ಅಧಿಕಾರಿಗಳು ಬರದಿದ್ದರೆ ಗ್ರಾಮಸಭೆ ಬಹಿಷ್ಕಾರ; ಕುಂದಾಣ ಗ್ರಾಮಸ್ಥರು, ರೈತ ಮುಖಂಡರ ಎಚ್ಚರಿಕೆ
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲ್ಲೂಕು ಕುಂದಾಣ ಗ್ರಾಮ ಪಂಚಾಯಿತಿಯಲ್ಲಿ 2021- 2022 ಸಾಲಿನ ಮೊದಲ ಹಂತದ ಗ್ರಾಮಸಭೆ ಅಕ್ಟೋಬರ್ 7 ರಂದು ಗುರುವಾರ ನಡೆಯಲಿದ್ದು ಈ ಗ್ರಾಮಸಭೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಾದರೆ ಗ್ರಾಮಸಭೆಗೆ ಬಹಿಷ್ಕಾರ ಹಾಕುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಕುಂದಾಣ ಗ್ರಾಮಸ್ಥರ ಪರವಾಗಿ ಕುಂದಾಣ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ಎಚ್ಚರಿಸಿದೆ.
ದೇವನಹಳ್ಳಿ ತಾಲ್ಲೂಕಿನ ಇತರ ಪಂಚಾಯಿತಿಗಳಲ್ಲಿ ಈಗಾಗಲೇ ನಡೆದಿರುವ ಗ್ರಾಮಸಭೆಗಳಿಗೆ ಅಧಿಕಾರಿಗಳು ಗೈರು ಹಾಜರಾಗಿ ನೆಪಮಾತ್ರಕ್ಕೆಂದು ಗ್ರಾಮಸಭೆಗಳು ನಡೆಯುತ್ತಿದೆ ಎಂಬ ಆರೋಪಗಳನ್ನು ಆಯಾ ಗ್ರಾಮಸಭೆಗಳಲ್ಲಿ ಭಾಗವಹಿಸಿದ ಗ್ರಾಮಸ್ಥರು ಆರೋಪಿಸಿರುವ ಬಗ್ಗೆ ಪತ್ರಿಕೆಗಳಲ್ಲಿಯೂ ಸುದ್ದಿಯಾಗಿರುವ ಹಿನ್ನೆಲೆಯಲ್ಲಿ ಈ ಪತ್ರ ಬರೆಯಲಾಗಿದೆ ಎಂದು ರೈತ ಮುಖಂಡರು ಮತ್ತು ಗ್ರಾಮಸ್ಥರು ತಿಳಿಸಿದ್ದಾರೆ.
ಕುಂದಾಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಸಮಸ್ಯೆಗಳಿದ್ದು ಇಲ್ಲಿನ ನಾಡ ಕಛೇರಿ ಎಲ್ಲಿದೆ? ನಾಡ ಕಛೇರಿಯ ದಾಖಲೆಗಳು ಎಲ್ಲಿವೆ? ಕುಂದಾಣ ನಾಡ ಕಛೇರಿಯ ಅಧಿಕಾರಿಗಳು ಎಲ್ಲಿರುತ್ತಾರೆ? ದಿನನಿತ್ಯ ನಾಡ ಕಛೇರಿಯ ಕೆಲಸ ಎಲ್ಲಿ ನಡೆಯುತ್ತಿದೆ? ಎಂಬುದು ಗೊತ್ತಾಗುತ್ತಿಲ್ಲ ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ.
ನೀರು, ಚರಂಡಿ,ರಸ್ತೆಗಳ ಸಮಸ್ಯೆ, ಸರ್ಕಾರಿ ಪ್ರಾಥಮಿಕ ಶಾಲೆಗೆ ಸ್ವಂತ ಕಟ್ಟಡ ಇಲ್ಲ ದಿರುವುದು, ಅಂಗನವಾಡಿ ಕಟ್ಟಡಗಳು ಶಿಥಿಲಗೊಂಡಿರುವ ಕಾರಣ ಹೊಸ ಕಟ್ಟಡ ನಿರ್ಮಾಣ ಮಾಡಬೇಕು, ಗ್ರಂಥಾಲಯಕ್ಕೆ ಪ್ರತ್ಯೇಕ ಕಟ್ಟಡ ನಿರ್ಮಿಸಬೇಕು, ಗ್ರಂಥಾಲಯಕ್ಕೆ ಎಲ್ಲಾ ರೀತಿಯ ಪುಸ್ತಕಗಳನ್ನು ನೀಡಬೇಕು, ಅಂಚೆ ಕಚೇರಿಗೆ ಸ್ವಂತ ಕಟ್ಟಡ ನಿರ್ಮಿಸಬೇಕು, ಮನೆ ಇಲ್ಲದ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ ನಿವೇಶನ ನೀಡಬೇಕು, ಕುಂದಾಣ ಪಂಚಾಯಿತಿ ಕಛೇರಿಯ ಪಕ್ಕದಲ್ಲೇ ಎಂಎಸ್ಐಎಲ್ ನ ಮದ್ಯದ ಅಂಗಡಿ ಇದ್ದು ಇಲ್ಲಿ ಸುತ್ತಮುತ್ತಲಿನಲ್ಲಿ ಶಾಲೆಗಳು ಕೂಡ ಇರುವುದರಿಂದ ಈ ಮದ್ಯದ ಅಂಗಡಿಯನ್ನು ಊರಿನ ಹೊರಗೆ ಎಲ್ಲಾದರೂ ಮಾಡುವಂತೆ ಕ್ರಮಕೈಗೊಳ್ಳಬೇಕು, ಕುಂದಾಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಜ್ಞ ವೈದ್ಯರನ್ನು ನೇಮಿಸಿ, ಕೊರತೆ ಇರುವ ಸಿಬ್ಬಂದಿಗಳನ್ನು ನೇಮಿಸಬೇಕು,100 ಒಳರೋಗಿ ಹಾಸಿಗೆಗಳನ್ನು ನೀಡಬೇಕು, ಪಶುವೈದ್ಯ ಶಾಲೆಯಲ್ಲಿ ಎಲ್ಲಾ ರೀತಿಯ ಔಷಧೀಗಳು ಲಭ್ಯವಾಗಬೇಕು, ಬಸ್ ನಿಲ್ದಾಣ ನಿರ್ಮಿಸಬೇಕು,
ಎಂಬ ಅಹವಾಲುಗಳನ್ನು ಕೂಡ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ದೇವನಹಳ್ಳಿ ತಾಲ್ಲೂಕು ಉಪಾಧ್ಯಕ್ಷ ವೆಂಕಟೇಶಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರವೀಣ್, ಮಧು, ಮುಖಂಡರುಗಳಾದ ನಾಗರಾಜು, ಅಂಬರೀಶ್, ಶ್ರೀಧರ್, ಮುನಿವೆಂಕಟಪ್ಪ, ತಿಪ್ಪಣ್ಣ, ಮುಂತಾದವರು ಅಧಿಕಾರಿಗಳಿಗೆ ಪತ್ರ ಬರೆದು ನೆನಪಿಸಿರುವ ಬಗ್ಗೆ ಸುದ್ದಿ ಗೋಷ್ಟಿಯಲ್ಲಿ ತಿಳಿಸಿದ್ದಾರೆ.