ಮಹಾಲಿಂಗಪೂರ ರಂಗಮಂದಿರ ಕಾಮಗಾರಿ ಪರಿಶೀಲಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ
ಬಾಗಲಕೋಟೆ: ಮಹಾಲಿಂಗಪೂರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 3 ಕೋಟಿ ರೂ.ಗಳ ವೆಚ್ಚದಲ್ಲಿ ಜನಪದ ರಂಗಭೂಮಿ ಕಲಾವಿದೆ ಕೌಜಲಗಿ ನಿಂಗಮ್ಮ ಅವರ ಹೆಸರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ರಂಗಮಂದಿರದ ಕಟ್ಟಡ ಕಾಮಗಾರಿಯನ್ನು ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಪರಿಶೀಲಿಸಿದರು.
ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರಕ್ಕೆ ಭೇಟಿ ನೀಡಿ ರಂಗಮಂದಿರ ಪರಿಶೀಲಿಸಿದ ಜಂಟಿ ನಿರ್ದೇಶಕರು ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಕಲಾವಿದರಿಗೆ ಅನುಕೂಲವಾಗುವ ರೀತಿಯಲ್ಲಿ ಆಸನಗಳು, ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ತ್ವರಿತಗತಿಯಲ್ಲಿ ಆಗಬೇಕೆಂದರು. ಕಾಲಮಿತಿಯನ್ನು ನಿಗದಿಪಡಿಸಿ ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಅನುಷ್ಟಾನ ಅಧಿಕಾರಿಗಳಿಗೆ ಸೂಚಿಸಿದರು.
ಕೌಜಲಗಿ ನಿಂಗಮ್ಮ ಬಾಗಲಕೋಟೆ ಜಿಲ್ಲೆಯ ಕಲಾವಿದರಿಗೆ ಮಾತ್ರವಲ್ಲದೇ ಕರ್ನಾಟಕ ಜನಪದ ರಂಗಭೂಮಿ ಪರಂಪರೆಯನ್ನು ಜೀವಂತಗೊಳಿಸಿದ ಮಹಾನ್ ಸಾಧಕಿ. ಯಾವುದೇ ರೀತಿಯ ವಿಳಂಬವಾಗದಂತೆ ಸುಸಜ್ಜಿತವಾಗಿ ನಿರ್ಮಾಣ ಮಾಡುವಂತೆ ಕೆಲವು ಸಲಹೆಗಳನ್ನು ಅಧಿಕಾರಿಗಳಿಗೆ ನೀಡಿದರು.
ಭೇಟಿ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಎನ್.ಹೇಮಾವತಿ, ಜಮಖಂಡಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸೋಮಶೇಖರ ಸಾವನ್, ಕಿರಿಯ ಅಭಿಯಂತರ ವಿಜಯ ಭಜಂತ್ರಿ, ನಾಟಕ ಕಲಾವಿದ ಎಚ್.ಎನ್.ಶೇಬಣ್ಣವರ ಸೇರಿದಂತೆ ಇತರರು ಇದ್ದರು.