ಐಪಿಎಲ್ ಬೆಟ್ಟಿಂಗ್: ಕಲಬುರಗಿ ಪೊಲೀಸರಿಂದ ಮೂವರ ಬಂಧನ
ಕಲಬುರಗಿ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂದೆಯಲ್ಲಿ ತೊಡಗಿದ್ದ ತಂಡವನ್ನು ಪತ್ತೆ ಹಚ್ಚುವಲ್ಲಿ ರೌಡಿ ನಿಗ್ರಹದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ನವೀನ್ ಕುಲ್ಕರ್ಣಿ (31), ಮುಸ್ತಫಾ ಅಹ್ಮದ್ ಅಲಿಯಾಸ್ ಬಾಬಾ (37) ಹಾಗೂ ನಾಗೇಶ ಸಗರಕರ್ (27) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಕಾ ಲೇಔಟ್ ನ ಕಟ್ಟದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂದೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ರೌಡಿ ನಿಗ್ರಹದಳದ ಪಿಎಸ್ಐ ಬಸವರಾಜ್ ಹಿರಿಯ ಅಧಿಕಾರಿಗಳ ಸೂಚನೆಯಂತೆ ದಿಢೀರ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 10 ಮೊಬೈಲ್ ಗಳು, ಒಂದು ಸ್ಯಾಮಸಂಗ್ ಟಿವಿ, ಒಂದು ಲ್ಯಾಪಟಾಪ್, ಒಂದು ಇಟಿಎಸ್ ಕಾರು, ಒಂದು ಬೈಕ್, ನಗದು 3250 ರೂಪಾಯಿ ಸೇರಿ ಸುಮಾರು 4 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಕಲಬುರಗಿ ಜಿಲ್ಲೆ ಮಾತ್ರವಲ್ಲ ಇಡಿ ರಾಜ್ಯ ದೇಶದೆಲ್ಲಡೆ ಇವರ ಜಾಲ ಇರುವದು ಮೇಲ್ನೊಟಕ್ಕೆ ಕಂಡುಬಂದಿದ್ದು, ಬಂದಿತರನ್ನು ವಿಚಾರಣೆಗೆ ಒಳಪಡಿಸಿ ಇನ್ನೂಳಿದವರನ್ನು ಬಂಧಿಸುವದಾಗಿ ಎಎಸ್ಪಿ ಅಂಶುಕುಮಾರ ತಿಳಿಸಿದ್ದಾರೆ.