Uncategorized

ಐವರು ಕನ್ನಡಿತಿಯರ ಮತ್ತೊಂದು ಸಾಹಸ

ಕಾರವಾರ : ಐವರು ಕನ್ನಡತಿಯರು ಕಾಶ್ಮೀರದಿಂದ ಕಾರವಾರದವರೆಗಿನ “ಶಿಖರದಿಂದ ಸಾಗರದವರೆಗೆ”ಸೈಕಲ್ ಯಾತ್ರೆಯು ಕಾರವಾರದಲ್ಲಿ ಮಂಗಳವಾರ ಸಮಾಪ್ತಿಗೊಂಡಿದೆ. ಈ ಯಾತ್ರೆಯ ಎರಡನೇ ಭಾಗವಾದ ಕಾರವಾರದಿಂದ ಮಂಗಳೂರಿನವರೆಗಿನ ಕಯಾಕಿಂಗ್ ಗೆ ಬುಧವಾರ ಕಾಳಿ‌ ನದಿಯಲ್ಲಿ ಚಾಲನೆ ನೀಡಲಾಯಿತು.

ಮೈಸೂರಿನ ಬಿಂದು ನೇತೃತ್ವದಲ್ಲಿ ಬೆಂಗಳೂರಿನ ಆಶಾ, ಶಿವಮೊಗ್ಗದ ಆಯನೂರಿನ ಧನಲಕ್ಷ್ಮೀ,ಐಶ್ವರ್ಯಾ,ಕೊಡಗಿನ ಪುಷ್ಪಾ”ಶಿಖರದಿಂದ ಸಾಗರದವರೆಗೆ”ಯಾತ್ರೆಯ ಮೊದಲ ಭಾಗವಾಗಿ ಕಾಶ್ಮೀರದಿಂದ ಕಾರವಾರದವರೆಗೆ 3,350 ಕಿ.ಮೀ.ಸೈಕ್ಲಿಂಗ್ ಮಾಡಿಕೊಂಡು ಮಂಗಳವಾರ ಕಾರವಾರಕ್ಕೆ ಭೇಟಿ ನೀಡಿದರು.

ಕರ್ನಾಟಕ ಸರ್ಕಾರದ ಎಸ್‌ಸಿಪಿ,ಟಿಎಸ್‌ಪಿ ಅನುದಾನದಲ್ಲಿ ಇಂಡಿಯನ್ ಮೌಂಟೇನಿಯರಿಂಗ್ ಫೌಂಡೇಶನ್,ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ಸಹಕಾರದೊಂದಿಗೆ ಇವರು ಈ ಯಾತ್ರೆ ಹಮ್ಮಿಕೊಂಡಿದ್ದರು.ಆ.17ರಂದು ಬೆಂಗಳೂರಿನಿಂದ ಹೊರಟ ಯುವತಿಯರು 22 ರಂದು ಕಾಶ್ಮೀರದ 5,425 ಮೀಟರ್ ಎತ್ತರದ ಕೊಲೈಪಿಕ್ ಎಂಬ ಹಿಮಪರ್ವತವನ್ನು ಹತ್ತಿ ಸಾಹಸ ಪ್ರದರ್ಶನ ಮಾಡಿದ್ದರು.ನಂತರ ಸೆ.4ರಿಂದ ಲಡಾಖ್‌ನಿಂದ ಸೈಕಲ್ ಪ್ರಯಾಣ ಆರಂಭಿಸಿದ್ದರು.ಕೇರಳದ ಪ್ರಾನ್ಸಿಸ್ ಹಾಗೂ ಶಬ್ಬಿಬ್ ಮಾರ್ಗದರ್ಶನ ನೀಡಿದ್ದರು. ಮಂಗಳವಾರ ಸಂಜೆ ಗೋವಾ ಮೂಲಕ ಕಾರವಾರ ತಲುಪಿದ ಅವರಿಗೆ ಜಿಲ್ಲಾ ಪಂಚಾಯತಿ ಸಿಇಒ ಪ್ರಿಯಾಂಗಾ ಅವರು ಹಾರ ಹಾಕಿ ಸ್ವಾಗತಿಸಿದರು.

ಇನ್ನು ಬುಧವಾರ ಕಾರವಾರದ ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೇತೃತ್ವದಲ್ಲಿ ಸನ್ಮಾನಿಸಲಾಯಿತು.ಬಳಿಕ ಕಾಳಿ ನದಿಯಲ್ಲಿ‌ ಕಾರವಾರದಿಂದ ಮಂಗಳೂರಿನವರೆಗಿನ ಕಯಾಕಿಂಗ್ ಗೆ ಚಾಲನೆ ನೀಡಲಾಯಿತು.

ಈ ವೇಳೆ ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕಿ ಜಿ.ಗಾಯತ್ರಿ,ತರಬೇತುದಾರ ಪ್ರಕಾಶ ರೇವಣಕರ್,ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ತರಬೇತುದಾರ ಪ್ರಕಾಶ ಹರಿಕಂತ್ರ ಮುಂತಾದವರು ಇದ್ದರು.

Related Articles

Leave a Reply

Your email address will not be published.

Back to top button