Uncategorized

ಹಾನಗಲ್ ಬೈ ಎಲೆಕ್ಷನ್ ನಲ್ಲಿ ಕೋಮುವಾದಿಗಳಿಗೆ ತಕ್ಕ ಪಾಠ: ಡಿ. ಬಸವರಾಜ್

ದಾವಣಗೆರೆ: ಹಾನಗಲ್ ನಲ್ಲಿ ಹಣದ ಹೊಳೆಯನ್ನೇ ಬಿಜೆಪಿ ಹರಿಸಿತ್ತು. ಜಾತಿ ಜಾತಿಗಳ ನಡುವೆ ಸಂಘರ್ಷ ಏರ್ಪಡುವಂತೆ ಮಾಡಿತ್ತು. ಆದರೂ ಹಾನಗಲ್ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. ಈ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಡಳಿತ ವಿರೋಧಿ ಅಲೆ ಇದೆ ಎಂಬುದಕ್ಕೆ ಉತ್ತಮ ನಿದರ್ಶನ.‌ ಮಾತ್ರವಲ್ಲ ಈ ಫಲಿತಾಂಶ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ಸೂಚನೆ ಆಗಿದೆ. ವಿಧಾನಸೌಧಕ್ಕೆ ಬೀಗ ಜಡಿದು ಹಾನಗಲ್ ನಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದರೂ ಸಹ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರನ್ನು ಗೆಲ್ಲಿಸುವ ಮೂಲಕ ಕೋಮುವಾದಿ ಪಕ್ಷಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಹಾನಗಲ್ ಉಪಚುನಾವಣೆಯ ಫಲಿತಾಂಶದಿಂದ ಬಿಜೆಪಿ ಹೈಕಮಾಂಡ್ ಗೆ ಕಪಾಳ ಮೋಕ್ಷ ಮಾಡಿದಂತಾಗಿದೆ” ಎಂದು ವಿಶ್ಲೇಷಿಸಿದರು.

ಸಿಎಂ ಬಸವರಾಜ್ ಬೊಮ್ಮಾಯಿ ಅವರ ಸ್ವಕ್ಷೇತ್ರ ಶಿಗ್ಗಾಂವ್ ಪಕ್ಕದಲ್ಲಿರುವ ಕ್ಷೇತ್ರ ಹಾನಗಲ್. ಬಿಜೆಪಿಯವರಿಂದ ನೋಟು ಪಡೆದು ಕಾಂಗ್ರೆಸ್ ಗೆ ಜನರು ಮತ ಹಾಕಿದ್ದಾರೆ. ಈ ಮೂಲಕ ಒಳ್ಳೆಯ ಕೆಲಸ ಮಾಡಿದವರ ಕೈ ಹಿಡಿಯುತ್ತಾರೆ ಎಂಬುದನ್ನು ತೋರಿಸಿದ್ದಾರೆ. ಹಾನಗಲ್ ಗೆಲುವು ಆಡಳಿತ ವಿರೋಧಿ ಅಲೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ದೇಶದಲ್ಲಿ ಪೆಟ್ರೋಲ್, ಡೀಸೆಲ್, ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ.‌ ಜನಜೀವನ ದುರ್ಬಲವಾಗಿದೆ. ಈ ಫಲಿತಾಂಶವು ಬೆಲೆ ಏರಿಕೆ ವಿರುದ್ಧ ಎಂಬುದು ಸಾಬೀತಾಗಿದೆ. ದೇಶದಲ್ಲಿ ಅಸ್ಸಾಂ ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳಲ್ಲಿ ಬಿಜೆಪಿಯನ್ನು ಜನರು ತಿರಸ್ಕರಿಸಿದ್ದಾರೆ ಎಂದ ಅವರು ಸಿಂಧಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶೇಕಡವಾರು ಮತಗಳಿಕೆಯಲ್ಲಿ ಸಾಧನೆ ಮಾಡಿದೆ. ಎರಡು ಉಪಚುನಾವಣೆಯಲ್ಲಿ ಬಿಜೆಪಿ ಸರ್ಕಾರಕ್ಕೆ ಜನರು ತಕ್ಕದಾಗಿಯೇ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಿದರು.

ಇನ್ನು ಹಾನಗಲ್ ಚುನಾವಣೆಗೆ ದಾವಣಗೆರೆಯಿಂದ ವೀಕ್ಷಕರಾಗಿ ಹೋಗಿ ಪ್ರಚಾರ ಮಾಡಿದ್ದ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಮಾತನಾಡಿ, ಶ್ರೀನಿವಾಸ್ ಮಾನೆ ಅತ್ಯುತ್ತಮ ಕೆಲಸ ಮಾಡಿದ್ದರು. ಸೋತರೂ ಜನರ ನಡುವೆ ಇದ್ದರು. ಅತ್ಯುತ್ತಮ ಕಾರ್ಯ ಮಾಡಿದ್ದಕ್ಕೆ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ.‌ಶಿವಕುಮಾರ್ ಸೇರಿ ಕಾಂಗ್ರೆಸ್ ನಾಯಕರು ಒಟ್ಟಾಗಿ ಪ್ರಚಾರ ಮಾಡಿದ್ದು ಗೆಲುವಿಗೆ ಕಾರಣವಾಯಿತು ಎಂದು ಹೇಳಿದರು.

ದಾವಣಗೆರೆಯಲ್ಲಿ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಕೊರೊನಾ‌ ಲಸಿಕೆಯನ್ನು ಉಚಿತವಾಗಿ ನೀಡುವ ಮೂಲಕ ಜನರ ಜೀವ ಉಳಿಸಿದ್ದಾರೆ. ಇಂತ ಸಂಕಷ್ಟದ ವೇಳೆಯಲ್ಲಿ ಅತ್ಯುತ್ತಮವಾಗಿ ಜನರಿಗೆ ಸ್ಪಂದಿಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜನರು ಕೈಹಿಡಿಯಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.

Related Articles

Leave a Reply

Your email address will not be published.

Back to top button