Uncategorized

ರಾಣಿ ಚನ್ನಮ್ಮ ವಿವಿ ಅಡಿ ಬಾಗಲಕೋಟೆಯಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಪುನರಾರಂಭಕ್ಕೆ ಕರವೇ ಆಗ್ರಹ

ಬಾಗಲಕೋಟೆ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಾಗಲಕೋಟೆಯಲ್ಲಿನ ಸ್ನಾತಕೋತ್ತರ ಅಧ್ಯಯನ ಕೇಂದ್ರವನ್ನು ಸ್ಥಳಾಂತರಿಸಿದ್ದಕ್ಕೆ ಕರವೇ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಪುನರಾರಂಭಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಬಾಗಲಕೋಟೆ ಜಿಲ್ಲಾಡಳಿತದಲ್ಲಿ ಕರವೇ ಮುಖಂಡರಾದ ಬಸವರಾಜ ಧರ್ಮಂತಿ,ಮಂಜು ಪವಾರ್, ಬಸವರಾಜ ಅಂಬಿಗೇರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

2011-12 ನೇ ಶೈಕ್ಷಣಿಕ ಸಾಲಿನಲ್ಲಿ ಬಾಗಲಕೋಟೆಯಲ್ಲಿ ಶ್ರೀ ಎಸ್. ಆರ್. ಕಂಠಿ, ಅನುಭಾವ ಸಂಗಮ ಸ್ನಾತಕೋತ್ತರ ಕೇಂದ್ರವನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಡಿಯಲ್ಲಿ ಆರಂಭಿಸಿ ಸ್ನಾತಕೋತ್ತರ ಎಂ. ಎಸ್. ಡಬ್ಲ್ಯೂ. ಮತ್ತು ಅರ್ಥಶಾಸ್ತ್ರ ವಿಭಾಗಗಳನ್ನು ಸೂಕ್ತ ಕಟ್ಟಡವಿಲ್ಲದ ಕಾರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ಮಹಾವಿದ್ಯಾಲಯದಲ್ಲಿ ತರಗತಿಗಳನ್ನು ನಡೆಸಲಾಗುತ್ತಿತ್ತು. ಸದರಿ ಸ್ನಾತಕೋತ್ತರ ಕೇಂದ್ರದಲ್ಲಿ ವಿವಿಧ ಅಧ್ಯಯನ ವಿಭಾಗಗಳನ್ನು ಆರಂಭಿಸಿ ಸಮಗ್ರ ಅಭಿವೃದ್ಧಿಗಾಗಿ ಸೂಕ್ತ ಜಮೀನು ಮಂಜೂರು ಮಾಡುವಂತೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರು 25-01-2021ರಂದು ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ಖಾಸಗಿ ಶಿಕ್ಷಣ ಸಂಸ್ಥೆಗಳ ಹಿತಾಸಕ್ತಿ ಕಾಪಾಡುವ ದುರುದ್ದೇಶದಿಂದ ಸ್ನಾತಕೋತ್ತರ ಕೇಂದ್ರಕ್ಕೆ ಜಮೀನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದೇ ಸ್ನಾತಕೋತ್ತರ ಕೇಂದ್ರವನ್ನು ನಿಲ್ಲಿಸಿದ್ದು ಬಾಗಲಕೋಟೆ ಜಿಲ್ಲೆಯ ಸುತ್ತಮುತ್ತಲಿನ ವಿದ್ಯಾರ್ಥಿಗಳನ್ನು ಸ್ನಾತಕೋತ್ತರ ಶಿಕ್ಷಣದಿಂದ ವಂಚಿತರನ್ನಾಗಿಸುತ್ತದೆ ಮತ್ತು ಬಾಗಲಕೋಟೆಯ ಶೈಕ್ಷಣಿಕ ಅಭಿವೃದ್ಧಿಗೆ ಕೊಡಲಿ ಪೆಟ್ಟು ನೀಡಿದೆ. ಅಷ್ಟೇ ಅಲ್ಲದೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರು ಬಾಗಲಕೋಟೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಕಛೇರಿ ಆದೇಶ ಹೊರಡಿಸಿದ್ದಾರೆ ಮತ್ತು ಪ್ರವೇಶಾತಿ ಅಧಿಸೂಚನೆಯಿಂದ ಬಾಗಲಕೋಟೆ ಸ್ನಾತಕೋತ್ತರ ಕೇಂದ್ರವನ್ನು ಕೈಬಿಟ್ಟಿದ್ದು ಮುಳುಗಡೆ ಜಿಲ್ಲೆ ಬಾಗಲಕೋಟೆಗೆ ರಾಜ್ಯ ಸರ್ಕಾರ, ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರಂತರವಾಗಿ ಘೋರ ಅನ್ಯಾಯ ಮಾಡುತ್ತಿದ್ದಾರೆ. ಸಾರ್ವಜನಿಕರ ಹಿತ ಕಾಪಾಡುವುದು ಸರ್ಕಾರಗಳ ಕರ್ತವ್ಯವಾಗಿರಬೇಕು ಆದರೆ ಬಾಗಲಕೋಟೆಯಲ್ಲಿ ಜನಪ್ರತಿನಿಧಿಗಳ ಖಾಸಗಿ ಶಿಕ್ಷಣ ಸಂಸ್ಥೆಗಳ ಹಿತ ಕಾಪಾಡಲು ಸರ್ಕಾರ ಮತ್ತು ಜಿಲ್ಲಾಡಳಿತಗಳು ಬೆಂಬಲಿಸುತ್ತಿರುವುದು ನಿಜಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ಅವಮಾನದ ಪರಮಾವಧಿಯಾಗಿದೆ.ಈ ಹಿಂದೆ ಬಸವೇಶ್ವರ ವಿದ್ಯಾವರ್ಧಕ ಸಂಘಕ್ಕೆ ಶೈಕ್ಷಣಿಕ ಚಟುವಟಿಕೆಗಳಿಗಾಗಿ 253 ಎಕರೆ ಮತ್ತು ಖಾಸಗಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ 100 ಎಕರೆ ಸಾವಿರಾರು ಕೋಟಿ ಬೆಲೆ ಬಾಳುವ ಭೂಮಿಯನ್ನು ಸರ್ಕಾರ ನೀಡಿದೆ ಆದರೆ ಸರ್ಕಾರದ ಅಧೀನದಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಡಿಯಲ್ಲಿ ನಡೆಯುತ್ತಿರುವ ಸ್ನಾತಕೋತ್ತರ ಕೇಂದ್ರಕ್ಕೆ ಜಮೀನು ನೀಡಲು ಸಾಧ್ಯವಿಲ್ಲ ಎಂದರೆ ಸರ್ಕಾರ ಶಾಸಕರ ಮತ್ತು ಅವರ ಅಧೀನದ ಸಂಸ್ಥೆಯ ಹಿತಾಸಕ್ತಿ ಕಾಪಾಡಲು ಇದೆ ಹೊರತು ಮತ ನೀಡಿದ ಬಡ ಜನರ ಹಿತಾಸಕ್ತಿ ಕಾಪಾಡಲು ಅಲ್ಲ ಎಂದು ಸ್ಪಷ್ಟವಾಗಿ ಕಾಣುತ್ತದೆ. ಆದರೆ ಈ ಎಲ್ಲ ಅನ್ಯಾಯಗಳನ್ನು ಕರ್ನಾಟಕ ರಕ್ಷಣಾ ವೇದಿಕೆ, ಬಾಗಲಕೋಟೆ ಜಿಲ್ಲಾ ಘಟಕ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಮತ್ತು ರಾಜ್ಯ ಸರ್ಕಾರ ತಕ್ಷಣವೇ ಬಾಗಲಕೋಟೆಯ ಸ್ನಾತಕೋತ್ತರ ಕೇಂದ್ರಕ್ಕೆ ಜಮೀನು ಮಂಜೂರು ಮಾಡಬೇಕು ಮತ್ತು ಈಗಿನ ಸ್ಥಿತಿಯನ್ನು ಮುಂದುವರೆಸಿ ಪ್ರವೇಶಾತಿ ಅಧಿಸೂಚನೆಯಲ್ಲಿ ಬಾಗಲಕೋಟೆ ಸ್ನಾತಕೋತ್ತರ ಕೇಂದ್ರ ಸೇರಿದಂತೆ ಪುನಃ ಅಧಿಸೂಚನೆ ಹೊರಡಿಸಬೇಕು ಎಂದು ಮನವಿ ಪತ್ರದ ಮೂಲಕ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button