Uncategorized

ನಕಲಿ ದಾಖಲೆ ಸೃಷ್ಟಿಸಿ ಗುಜರಾತ್ ಮೂಲದ ಕಂಪನಿಯಿಂದ ಭೂ ಕಬಳಿಕೆ ಆರೋಪ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲ್ಲೂಕು ಕುಂದಾಣ ಹೋಬಳಿಯ ಲಿಂಗಧೀರಗೊಲ್ಲಹಳ್ಳಿಯಲ್ಲಿ ಗುಜರಾತ್ ಕಂಪನಿಯು ರಾಜಕೀಯ ಪ್ರಭಾವ ಬಳಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ 204. ಎಕರೆ13 ಗುಂಟೆ ಜಮೀನನ್ನು ಕಬಳಿಸಿದೆ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಸರ್ಕಾರಿ ಜಮೀನನ್ನು ಉಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮತ್ತು ಭಾರತ್ ಮುಕ್ತಿ ಮೋರ್ಚಾ ಸೇರಿದಂತೆ ಹಲವು ಸಂಘಟನೆಗಳು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಆರೋಪಿಸಿವೆ.

ಕುಂದಾಣ ಹೋಬಳಿಯ ಲಿಂಗಧೀರಗೊಲ್ಲಹಳ್ಳಿಯ ಸರ್ವೇ ನಂ 31 ರಲ್ಲಿ 204 ಎಕರೆ 13ಗುಂಟೆ ಸರ್ಕಾರಿ ಗೋಮಾಳದ ಜಾಗವನ್ನು ರೆವಿನ್ಯೂ ಅಧಿಕಾರಿಗಳು ಸರ್ವೇ ಅಧಿಕಾರಿಗಳು ಮೂಲ ಮಂಜೂರಾತಿದಾರರಿಗೆ ವಂಚಿಸಿ ಅಕ್ರಮವಾಗಿ ಸಾಗುವಳಿ ಚೀಟಿ, ಖಾತಾ, ಪಹಣಿಗಳನ್ನು ಮಾಡಿಕೊಟ್ಟು ಈ ಮೂಲಕ ನಕಲಿಯಾಗಿ ಜನರಲ್ ಪವರ್‌ ಆಫ್ ಅಟಾರ್ನಿ ಪತ್ರಗಳನ್ನು ಸೃಷ್ಟಿಸಿಕೊಂಡು ಗುಜರಾತ್ ಮೂಲದ ಮುಫತ್ ಲಾಲ್ ಎಂಬಾತನ ಒಡೆತನದ ಎಂಎಸ್ ಅರವಿಂದ್ ಹೋಮ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಅಕ್ರಮವಾಗಿ ಮಾರಾಟ ಮಾಡಲಾಗಿದೆ. ದೇವನಹಳ್ಳಿಯಲ್ಲಿ ದಿನನಿತ್ಯ ಇದೇ ರೀತಿಯಲ್ಲಿ ಅಧಿಕಾರಿಗಳು ಮತ್ತು ಪ್ರಭಾವಿಗಳು ಶಾಮೀಲಾಗಿ ಅಕ್ರಮವಾಗಿ ಭೂಕಬಳಿಕೆ ಮಾಡಿದ್ದಾರೆ ಅಲ್ಲದೇ ಇಂತಹ ಹಲವು ಪ್ರಕರಣಗಳು ದೇವನಹಳ್ಳಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಇದಕ್ಕೆ ಸಂಬಂಧಪಟ್ಟಂತೆ ಸರ್ಕಾರ ಈ ಕೂಡಲೇ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಕೀಲರು ಹಾಗೂ ಹಿರಿಯ ಹೋರಾಟಗಾರರಾದ ಸಿದ್ದಾರ್ಥ ಅವರು ದೇವನಹಳ್ಳಿಯಲ್ಲಿ ಭಾರತ್ ಮುಕ್ತಿ ಮೋರ್ಚಾ ಪಕ್ಷದ ಕಛೇರಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ಲಿಂಗಧೀರಗೊಲ್ಲಹಳ್ಳಿಯ ಈ ಭೂಕಬಳಿಕೆಯ ಪ್ರಕರಣವನ್ನು ಕೂಡಲೇ ನ್ಯಾಯಾಂಗ ತನಿಖೆ ನಡೆಸಬೇಕು ಭೂಮಾಫಿಯಾ ಭೂದಲ್ಲಾಳಿಗಳು ಸರ್ಕಾರಿ ಭೂಮಿಯನ್ನು ಕಬಳಿಸಿ ಮಾಡಿರುವ ಈ ಅಕ್ರಮವೂ ಗಂಭೀರ ಸ್ವರೂಪದ ಅಪರಾಧವಾಗಿದ್ದು ಇಲ್ಲಿನ ಭೂಕಳಿಕೆದಾರರು ದೊಡ್ಡ ಮಟ್ಟದಲ್ಲಿ ಪ್ರಭಾವಿಗಳಾಗಿದ್ದು ಸಾಮಾನ್ಯ ಅಧಿಕಾರಿಗಳು ಮತ್ತು ಪೋಲೀಸರ ಮೇಲೆ ಒತ್ತಡ ಹೇರಿ ಇಲ್ಲವೇ ಲಂಚದ ಮೂಲಕ ಪ್ರಕರಣವನ್ನು ಹಳ್ಳ ಹಿಡಿಸುವ ಶಕ್ತಿ ಉಳ್ಳವರಾಗಿರುವುದರಿಂದ ಹಾಲಿ ಅಥವ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಿ ಈ ಬಲಾಢ್ಯ ಭೂಕಬಳಿಕೆದಾರರಿಂದ ಸರ್ಕಾರಿ ಭೂಮಿಯನ್ನು ಉಳಿಸಿ ಇಲ್ಲಿನ ಸ್ಥಳೀಯ ಬಡವರು ಮೂಲ ಮಂಜೂರಾತಿ ದಾರರಿಗೆ ಮತ್ತು ನಿರ್ಗತಿಕರಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಭಾರತ್ ಮುಕ್ತಿ ಮೋರ್ಚಾದ ಮುಖಂಡರು ಮತ್ತು ವಕೀಲರು ಆದ ಯಾಕುಬ್ ಷರೀಫ್ ಅವರು ಸುದ್ದಿ ಗೋಷ್ಟಿಯಲ್ಲಿ ಒತ್ತಾಯಿಸಿದ್ದಾರೆ.

ಈ ಭೂಕಬಳಿಕೆ ಪ್ರಕರಣದ ಬಗ್ಗೆ ಶೀಘ್ರವಾಗಿ ಉನ್ನತ ಮಟ್ಟದ ತನಿಖೆಗೆ ಕ್ರಮ ಕೈಗೊಳ್ಳದಿದ್ದರೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಪ್ರಾಧಿಕಾರದ ಮುಂದೆ ಈ ಭೂಕಬಳಿಕೆಯಿಂದ ನಿರ್ಗತಿಕರಾದ ನೊಂದ ಕುಟುಂಬಗಳ ಸದಸ್ಯರುಗಳ ಸಮೇತ ನಿರಂತರ ಧರಣಿ ಸತ್ಯಾಗ್ರಹವನ್ನು ಹೂಡುವುದು ಅನಿವಾರ್ಯವಾಗಲಿದೆ ಎಂದು ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಸಂಘಟನೆಗಳು ಎಚ್ಚರಿಕೆ ನೀಡಿವೆ.

Related Articles

Leave a Reply

Your email address will not be published. Required fields are marked *

Back to top button