Gomal Encrochment: ಭೂದಾಹಿಗಳಿಂದ ಗೋಮಾಳ ಗುಳುಂ
ಕಿರುಗುಂದ ರಫೀಕ್
ಚಿಕ್ಕಮಗಳೂರು: ಮಲೆನಾಡು ಭಾಗವು ಹಚ್ಚಹಸಿರಿನ ಬೆಟ್ಟಗುಡ್ಡದ ಪ್ರದೇಶವನ್ನು ಹೊಂದಿದ್ದರೂ ಸಹ ಇಲ್ಲಿ ರೈತರು ಸಾಕುವ ಜಾನುವಾರುಗಳು ಮೇವಿಗಾಗಿ ನಿರಂತರ ಪರಿತಪಿಸತೊಡಗಿವೆ. ಮೇವು ಹೊಂದಿಸಲಾಗದೆ ರೈತರು ಜಾನುವಾರು ಸಾಕಲು ಸಾಧ್ಯವಾಗದೆ ಹೈರಾಣಾಗಿದ್ದಾರೆ.
ದನಕರುಗಳ ಮೇವಿಗೆ ಜಾಗವೇ ಇಲ್ಲದಂತಾಗಿದೆ. ಇದ್ದರೂ ತುಂಬಾ ವಿರಳ. ಹಿಂದೆ ಗೋಮಾಳದಲ್ಲಿ ಸ್ವಚ್ಚಂದವಾಗಿ ಮೇಯುತ್ತಿದ್ದ ರಾಸುಗಳು ಇತ್ತೀಚಿನ ದಿನಗಳಲ್ಲಿ ಮೇವಿಗಾಗಿ ಹೊಲ-ಗದ್ದೆ ತೋಟ, ರಸ್ತೆಬದಿ ಸೇರಿದಂತೆ ಅಲ್ಲಿ-ಇಲ್ಲಿ ಅಲೆದಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಇದಕ್ಕೆ ಇತ್ತೀಚಿನ ವರ್ಷಗಳಿಂದ ಅನೇಕ ಭಾಗಗಳಲ್ಲಿ ಗೋಮಾಳ ಭೂಮಿಯನ್ನು ಕೆಲ ಪ್ರಭಾವಿ ಭೂದಾಹಿಗಳು ಒತ್ತುವರಿ ಮಾಡಿಕೊಂಡಿರುವುದೇ ಕಾರಣವಾಗಿದೆ. ಕಪ್ಪದ ಆಸೆಗೆ ಕೆಲ ಅಧಿಕಾರಿಗಳು ಗೋಮಾಳ ಭೂಮಿಯನ್ನು ಒತ್ತುವರಿದಾರರಿಗೆ ದಾಖಲೆ ಮಾಡಿಕೊಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಹಸಿರು ಕಂಡಲ್ಲಿ ಮೇಯಲು ಹೋಗುವ ಜಾನುವಾರುಗಳಿಂದ ಹೊಲ-ಗದ್ದೆ, ತೋಟಗಳು ಹಾಳಾಗತೊಡಗಿವೆ. ತೋಟಗಳ ಮಾಲೀಕರು ಹಾಗೂ ಜಾನುವಾರು ಸಾಕುವ ರೈತರು ಪರಸ್ಪರ ಜಗಳ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ತೋಟಗಳ ಬೇಲಿ ದಾಟಬಾರದೆಂದು ಕೆಲ ರಾಸುಗಳ ಕೊರಳಿಗೆ ದಪ್ಪವಾದ ಮರದ ತುಂಡನ್ನು ಕಟ್ಟಲಾಗುತ್ತಿದೆ. ಅದನ್ನು ಎಳೆದುಕೊಂಡೇ ರಸ್ತೆಬದಿಯಲ್ಲಿ ಮೇವು ಅರಸುತ್ತಾ ಹೋಗುವ ದೃಶ್ಯಗಳು ಕಂಡು ಬರತೊಡಗಿವೆ. ಇದಕ್ಕೆಲ್ಲಾ ಗೋಮಾಳ ಒತ್ತುವರಿಯೇ ಕಾರಣವೆಂದು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ಮಲೆನಾಡು ಭಾಗದಲ್ಲಿ ಸಾಕಷ್ಟು ಅರಣ್ಯಪ್ರದೇಶವಿದೆ. ಅರಣ್ಯದೊಳಗೆ ಮೇವಿಗೆ ಹೋದರೆ ರಾಸುಗಳು ವಾಪಸ್ ಮನೆಗೆ ಬರುವುದು ಅನುಮಾನ. ವಸತಿ ಪ್ರದೇಶಗಳಿಗೇ ಹುಲಿ, ಚಿರತೆಯಂತಹ ಕ್ರೂರಮೃಗಗಳು ಕಾಲಿಡುತ್ತಿರುವಾಗ ಇನ್ನು ಕಾಡಿನೊಳಗೆ ರಾಸುಗಳನ್ನು ಮೇಯಲು ಬಿಟ್ಟರೆ ಉಳಿಗಾಲವಿದೆಯೇ?
ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಇಂತಿಷ್ಟೇ ಪ್ರಮಾಣದ ಗೋಮಾಳ ಇರಬೇಕೆಂಬ ನಿಯಮವಿದೆ. ಸರ್ಕಾರದ ಆದೇಶವಿದೆ. ಆದರೆ ಇಂತಹ ನಿಯಮ, ಆದೇಶಗಳನ್ನು ಅಧಿಕಾರಿಗಳು ಗಾಳಿಗೆ ತೂರಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಒಂದೆಡೆ ಗೋಹತ್ಯೆ ಸಂಪೂರ್ಣ ನಿಷೇಧಕ್ಕೆ ಮುಂದಾಗುತ್ತಿರುವ ಸರ್ಕಾರ, ಗೋವುಗಳನ್ನು ಸಾಕುವ ರೈತರಿಗೆ ನೆರವಾಗಿದೆಯೇ? ಮೇವಿಲ್ಲದೆ ಬೀದಿ ಬೀದಿಗಳಲ್ಲಿ ಅಲೆಯುತ್ತಿರುವ ಗೋವುಗಳು ಮತ್ತು ಸಾಕಲು ಸಾಧ್ಯವಾಗದೆ ಹೈರಾಣಾಗಿರುವ ರೈತರು. ಇವೆಲ್ಲಾ ದುಸ್ಥಿತಿ ನೋಡುತ್ತಿದ್ದರೆ ಇನ್ನುಮುಂದೆ ರೈತರು ದನ ಸಾಕಾಣಿಕೆಯ ಸಹವಾಸಕ್ಕೇ ಹೋಗಲಾರದೇನೋ?