Uncategorized

ರಾತ್ರಿವೇಳೆ ಕುವೆಂಪು ಪುತ್ಥಳಿ ಸ್ಥಾಪನೆ; ಬೆಳಗ್ಗೆ ಹೊತ್ತಿಗೆ ಮಾಯ!

ಚಿಕ್ಕಮಗಳೂರು: ರಾತ್ರಿವೇಳೆ ದಿಢೀರ್ ಸ್ಥಾಪಿಸಿದ್ದ ಕುವೆಂಪು ಪುತ್ಥಳಿ ಬೆಳಗ್ಗೆ ಹೊತ್ತಿಗೆ ಮಾಯವಾಗಿರುವ ಘಟನೆ ಎನ್ ಆರ್ ಪುರ ಪಟ್ಟಣದಲ್ಲಿ ನಡೆದಿದೆ.

ಇದೆಂಥಾ ಕತೆ, ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರ ವಿರೋಧಿಗಳೂ ಇದ್ದಾರಾ ಎಂದು ನೋಡಿದರೆ ವಾಸ್ತವಾಂಶ ಬೇರೆಯೇ ಆಗಿದೆ. ಎನ್.ಆರ್.ಪುರ ಬೈಪಾಸ್ ವೃತ್ತದಲ್ಲಿ ಪುತ್ಥಳಿ ನಿರ್ಮಾಣದ ಬಗ್ಗೆ ಹಿಂದಿನಿಂದಲೂ ವಿವಾದ ಹೊಗೆಯಾಡುತ್ತಿತ್ತು. ಒಂದೊಂದು ವರ್ಗದ ಜನ ಒಬ್ಬೊಬ್ಬರ ಪುತ್ಥಳಿ ನಿರ್ಮಿಸಬೇಕೆಂದು ಬೇಡಿಕೆ ಇಟ್ಟಿದ್ದರು.

ಹೀಗಿರುವಾಗ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಾಷ್ಟ್ರಕವಿ ಕುವೆಂಪು ಪುತ್ಥಳಿ ಸಾಕು ಎಂದು ನಿರ್ಧರಿಸಿದರು. ಆದರೆ ಪಟ್ಟಣ ಪಂಚಾಯಿತಿಯ ಅನುಮತಿ ಪಡೆಯದೇ ರಾತ್ರೋ ರಾತ್ರಿ ಬೈಪಾಸ್ ವೃತ್ತದಲ್ಲಿ ಕುವೆಂಪು ಪುತ್ಥಳಿ ಹಾಗೂ ಕನ್ನಡ ಧ್ವಜವನ್ನು ಪ್ರತಿಷ್ಠಾಪಿಸಿಯೇ ಬಿಟ್ಟರು.

ಆದರೆ ಬೆಳಕು ಹರಿಯುತ್ತಿದ್ದಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕುವೆಂಪು ಪುತ್ಥಳಿಯನ್ನು ತೆರವುಗೊಳಿಸಿದ್ದಾರೆ. ಅನುಮತಿ ಪಡೆಯದೆ ಪುತ್ಥಳಿ ಸ್ಥಾಪಿಸಿದ್ದರಿಂದ ಅಧಿಕಾರಿಗಳು ತೆರವು ಪ್ರಕ್ರಿಯೆ ನಡೆಸಿದ್ದಾರೆ.

ಆದರೆ ತೆರವುಗೊಳಿಸುವಾಗ ಕುವೆಂಪು ಪುತ್ಥಳಿಯನ್ನು ಕಸದ ಗಾಡಿಯಲ್ಲಿ ಕೊಂಡೊಯ್ದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದಕ್ಕೆ ಕರವೇ ಕಾರ್ಯಕರ್ತರು ಪಟ್ಟಣ ಪಂಚಾಯಿತಿ ಆಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಎನ್.ಆರ್.ಪುರ ಬೈಪಾಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು. ಈ ವೃತ್ತದಲ್ಲಿ ಕುವೆಂಪು ಪುತ್ಥಳಿಯ ಹೊರತು ಬೇರೆ ಯಾರ ಪುತ್ಥಳಿಯೂ ಸ್ಥಾಪಿಸಬಾರದು ಎಂದು ಒತ್ತಾಯಿಸಿ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *

Back to top button