ನಾನೇ ಬಸ್ ವ್ಯವಸ್ಥೆ ಮಾಡುವೆ, ಸಿಂಧಗಿ ಜನರ ಸ್ಥಿತಿ ನೋಡಿ ಬನ್ನಿ: ಎಚ್ಡಿಕೆ
ರಾಮನಗರ: ಚನ್ನಪಟ್ಟಣ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ವಿಚಾರದಲ್ಲಿ ನಾನು ಗಂಭೀರವಾಗಿದ್ದೇನೆ. ದಾಖಲೆಗಳೊಂದಿಗೆ ಕಚೇರಿಗೆ ಬಂದಿರುವ ಅರ್ಜಿಗಳು ಎಷ್ಟು. ಆ ಅರ್ಜಿಗಳು ಎಷ್ಟು ಪೆಂಡಿಂಗ್ ಇದ್ದಾವೆ ಅನ್ನೋ ಮಾಹಿತಿ ಬೇಕು ಎಂದು ಚನ್ನಪಟ್ಟಣದಲ್ಲಿ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ವಿಚಾರಕ್ಕೆ ಸಂಬಂದಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಚನ್ನಪಟ್ಟಣದ ಅರಳಾಳುಸಂದ್ರದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕು ಕಚೇರಿಯಲ್ಲಿ ಹಣಕ್ಕಾಗಿ ರೈತರ ಅರ್ಜಿಗಳನ್ನ ಎಷ್ಟು ಪೆಂಡಿಂಗ್ ಇಟ್ಟಿದ್ದಾರೆ ಅನ್ನೋ ದಾಖಲೆ ಕೊಡಲಿ. ನಾನು ಯಾರದೋ ಹೇಳಿಕೆಗೆ ಉತ್ತರ ಕೊಡಲ್ಲ. ಕಾನೂನು ಬಾಹಿರವಾಗಿ ಭೂಮಿ ಹೊಡೆಯುವವರಿಗೆ ನಾನು ಪ್ರೋತ್ಸಾಹ ಎಂದಿಗೂ ಕೊಡೋ ಪ್ರಶ್ನೆಯೇ ಇಲ್ಲ ಎಂದರು.
ಭ್ರಷ್ಟಾಚಾರ ಯಾರೇ ಮಾಡಲಿ. ಅದು ನನ್ನ ಪಕ್ಷದಲ್ಲಿಯೇ ಇರಲಿ, ಬೇರೆ ಪಕ್ಷದಲ್ಲಿಯೇ ಇರಲಿ ಪ್ರೋತ್ಸಾಹ ಕೊಡಲ್ಲ. ಅದರಲ್ಲೂ ಬಡವರ ಹೆಸರಿನಲ್ಲಿ ಭೂಮಿ ಹೊಡೆಯುವವರಿಗೆ ನಾನು ಪ್ರೋತ್ಸಾಹ ಕೊಡಲ್ಲ. ಬಡವರ ಕೆಲಸಕ್ಕಾಗಿ ಮಾತ್ರ ನಾನಿದ್ದೇನೆ ಎಂದು ಪರೋಕ್ಷವಾಗಿ ಸಿಪಿವೈ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕೆ. ವಾಗ್ದಾಳಿ ನಡೆಸಿದ್ದಾರೆ.
ಅಧಿಕಾರಿಗಳು ಹೆದರುತ್ತಿದ್ದಾರೆ. ನಾನು ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ. ಆದರೆ ಅಧಿಕಾರಿಗಳು ಮಾತ್ರ ಹೆದರುತ್ತಿದ್ದಾರೆ. ಯಾವುದಾರೂ ಕಟ್ಟಡದ ವೀಕ್ಷಣೆಗೆ ಹೋಗಬೇಕಾದ್ರೂ ಪ್ರೋಟೋಕಾಲ್ ಅಂತಾರೆ ಎಂದು ಹೆಚ್ಡಿಕೆ ಅಸಮಧಾನ ವ್ಯಕ್ತಪಡಿಸಿದರು.
