Uncategorized

ಬನವಾಸಿಯಲ್ಲಿ ಪಂಪ ಅಧ್ಯಯನ ಪೀಠಕ್ಕೆ ಪ್ರಯತ್ನ: ಶಿವರಾಮ್ ಹೆಬ್ಬಾರ್

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಪಂಪ ಅಧ್ಯಯನ ಪೀಠ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ಜೊತೆ ಕರಾವಳಿ ಭಾಗದಲ್ಲಿ ಮೀನುಗಾರಿಕಾ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು. ಅವರು ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ಸೋಮವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಐತಿಹಾಸಿಕ ಬನವಾಸಿಯ ಅಭಿವೃದ್ಧಿ ಪ್ರಾಧಿಕಾರ ಸಿದ್ಧರಾಮಯ್ಯನವರ ಕಾಲದಲ್ಲಿ ಪ್ರಾರಂಭವಾಗಿದೆ. ಆಗ ಐದುಕೋಟಿ ಬಿಡುಗಡೆ ಮಾಡಿದ್ದರು.ಯಡಿಯೂರಪ್ಪ ಸರ್ಕಾರ ಬಂದ ನಂತರ ಒಂದು ಕೋಟಿ ಬಿಡುಗಡೆಯಾಗಿದೆ.ಈಗ ಪ್ರಾಧಿಕಾರಕ್ಕೆ ಯಾವ ಕೆಲಸವಿಲ್ಲ.ಮುಂದಿನ ಬಜೆಟ್ ನಲ್ಲಿ ಅನುಧಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದರು.

ಇನ್ನು ಉತ್ತರ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಸಿಎಂ ಘೋಷಣೆ ಮಾಡಿರುವುದಕ್ಕೆ ನನ್ನ ಬೆಂಬಲವಿದೆ ಎಂದರು.ಜಿಲ್ಲೆಯಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವಿಕಾಸಕ್ಕೆ ಸರ್ಕಾರ ವಿಶೇಷ ಗಮನಹರಿಸಿ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಸಚಿವರು ತಿಳಿಸಿದರು.

ಇಲ್ಲಿನ ಸಂಸ್ಕೃತಿಗೆ ಧಕ್ಕೆಯಾಗದಂತೆ ಕನ್ನಡ ಭಾಷೆಯನ್ನು ಸದೃಢವಾಗಿ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ.ನಾಡಿನ ಸಮೃದ್ಧಿ ಎಂದರೆ ಅದು ಅಭಿವೃದ್ಧಿಯ ಪ್ರತೀಕ. ಅದಕ್ಕೆ ಪೂರಕವಾಗಿ ಅಂದಿನಿಂದ ಇಂದಿನವರೆಗೆ ಆಳಿದ ಸರ್ಕಾರಗಳು ರಾಜ್ಯದ ಅಭಿವೃದ್ಧಿಗೆ ಅವುಗಳದ್ದೇ ಆದ ಕೊಡುಗೆ ನೀಡಿವೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ನಮ್ಮ ಸರ್ಕಾರ ಕನ್ನಡ ನಾಡಿನ ಕಲೆ, ಸಂಸ್ಕೃತಿ, ಭಾಷೆ, ನೆಲ, ಜಲ ಸಂರಕ್ಷಣೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಹಲವಾರು ಕನ್ನಡ ಪರ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಅ.28ರಂದು ಲಕ್ಷ ಕಂಠಗಳ ಗೀತಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜಿಲ್ಲೆಯಲ್ಲಿ ಸುಮಾರು 35 ಸಾವಿರ ಜನ ಭಾಗವಹಿಸಿದ್ದರು. ಕನ್ನಡದ ಗೌರವ ಹೆಚ್ಚಿಸುವ ಕೆಲಸಗಳಿಗೆ ವಿಶೇಷ ಅನುದಾನ ಮೀಸಲಿರಿಸಲಾಗಿದೆ.ಕನ್ನಡ ಭಾಷೆ,ನಾಡು ನುಡಿ ಸಂರಕ್ಷಣೆಗೆ ನಮ್ಮ ಸರ್ಕಾರ ವಿಶೇಷ ಆದ್ಯತೆ ನೀಡಿದೆ ಎಂದು ಶಿವರಾಮ್ ಹೆಬ್ಬಾರ್ ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕಿ ರೂಪಾಲಿ ನಾಯ್ಕ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ಪಿ.ನಾಯ್ಕ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ‌್ಣಮೂರ್ತಿ ವೇದಿಕೆಯಲ್ಲಿದ್ದರು.

Related Articles

Leave a Reply

Your email address will not be published.

Back to top button