ ಮುಂದಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಮೂರು ದಿನಗಳ ಹಿಂದೆ ತಡರಾತ್ರಿ ಬೈತಖೋಲ್ ಬಂದರು ವ್ಯಾಪ್ತಿಯಲ್ಲಿ -ಜೆಸಿಬಿಗಳ ಮೂಲಕ ಕಾಮಗಾರಿ ನಡೆಸಲು ಮುಂದಾದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಜೆಸಿಬಿಗಳನ್ನು ವಾಪಸ್​ ಕಳುಹಿಸಿದ್ದರು.

ಸೋಮವಾರ ಸರ್ವೆಗೆ ಆಗಮಿಸಿದ್ದ ನೌಕಾನೆಲೆಯ ಲೆಪ್ಟಿನೆಂಟ್ ಕಮಾಂಡರ್ ರವಿ ಪಾಲ್ ನೇತೃತ್ವದ ತಂಡ ಸ್ಥಳೀಯರೊಂದಿಗೆ ಸಭೆ ನಡೆಸಿತು. ವಾಚ್ ಟವರ್​ಗೆ ಸಂಪರ್ಕ ಕಲ್ಪಿಸಲು ಬೈತಖೋಲ್ ಕಡಲ ತೀರದಿಂದ ಗುಡ್ಡದ ಮೇಲೆ ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗೂ ಗೋಡೆ ನಿರ್ಮಾಣ ಮಾಡುವುದಾಗಿ ತಿಳಿಸಿದರು. ಆದರೆ ಯೋಜನೆ ಬಗ್ಗೆ ಸ್ಪಷ್ಟ ಮಾಹಿತಿ ನೀಡದೇ ಸ್ಥಳೀಯರಿಗೆ ತೊಂದರೆಯಾಗುವಂತಹ ಕಾಮಗಾರಿ ನಡೆಸುವುದಕ್ಕೆ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು.

ಗುಡ್ಡ ಕುಸಿಯುವ ಭೀತಿ:

2009 ರಲ್ಲಿ ನೌಕಾನೆಲೆಯಿಂದ ಇದೇ ಪ್ರದೇಶದಲ್ಲಿ ಗುಡ್ಡ ತೆರವು ಮಾಡಿದ್ದು, ಗುಡ್ಡದ ನೀರು ಹರಿದುಹೋಗಲು ಸಾಧ್ಯವಾಗದೇ ಮಳೆಗಾಲದಲ್ಲಿ ಗುಡ್ಡ ಕುಸಿದು 8-10 ಮನೆಗಳಿಗೆ ಹಾನಿಯಾಗಿತ್ತು. ಆದರೆ ಇದೀಗ ಮತ್ತೆ ಈ ಭಾಗದಲ್ಲಿ ಗೋಡೆ ನಿರ್ಮಾಣದ ಜೊತೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲು ನೌಕಾನೆಲೆ ಮುಂದಾಗಿದ್ದು, ಇದರ ನೇರ ಪರಿಣಾಮ ಮೀನುಗಾರ ಕುಟುಂಬಗಳಿಗೆ ತಟ್ಟಲಿದೆ. ಈ ಭಾಗದಲ್ಲಿ ಸುಮಾರು 200 ಕ್ಕೂ ಹೆಚ್ಚು ಮನೆಗಳಿದ್ದು,ಗೋಡೆ ನಿರ್ಮಾಣವಾದರೆ ನೀರು ಸರಾಗವಾಗಿ ಹರಿದು ಹೋಗಲಾಗದೇ ಗುಡ್ಡದಲ್ಲಿ ಇಂಗಿ ಎಂದಾದರೂ ಕುಸಿಯುವ ಭೀತಿ ಇದೆ ಎಂದು ಸ್ಥಳೀಯರಾದ ವಿಲ್ಸನ್​​ ಫರ್ನಾಂಡಿಸ್ ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ನೌಕಾನೆಲೆ ಸಿಬ್ಬಂದಿಯು ಅವರಿಗೆ ಸಂಬಂಧವೇ ಇಲ್ಲದ ಲೇಡಿಸ್ ಬೀಚ್ ಬಳಿ ಮೀನುಗಾರಿಕೆಗೆ ತೆರಳುವ ಸ್ಥಳೀಯ ಮೀನುಗಾರರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಆದರೆ ಇದೀಗ ಗೋಡೆ ನಿರ್ಮಾಣ ಮಾಡಿಕೊಂಡು ಕಂಪೌಂಡ್ ಕಟ್ಟಿಕೊಂಡರೆ ಮತ್ತೆ ಸುತ್ತಮುತ್ತ ಸುಳಿಯುವುದಕ್ಕೂ ಬಿಡುವುದಿಲ್ಲ. ನೌಕಾನೆಲೆಗೆ ಈಗಾಗಲೇ ವಶಪಡಿಸಿಕೊಂಡ ನೂರಾರು ಎಕರೆ ಭೂಮಿ ಖಾಲಿ ಬಿದ್ದಿದ್ದು, ಅಂತಹ ಪ್ರದೇಶದಲ್ಲಿ ಕಾಮಗಾರಿ ನಡೆಸಲಿ. ಮೀನುಗಾರಿಕಾ ಬಂದರು ಪ್ರದೇಶದ ಬಳಿ ಕಾಮಗಾರಿ ನಡೆಸಿ ಮೀನುಗಾರರಿಗೆ ತೊಂದರೆ ಕೊಡುವುದಕ್ಕೆ ಮೀನುಗಾರರ ವಿರೋಧ ಇದೆ ಎಂದು ಸ್ಥಳೀಯ ಮೀನುಗಾರ ಮುಖಂಡ ಚೇತನ್ ಹರಿಕಂತ್ರ ಹೇಳಿದರು.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕರೆಯುವಂತೆ ಆಗ್ರಹ

