Uncategorized

ದಾವಣಗೆರೆಯಲ್ಲಿ ಭಾರೀ ಮಳೆ: ಮನೆಗಳಿಗೆ ನುಗ್ಗಿದ ನೀರು

ದಾವಣಗೆರೆ: ನಗರದಲ್ಲಿ ರಾತ್ರಿ ಸುರಿದ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ಮನೆಗಳಿಗೆ ನೀರು ನುಗ್ಗಿ ದವಸ, ಧಾನ್ಯ ಸಾಮಗ್ರಿಗಳು ನೀರು ಪಾಲಾಗಿದ್ದು, ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆ ನಗರದಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆ ಜನರು ತತ್ತರಿಸುವಂತೆ ಮಾಡಿದೆ. ಮಳೆಯಿಂದ ತೊಂದರೆಗೆ ಒಳಗಾಗಿರುವ ಜನರು ಇದೀಗ ಸ್ಮಾರ್ಟ್ ಸಿಟಿ ಹಾಗೂ ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. ನಿರಂತರವಾಗಿ ಧಾರಾಕಾರ ಮಳೆ ಸುರಿದ ಪರಣಾಮ ದಾವಣಗೆರೆ ನಗರದ 5ನೇ ವಾರ್ಡ್ ನ ಬೂದಾಳ ರಸ್ತೆಯಲ್ಲಿನ ಹಲವು ಮನೆಗಳಲ್ಲಿ ಮೊಣಕಾಲುದ್ದ ನೀರು ನುಗ್ಗಿದೆ. ಇದರಿಂದ ಮನೆಯಲ್ಲಿದ್ದ ಅಕ್ಕಿ ಸೇರಿದಂತೆ ದವಸ ಧಾನ್ಯ ಹಾಸಿಗೆ ನೀರು ಪಾಲಾಗಿದ್ದು, ಪಿಠೋಪಕರಣಗಳು ಹಾಗೂ ಪಾತ್ರೆ ಪಗಡೆಗಳು ನೀರು ಪಾಲಾಗಿವೆ.

ಇನ್ನು, 15ನೇ ವಾರ್ಡ್ ನ ಕುಂದವಾಡ ಬಳಿಯ ಡ್ರೈನೇಜ್ ಬ್ಲಾಕ್ ಆಗಿ ಮನೆಗಳಿಗೆ ನೀರು ನುಗ್ಗಿದ್ದು, ಜನರು ಪರದಾಟ ನಡೆಸಿದ್ದಾರೆ. ಇದೀಗ ರಸ್ತೆ ಹಾಗೂ ಚರಂಡಿಗಳು ನೀರಿನಿಂದ ತುಂಬಿಕೊಂಡಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತೆ ಕಾಣುತ್ತಿವೆ. ಇನ್ನು, ಸರಿಯಾಗಿ ಚರಂಡಿ ಹಾಗೂ ಯುಜಿಡಿ ಕಾಮಗಾರಿ ನಡೆಸದ ಪಾಲಿಕೆ ವಿರುದ್ಧ ಜನರು ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ರಾತ್ರಿ ಇಡೀ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನರು ಜಾಗರಣೆ ಮಾಡಿದ್ದಾರೆ.

ಕೆಲ ಬಡಾವಣೆಗಳಲ್ಲಿ ಮನೆಗಳ ಒಳಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು‌. ಹೇಳಿ ಕೇಳಿ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವ ದಾವಣಗೆರೆಯಲ್ಲಿ ಯಾವ ಸ್ಮಾರ್ಟ್ ಕೆಲಸಗಳು ಸರಿಯಾದ ಸಮಯಕ್ಕೆ ನಡೆಯದೆ ಆಮೆಗತಿಯಲ್ಲಿ ಸಾಗುತ್ತಿದೆ. ಇದರಿಂದಾಗಿ ಮಳೆಗಾಲದಲ್ಲಿ ನೀರು ನುಗ್ಗಿ ಜನರು ಪರದಾಡುವುದು ತಪ್ಪಿಲ್ಲ.

ಪಾಲಿಕೆಯ 15ನೇ ವಾರ್ಡಿನ ಕುಂದುವಾಡ ಬಳಿಯಲ್ಲಿ ಡ್ರೈನೆಜ್ ಬ್ಲಾಕ್ ಪರಿಣಾಮ ಎಲ್ಲರ ಮನೆಯಲ್ಲಿ ನೀರು ನುಗ್ಗಿದ ಪರಿಣಾಮ ಇಂತಹ ಮಳೆಯಲ್ಲೂ ಜನರು ಬೀದಿಯಲ್ಲಿ ನಿಲ್ಲುವಂತಾಯಿತು. ಜನರು ಈ ಹೊತ್ತಲ್ಲಿ ಪಾಲಿಕೆ ಮೊರೆ ಹೋಗುವುದು ಸಾಮಾನ್ಯ. ಆದರೆ, ಪಾಲಿಕೆ ಹೆಲ್ಪ್ ಲೈನ್ ಲಭ್ಯವಿಲ್ಲ, ಅಧಿಕಾರಿಗಳು ಫೋನ್ ತೆಗೆಯುವುದಿಲ್ಲ. ಇಂತಹ ಅವೈಜ್ಞಾನಿಕ ಕಾಮಗಾರಿ,ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ಸ್ಪಂದಿಸದ ಕೆಟ್ಟ ಆಡಳಿತ ವ್ಯವಸ್ಥೆ ವಿರುದ್ಧ ಅಲ್ಲಿನ ನಿವಾಸಿಗಳು ಪಾಲಿಕೆಗೆ ಹಿಡಿಶಾಪ ಹಾಕಿದರು.

Related Articles

Leave a Reply

Your email address will not be published.

Back to top button