ಎಲ್ಲದಕ್ಕೂ ಜಿಲ್ಲಾ ಮಂತ್ರಿ ಹಾಗೂ ಇತರೆ ಜನಪ್ರತಿನಿಧಿಗಳಿಗೆ ಹೇಳಬೇಕು ಅಂತಾರೆ. ಇಲ್ಲಿ ಕೆಲಸ ಮಾಡೋಕೆ ಕುಮಾರಸ್ವಾಮಿ ಬೇಕು, ಆದರೆ ಅಧಿಕಾರಿಗಳು ಪ್ರೋಟೋಕಾಲ್ ಅಂತಾರೆ.
ಆದರೆ ನಾನು ಜನರ ಪರವಾಗಿ ಕೆಲಸ ಮಾಡಿ, ಹೆದರಬೇಡಿ ಎಂದು ಹೇಳ್ತೇನೆ ಎಂದರು.
ನಾನು ನಿಮಗೆ ಬಸ್ ಮಾಡಿ ಕೊಡ್ತೀನಿ. ಸಿಂಧಗಿಗೆ ಹೋಗಿ ಬನ್ನಿ. ಅಲ್ಲಿನ ಜನ ಹೇಗೆ ಬದುಕುತ್ತಿದ್ದಾರೆ ನೋಡಿ. ನಾವು ಇಲ್ಲಿ ಅಭಿವೃದ್ಧಿ ಮಾಡಿರುವುದನ್ನು ನೋಡಿ. ನನ್ನ ಖರ್ಚಿನಲ್ಲಿಯೇ ಬಸ್ ಮಾಡಿ ಕೊಡ್ತೇನೆ ಹೋಗಿ ಬನ್ನಿ. ನನ್ನ ಅಭಿವೃದ್ಧಿ ಬಗ್ಗೆ ಟೀಕೆ ಮಾಡುವವರಿಗೆ ನಾನು ಹೇಳ್ತಿದ್ದೇನೆ ಎಂದು ಸವಾಲು ಹಾಕಿದರು.
ನಾನು ಚನ್ನಪಟ್ಟಣ ಶಾಸಕನಾಗಿ 3 ವರ್ಷ ಆಗಿದೆ. ಈ ಮೂರು ವರ್ಷದಲ್ಲಿ ಆಗಿರುವ ಅಭಿವೃದ್ಧಿ ನೋಡಿ. ಕಳೆದ 20 ವರ್ಷದಲ್ಲಿ ಆಗಿದ್ದ ಅಭಿವೃದ್ಧಿಯನ್ನು ನೋಡಿ. ಸುಖಾಸುಮ್ಮನೆ ಟೀಕೆ ಮಾಡಿದರೆ ನಾನು ಸೊಪ್ಪಾಕಲ್ಲ ಎಂದು ವಿರೋಧಿಗಳಿಗೆ ಟಾಂಗ್ ನೀಡಿದ್ರು.
ಕಳೆದ ಅವಧಿಯಲ್ಲಿ ಪ್ರತಿ ಕಾಮಗಾರಿಗೂ ಪೇಮೆಂಟ್ ಹೋಗಬೇಕಿತ್ತು. ಇಲ್ಲದಿದ್ದರೆ ಶಾಸಕರು ಗುದ್ದಲಿ ಇಡಿಯುತ್ತಿರಲಿಲ್ಲ. ಈಗಲೂ ಕೆಲ ಕ್ಷೇತ್ರದಲ್ಲಿ ಈ ರೀತಿ ನಡೆಯುತ್ತಿದೆ. ಇದನ್ನು ನಾನು ಓಪನ್ ಆಗಿ ಹೇಳ್ತೇನೆ ಈ ಬಗ್ಗೆ ಈಗಿರುವ ಗುತ್ತಿಗೆದಾರರನ್ನ ಕೇಳಿ ನೋಡಿ ಎಂದು ಪರೋಕ್ಷವಾಗಿ ಯೋಗೇಶ್ವರ್ ಗೆ ಟಾಂಗ್ ನೀಡಿದರು.
ಜನರಿಗೆ ಗುಣಾತ್ಮಕ ಕೆಲಸ ಮಾಡಿ, ಯಾವುದೇ ಅಪೇಕ್ಷೆ ಇಲ್ಲ ಎಂದಿದ್ದೇನೆ ಇದು ನನ್ನ ನೇಚರ್ ಎಂದು ಹೇಳಿದರು.