ಅಕ್ರಮ ಪಡಿತರ ಅಕ್ಕಿ ದಾಸ್ತಾನು ವಶಕ್ಕೆ ಪಡೆದ ಕಲಬುರಗಿ ಅಧಿಕಾರಿಗಳು
ಕಲಬುರಗಿ: ಬಡವರಿಗೆ ದೊರಕಬೇಕಾದ ಪಡಿತರ ಆಹಾರ ಧಾನ್ಯಗಳು ಕಾಳ ಸಂತೆಯಲ್ಲಿ ಮಾರಾಟವಾಗುತ್ತಿವೆ ಎಂಬ ಆರೋಪ ಆಗಾಗ ಕೇಳಿ ಬರುತ್ತಲೇ ಇದೆ. ಈ ನಡುವೆ ಈಗ ಬೃಹತ್ ಪ್ರಮಾಣದಲ್ಲಿ ಪಡಿತರ ಅಕ್ಕಿ ಅಕ್ರಮವಾಗಿ ಶೇಖರಿಸಿಟ್ಟಿರುವ ಪ್ರಕರಣ ಹೊರಬಿದ್ದಿದ್ದು ಆರೋಪಕ್ಕೆ ಸಾಕ್ಷಿ ಸಿಕ್ಕಂತಾಗಿದೆ.
ಕಲಬುರಗಿ ಹೊರವಲಯದ ಕಪನೂರ ಇಂಡಸ್ಟ್ರೀಸ್ ಬಡಾವಣೆಯಲ್ಲಿ ಬೀರಬಟ್ಟಿ ಎಂಬುವವರಿಗೆ ಸೇರಿದ ದಾಲ್ಮಿಲ್ ನಲ್ಲಿ ಅಪಾರ ಪ್ರಮಾಣದ ಅಕ್ರಮ ಪಡಿತರ ಅಕ್ಕಿ ಪತ್ತೆಯಾಗಿವೆ. ಬೀದರ್ ಮೂಲದ ಕಿರಣ್ ಕುಮಾರ ಎಂಬಾತ ದಾಲ್ಮಿಲ್ ಲೀಸ್ಗೆ ಪಡೆದು ಅಕ್ರಮ ಅಕ್ಕಿ ದಾಸ್ತಾನು ಮಾಡುವದು ರಾತ್ರೋರಾತ್ರಿ ನೇರೆ ರಾಜ್ಯಗಳಿಗೆ ಅಕ್ರಮ ಸಾಗಾಟ ಮಾಡುತ್ತಿದ್ದಾನೆ ಎಂಬ ಅಂಶ ಬೆಳಕಿಗೆ ಬಂದಿದೆ. ಅಕ್ರಮ ದಂದೆ ಅರಿತ ದಲಿತ ಸೇನೆ ಸಂಘಟನೆ ಕಾರ್ಯಕರ್ತರು, ಆಹಾರ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಜಂಟಿಯಾಗಿ ದಾಳಿ ನಡೆಸಿದಾಗ ಸುಮಾರು 300 ಕ್ಯೂಂಟಲ್ ನಷ್ಟು ಪಡಿತರ ಅಕ್ಕಿ ಪತ್ತೆಯಾಗಿದೆ. ಪೊಲೀಸರಿಗೆ, ಆಹಾರ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕಡಿವಾನ ಹಾಕುವ ಕೆಲಸ ಮಾಡಿಲ್ಲ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಬಡವರ ಅಕ್ಕಿ ಪರರ ಪಾಲು ಆಗುತ್ತಿವೆ ಅಂತ ದಲಿತ ಸೇನೆ ಮುಖಂಡ ಹನುಮಂತ ಯಳಸಂಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಪಡಿತರ ಆಹಾರ ಧಾನ್ಯಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವ ಬಹುದೊಡ್ಡ ಜಾಲವೆ ಇದೆ. ಅಧಿಕಾರಿಗಳು ಇದರಲ್ಲಿ ಶಾಮೀಲು ಆಗಿದ್ದಾರೆ. ಹೀಗಾಗಿ ಅಕ್ರಮ ತಡೆಗಟ್ಟುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಇದೊಂದಲ್ಲ ಜಿಲ್ಲೆಯಲ್ಲಿ ಇಂತಹ ಹಲವಡೆ ರಾಜಾರೋಷವಾಗಿ ಅಕ್ರಮ ದಂದೆ ನಡೆದಿದೆ. ಬಡವರಿಗೆ ಸೇರಬೇಕಾದ ಅಕ್ಕಿ ನುಂಗಣ್ಣರು ನುಂಗಿ ಹಾಕುತ್ತಿದ್ದಾರೆ ಅಂತ ಸ್ಥಳಿಯರು ಆರೋಪಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನ ಕೇಳಿದ್ರೆ ಗಮನಕ್ಕೆ ಬಂದಿರಲಿಲ್ಲ, ಈಗ ಗಮನಕ್ಕೆ ಬಂದ ತಕ್ಷಣ ದಾಳಿ ನಡೆಸಿ ಅಕ್ರಮ ದಾಸ್ತಾನು ವಶಕ್ಕೆ ಪಡೆಯಲಾಗಿದೆ. ತಪ್ಪಿತಸ್ಥರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವದಾಗಿ ಆಹಾರ ನೀರಿಕ್ಷಕ ಅಂಬರೇಶ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಈ ಹಿಂದೆಯೂ ಇಂತ ಪ್ರಕರಣಗಳು ಪತ್ತೆಯಾಗಿವೆ. ಆದ್ರೂ ಕಾಳ ಸಂತೆಯಲ್ಲಿ ಪಡಿತರ ಆಹಾರ ಧಾನ್ಯಗಳ ಮಾರಾಟ ನಿಲ್ಲುತ್ತಿಲ್ಲ, ಇನ್ನಾದ್ರೂ ಸರ್ಕಾರ ಅಕ್ರಮಕೋರರ ವಿರುದ್ಧ ಕ್ರಠೀಣ ಕ್ರಮ ಕೈಗೊಂಡು ಬಡವರಿಗೆ ಆಗುತ್ತಿರುವ ವಂಚನೆ ತಪ್ಪಿಸಬೇಕಿದೆ..