ಸ್ಥಳೀಯರಾದ ವಿಕಾಶ್ ತಾಂಡೇಲ್, ರಾಜೇಶ ಮಾಜಾಳಿಕರ್ ಅವರು ಲೆಫ್ಟಿನೆಂಟ್ ಕಮಾಂಡರ್ ಬಳಿ ಸ್ಥಳೀಯರ ಸಮಸ್ಯೆ ಹಾಗೂ ವಿರೋಧದ ಬಗ್ಗೆ ತಿಳಿಸಿ ಯೋಜನೆ ಬಗ್ಗೆ ಸ್ಪಷ್ಟ ಮಾಹಿತಿ ನೀಡುವ ಸಂಬಂಧ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕರೆಯುವಂತೆ ಆಗ್ರಹಿಸಿದರು. ಇದಕ್ಕೆ ಒಪ್ಪಿದ ಲೆ.ಕಮಾಂಡರ್ ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವುದಾಗಿ ತಿಳಿಸಿ ವಾಪಸ್ಸ್ ತೆರಳಿದರು.

ಸುಮಾರು 60 ವರ್ಷಗಳ ಹಿಂದೆ ಈಗಿನ ಬಂದರು ಪ್ರದೇಶದಲ್ಲಿದ್ದ ಮೀನುಗಾರರನ್ನು ಬಂದರು ಇಲಾಖೆ ಒಕ್ಕಲೆಬ್ಬಿಸಿ ಜಾಗವನ್ನು ಪಡೆದುಕೊಂಡಿದೆ. ಆದರೆ ಅದರಲ್ಲಿ 70 ಕುಟುಂಬಗಳ ಹೊರತಾಗಿ ಯಾರಿಗೂ ಕೂಡ ಈವರೆಗೂ ಸೂಕ್ತ ಪರಿಹಾರ, ಪುನರ್ವಸತಿ ಕಲ್ಪಿಸಿಲ್ಲ. ಇಂದಿಗೂ ಕೂಡ ನೆಲೆ ಕಳೆದುಕೊಂಡವರು ಬಂದರು ಪ್ರದೇಶದಲ್ಲಿ ಕಷ್ಟದ ಜೀವನ ನಡೆಸುತ್ತಿದ್ದಾರೆ. ಇಲ್ಲಿ ಇಂತಹ ಯೋಜನೆ ಕೈಗೊಳ್ಳುವ ಮೊದಲು ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button