ಸಮಯಕ್ಕೆ ಸರಿಯಾಗಿ ಬಾರದ ವೇತನ ಆತ್ಮಹತ್ಯೆಗೆ ಯತ್ನಿಸಿದ್ದ ಕೆಎಸ್ಆರ್ಟಿಸಿ ಚಾಲಕ ಚಿಕಿತ್ಸೆ ಫಲಿಸದೇ ಸಾವು
ಬಾಗಲಕೋಟೆ: ಸಮಯಕ್ಕೆ ಸರಿಯಾಗಿ ವೇತನ ಸಿಗದಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕೆಎಸ್ಸಾರ್ಟಿಸಿ ವಾಯುವ್ಯ ವಿಭಾಗದ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ಬಸ್ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆರೂರು ಪಟ್ಟಣದ ನಿವಾಸಿ ಭರಮಪ್ಪ ಗೊಂದಿ( 44) ಮೃತಪಟ್ಟ ಚಾಲಕನಾಗಿದ್ದು, ನವ್ಹೆಂಬರ್ 2ರಂದು ಮನೆಯಲ್ಲಿ ವಿಷ ಸೇವಿಸಿದ್ದನು. ಆಗ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇವತ್ತು ಬೆಳಿಗ್ಗೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಇತ್ತ ಸಮಯಕ್ಕೆ ಸರಿಯಾಗಿ ಸೂಕ್ತವಾಗಿ ವೇತನ ಬಾರದೇ ಲಕ್ಷಾಂತರ ಸಾಲ ತೀರಿಸುವುದು ಹೇಗೆ ಎಂದು ಮನನೊಂದು ವಿಷ ಸೇವನೆ ಮಾಡಿದ್ದನು ಎನ್ನಲಾಗಿದೆ.
ಇನ್ನು ಕೊರೊನಾ ವೇಳೆಯಲ್ಲೂ ಸರಿಯಾಗಿ ವೇತನ ಸಿಕ್ಕಿಲ್ಲ.ಸದ್ಯ ಕೆ ಎಸ್ ಆರ್ ಟಿ ಸಿ ವೇತನ ಎರಡು ಕಂತುಗಳಲ್ಲಿ ಅರ್ಧದಂತೆ ಬರುತ್ತಿತ್ತು.ಇದು ಕುಟುಂಬ ನಿರ್ವಹಣೆಗೂ ಸಾಲುತ್ತಿರಲಿಲ್ಲ.ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ್ದು ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.